ಬಾಬಾಬುಡನ್​ಗಿರಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ: ಹೈಕೋರ್ಟ್ ನಿರ್ದೇಶನ ಸ್ವಾಗತಿಸಿದ ಸುನಿಲ್​ಕುಮಾರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 28, 2021 | 4:18 PM

ರಾಜ್ಯ ಸರ್ಕಾರ ಒಂದು ಸಮಿತಿ ರಚಿಸಿ, ಅದರ ಅಭಿಪ್ರಾಯ ತೆಗೆದುಕೊಂಡು ಹಿಂದೂ ಅರ್ಚಕರ ನೇಮಕ ಮಾಡಬೇಕು ಎಂಬ ಹೈಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಸುನಿಲ್ ಕುಮಾರ್ ಹೇಳಿದ್ದಾರೆ

ಬಾಬಾಬುಡನ್​ಗಿರಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ: ಹೈಕೋರ್ಟ್ ನಿರ್ದೇಶನ ಸ್ವಾಗತಿಸಿದ ಸುನಿಲ್​ಕುಮಾರ್
ಸಚಿವ ಸುನಿಲ್​ಕುಮಾರ್ ಮತ್ತು ದತ್ತಪೀಠದ ಪ್ರವೇಶ ದ್ವಾರ
Follow us on

ಬೆಂಗಳೂರು: ಬಾಬಾಬುಡನ್​ಗಿರಿಯ ಇನಾಂ ದತ್ತಾತ್ರೇಯಪೀಠದ ಪೂಜಾ ವಿಧಿವಿಧಾನಗಳ ಬಗ್ಗೆ ಹೊಸದಾಗಿ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ.

ಹೈಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಅವರು, ಹಿಂದೂಗಳ ಶ್ರದ್ಧಾಕೇಂದ್ರವಾದ ಚಿಕ್ಕಮಗಳೂರಿನ ಐತಿಹಾಸಿಕ ದತ್ತಾತ್ರೇಯ ಪೀಠ ಕುರಿತಂತೆ ಇವತ್ತು ಘನ ನ್ಯಾಯಾಲಯ ವಿಶೇಷ ತೀರ್ಪು ಕೊಟ್ಟಿದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಹಿಂದೂ ಅರ್ಚಕರ ನೇಮಕ ಮಾಡುವ ಕುರಿತಂತೆ ರಾಜ್ಯ ಸರ್ಕಾರ ಒಂದು ಸಮಿತಿ ರಚಿಸಿ, ಅದರ ಅಭಿಪ್ರಾಯ ತೆಗೆದುಕೊಂಡು ಹಿಂದೂ ಅರ್ಚಕರ ನೇಮಕ ಮಾಡಬೇಕು ಅಂತ ಹೇಳಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.

ಈ ಹಿಂದೆ ಸುಪ್ರೀಂಕೋರ್ಟ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಅವತ್ತಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ, ಹಿಂದೂ ಅರ್ಚಕರ ನೇಮಕಕ್ಕೆ ಬದಲು ಮುಜಾವರ್​ಗಳಿಂದ ಪೂಜೆ ಮುಂದುವರಿಸುವ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸಿತ್ತು. ಭಕ್ತರ ಭಾವನೆಗಳಿಗೆ ಯಾವುದೇ ಬೆಲೆ ಕೊಡದೆ, ಜನಾಭಿಪ್ರಾಯ ಪಡೆಯದೆ ಇಂಥ ನಿರ್ಣಯ ಮಾಡಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೆವು. ನ್ಯಾಯಾಲಯವು ಇಂದು ಹಿಂದೂಗಳ ಪರವಾಗಿ ತೀರ್ಪು ಕೊಟ್ಟಿದೆ. ಈ ರೀತಿಯ ತೀರ್ಪು ಬಂದಿರುವುದು ದಶಕಗಳ ಕಾಲ ಹೋರಾಟ ಮಾಡಿದ ಎಲ್ಲ ಹೋರಾಟಗಾರರಿಗೆ ಸಿಕ್ಕ ಜಯ. ದತ್ತಪೀಠದಲ್ಲಿ ದತ್ತಾತ್ರೇಯರ ಪಾದುಕೆಗಳಿಗೆ ಪ್ರತಿದಿನ ಪೂಜೆ ಮಾಡುವ ಅವಕಾಶ ಎಲ್ಲರಿಗೂ ಸಿಗಲಿ ಅಂತ ನಾನು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ಏನಿದು ವಿವಾದ?
ಚಿಕ್ಕಮಗಳೂರಿನ ಶ್ರೀಗುರು ದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾದಲ್ಲಿ ಮುಜಾವರ್​ಗಳ ಬದಲು ಹಿಂದೂ ಅರ್ಚಕರ ನೇಮಕ ಆಗಬೇಕು ಎಂದು ಬಿಜೆಪಿ ಹಾಗೂ ಸಂಘಪರಿವಾರದ ಅಂಗ ಸಂಸ್ಥೆಗಳು ಒತ್ತಾಯಿಸುತ್ತಿದ್ದವು. 2014ರಲ್ಲಿ ಸುಪ್ರೀಂಕೋರ್ಟ್​ ಸಹ ಹಿಂದೂ ಅರ್ಚಕರ ನೇಮಕಕ್ಕೆ ಸಮ್ಮತಿಸಿ ತೀರ್ಪು ನೀಡಿತ್ತು. ಅದರೆ 2018ರಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಜಾವರ್​ಗಳನ್ನೇ ಮುಂದುವರಿಸಲು ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಸಂವರ್ಧನಾ ಸಮಿತಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಇದೀಗ ಈ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯವು ಪೂಜಾ ವಿಧಿವಿಧಾನ ಕುರಿತು ಹೊಸದಾಗಿ ತೀರ್ಮಾನಿಸಲು ಸೂಚಿಸಿದೆ.

ಇದನ್ನೂ ಓದಿ: ಮತ್ತೆ ಸರ್ಕಾರದ ಅಂಗಳಕ್ಕೆ ಬಾಬಾಬುಡನ್​ಗಿರಿ ದತ್ತಪೀಠ ಪೂಜಾ ವಿಧಾನ ವಿಚಾರ

ಇದನ್ನೂ ಓದಿ: ದತ್ತಪೀಠವನ್ನು ಹಿಂದೂಗಳಿಗೆ ವಹಿಸುವ ಬುದ್ಧಿ ಬಿಜೆಪಿಗೆ ಬರಲಿ: ಪ್ರಮೋದ್​ ಮುತಾಲಿಕ್

(Minister Sunil Kumar welcome High Court Direction on Baba Budangiri Dattatreya Peetha)

 

Published On - 4:16 pm, Tue, 28 September 21