
ಚಿಕ್ಕಮಗಳೂರು, ಫೆಬ್ರವರಿ 05: ಪಶ್ಚಿಮ ಘಟ್ಟಗಳ (Western Ghats) ಸಾಲಿನ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ಮೂಡಿಗೆರೆ (Mudigere) ತಾಲೂಕಿನ ಚಾರ್ಮಾಡಿ ಘಾಟ್ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ತೀವ್ರತೆಗೆ 500 ಎಕರೆಗೂ ಹೆಚ್ಚು ಪ್ರದೇಶದ ಕೋಟ್ಯಂತರ ಮೌಲ್ಯದ ಸಸ್ಯ ಸಂಪತ್ತು ನಾಶವಾಗಿತ್ತು. ಸ್ಥಳೀಯರು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ, ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡ್ಗಿಚ್ಚಿಗೆ ಅಸಲಿ ಕಾರಣವೇನೆಂದು ಪತ್ತೆ ಹಚ್ಚಿದ್ದಾರೆ. ರಾತ್ರಿ ಶಿಕಾರಿಗೆ ತೆರಳಿದ್ದ ಕಿಡಿಗೇಡಿಗಳು ಬೆಂಕಿ ಹಾಕಿರುವ ವಿಚಾರ ಗೊತ್ತಾಗಿದೆ. ಈ ಸಂಬಂಧ ಕರ್ನಾಟಕ ಅರಣ್ಯ ಕಾಯ್ದೆ 24 (ಎ2ಜಿ) ಅಡಿಯಲ್ಲಿ ಮೂಡಿಗೆರೆ ವಲಯ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು, ಕಾಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳ ಪತ್ತೆಗಾಗಿ ಮೂಡಿಗೆರೆ ಆರ್ಎಫ್ಒ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಆರೋಪಿಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಜನವರಿ ಒಂದೇ ತಿಂಗಳಲ್ಲಿ ಎರಡೆರೆಡು ಬಾರಿ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿಯ ಕೆನ್ನಾಲಿಗೆಗೆ 500ಕ್ಕೂ ಹೆಚ್ಚು ಪ್ರದೇಶದ ಅರಣ್ಯ ಸಂಪತ್ತು ಆಹುತಿಯಾಗಿತ್ತು. ಪ್ರಾಣಿ, ಸಸ್ಯ ಸಂಕುಲ ಸುಟ್ಟು ಭಸ್ಮವಾಗಿತ್ತು. ಜನವರಿ 20 ರಂದು ಮೂಡಿಗೆರೆ ತಾಲೂಕಿನ ಬಿದುರುತಳದ ಸಮೀಪ ಚಾರ್ಮಾಡಿಯ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಪ್ರದೇಶದ ಜೊತೆಗೆ ಅಪಾರ ಪ್ರಮಾಣದ ಪ್ರಾಣಿ ಸಂಕುಲ ನಾಶವಾಗಿತ್ತು.
ಬಳಿಕ, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕಾಡ್ಗಿಚ್ಚು ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಸನ್ನದ್ಧರಾಗಿರುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆಯ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದರು.
ಸೂಚನೆ ನೀಡಿದ ಮರು ದಿನವೇ ಜನವರಿ 25 ರಂದು ಮತ್ತೆ ಚಾರ್ಮಾಡಿಯ ಘಾಟಿ ಸುಬ್ರಮಣ್ಯ ದೇವಾಲಯದ ಬಳಿ ಶುಕ್ರವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ನೋಡ ನೋಡ್ತಿದ್ದಂತೆ ಕ್ಷಣಾರ್ಧದಲ್ಲಿಯೇ ಬೆಂಕಿಯ ಕೆನ್ನಾಲಿಗೆ 10 ಕಿಮೀ ದೂರ ವ್ಯಾಪಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಶ್ರಮದಿಂದ ಬೆಂಕಿ ನಂದಿಸಲಾಗಿತ್ತು.
ಅರಣ್ಯಕ್ಕೆ ಬೆಂಕಿ ಬಿದ್ದಿರುವ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ, ಕಿಡಿಗೇಡಿಗಳ ಕೃತ್ಯವನ್ನು ಪತ್ತೆ ಹಚ್ಚಿದ್ದಾರೆ. ಇನ್ನು, ಕಳೆದ 5-6 ವರ್ಷಗಳ ಹಿಂದೆಯೂ ಇದೇ ತರಹದ ಘಟನೆ ಸಂಭವಿಸಿತ್ತು. ಆಗ ಕೂಡ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದರು.
ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ
ಕಡೂರು ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮದಲ್ಲಿನ ಪುಟ್ಟಮ್ಮ ಎಂಬುವವರಿಗೆ ಸೇರಿದ ತೋಟದಲ್ಲಿ ಹೊತ್ತಿಕೊಂಡ ಬೆಂಕಿಗೆ ಶ್ರೀಗಂಧ ಮತ್ತು ಅಡಿಕೆ ಬೆಳೆ ಸುಟ್ಟು ಭಸ್ಮವಾಗಿದೆ. ಬೆಂಕಿಯಿಂದಾಗಿ ತೋಟದಲ್ಲಿ ಬೆಳೆದಿದ್ದ 35ಕ್ಕೂ ಅಧಿಕ ಶ್ರೀಗಂಧದ ಮರ, ಬಾಳೆ, ಅಡಕೆ ಮರಗಳು ಮತ್ತು 180ಕ್ಕೂ ಅಧಿಕ ರಾಗಿ ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾಗಿವೆ.
ಕುರಿಗಾಹಿಗಳು ಬೀಡಿ ಸೇದಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತೋಟದಲ್ಲಿನ ಬೆಳೆದಿದ್ದ ಬೆಳೆ ಕಳೆದುಕೊಂಡು ಪುಟ್ಟಮ್ಮ ಕಂಗಾಲಾಗಿದ್ದು, ಪರಿಹಾರ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.
Published On - 12:55 pm, Wed, 5 February 25