ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಸಿ.ಟಿ. ರವಿ
Datta Jayanti: ಚಿಕ್ಕಮಗಳೂರು ನಗರದಲ್ಲಿ ಶಾಸಕ ಸಿ.ಟಿ.ರವಿ ಭಿಕ್ಷಾಟನೆ. ದತ್ತಜಯಂತಿ ಹಿನ್ನೆಲೆ ಮನೆ ಮನೆಗೆ ತೆರಳಿ ಭಿಕ್ಷಾಟನೆ.
ಚಿಕ್ಕಮಗಳೂರು: ದತ್ತ ಜಯಂತಿ(Datta Jayanti) ಅಂಗವಾಗಿ ನಗರದಲ್ಲಿ ಇಂದು ಬೃಹತ್ ಶೋಭಾಯಾತ್ರೆ ನಡೆಯುತ್ತಿದೆ. ದತ್ತ ಜಯಂತಿ ಅಂಗವಾಗಿ ದತ್ತ ಮಾಲಾಧಾರಿಗಳು ಚಿಕ್ಕಮಗಳೂರಿನಲ್ಲಿ ಮನೆಮನೆಗೆ ತೆರಳಿ ಭಿಕ್ಷಾಟನೆ ಮಾಡುತ್ತಿದ್ದಾರೆ. ದತ್ತ ಮಾಲಾಧಾರಿ ಶಾಸಕ ಸಿ.ಟಿ.ರವಿ(CT Ravi) ಕೂಡ ಭಿಕ್ಷಾಟನೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಬಸವನಹಳ್ಳಿ ಸುತ್ತಮುತ್ತ ಭಿಕ್ಷಾಟನೆ ಮಾಡಿದ್ದಾರೆ. ನಾಳೆ ದತ್ತ ಮಾಲಾಧಾರಿಗಳು ಪಡಿ ಹೊತ್ತು ದತ್ತಪೀಠಕ್ಕೆ ತೆರಳಲಿದ್ದಾರೆ. ಇಂದು ಸಂಜೆ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ 75 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆ ಇದೆ.
ಶೋಭಾಯಾತ್ರೆ ಬಳಿಕ ದತ್ತಪೀಠಕ್ಕೆ ತೆರಳಲಿರುವ ದತ್ತ ಭಕ್ತರು ಬಳಿಕ ದತ್ತಪೀಠದಲ್ಲಿ ಮಾಲೆ ವಿಸರ್ಜನೆ ಮಾಡಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳಿಂದ ದತ್ತಮಾಲಾಧಾರಿಗಳು ಆಗಮಿಸುತ್ತಿದ್ದಾರೆ. ದತ್ತಪೀಠದಲ್ಲಿ ಮೊದಲ ಬಾರಿಗೆ ಹಿಂದೂ ಅರ್ಚಕರಿಂದ ಪೂಜೆ ನಡೆಯಲಿದೆ. 4,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇನ್ನು ಇದೇ ವೇಳೆ ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರು ಹಾಕಿ ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರಕ್ಕೆ ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೆ ಕಾಂಗ್ರೆಸ್ನವರು ಕರೆಯಲಿ. ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ದರೆ ಖಂಡಿತಾ ಕರೆಯಬಹುದು. ನನ್ನನ್ನು ಮುಲ್ಲಾ ಎಂದು ಕರೆಯಲು ಆಗಲ್ಲ, ಹಿಂದೂ ಹುಲಿ ಎನ್ನಬೇಕು. ಮುಲ್ಲಾ ಅಂತಾ ಕರೆದರೆ ಮುಲ್ಲಾಗಳು ಕೂಡ ನನ್ನನ್ನು ಒಪ್ಪಿಕೊಳ್ಳಲ್ಲ. ನಮ್ಮ ಸ್ವಭಾವಕ್ಕೆ ತಕ್ಕಂತೆ ಬಿರುದು ಬರುತ್ತದೆ. ಶಾದಿ ಭಾಗ್ಯ ಮಾಡಿದವರಿಗೆ ಮುಲ್ಲಾ ಹೆಸರು ಅನ್ವಯ ಆಗಲಿದೆ. ಬೆಂಕಿ ಹಾಕಿದ್ರೂ ಕೂಡ ಅಮಾಯಕರು ಅನ್ನೋರಿಗೆ ಅನ್ವಯ ಆಗುತ್ತೆ. ಪ್ರೀತಿಯಿಂದ ಮುಸ್ಲಿಂ ಟೋಪಿ ಹಾಕಿಕೊಳ್ಳುವವರಿಗೆ ಅನ್ವಯ ಆಗುತ್ತೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ದತ್ತಪೀಠದ ಹೋರಾಟದಲ್ಲಿ ಈ ವರ್ಷ ಪುಳಕಿತ ವರ್ಷ
ದತ್ತಪೀಠದಲ್ಲಿ ಮೊದಲ ಬಾರಿಗೆ ಹಿಂದೂ ಅರ್ಚಕರ ಪೂಜೆ-ಮಂಗಳಾರತಿಯ ದರ್ಶನ ಸಿಕ್ಕಿದೆ. ನಾಲ್ಕೈದು ದರ್ಶಕಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಹಿಂದೂಗಳ ಮನದಲ್ಲಿ ಮತ್ತಷ್ಟು ಧಾರ್ಮಿಕ ಭಾವನೆಗಳು ಅರಳಿವೆ. ಬಿಜೆಪಿ ಸರ್ಕಾರ ಬಂದಾಗೆಲ್ಲಾ ಹಿಂದೂಗಳ ಬೇಡಿಕೆಗೆ ಸಹಮತ ನೀಡುತ್ತಿದ್ದೇವೆ. ಮುಜರಾಯಿ ದೇವಸ್ಥಾನದಂತೆ ಎಲ್ಲಾ ಹಿಂದೂ ಧಾರ್ಮಿಕ ಚಟುವಟಿಕೆ ನಡೆಯಬೇಕು. ಪ್ರವಾಸೋದ್ಯಮ ಕ್ಷೇತ್ರದ ಜೊತೆ ಎಲ್ಲಿ ಏನೇನು ಆಗಬೇಕೋ ಅದೆಲ್ಲವನ್ನೂ ಮಾಡ್ತೀವಿ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸುನೀಲ್ ಕುಮಾರ್ ತಿಳಿಸಿದರು.
Published On - 1:14 pm, Wed, 7 December 22