ನಟಿಯರಾಯ್ತು ಈಗ ರಾಜಕಾರಣಿಗಳ ಸರದಿ; ಮೂಡಿಗೆರೆ ಶಾಸಕಿ ನಯನಾ ಮೋಟಮ್ಮಗೂ ಅಶ್ಲೀಲ ಕಾಮೆಂಟ್ ಕಾಟ! ಆರೋಪಿ ಅರೆಸ್ಟ್

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕಿಯ ಬಟ್ಟೆ ವಿಚಾರವಾಗಿ ನಿರಂತರವಾಗಿ ಅವಮಾನಕಾರಿ ಕಾಮೆಂಟ್‌ಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಅವರ ಪಿಎ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೈಬರ್ ಕಿರುಕುಳದ ಬಗ್ಗೆ ನಯನಾ ಮೋಟಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟಿಯರಾಯ್ತು ಈಗ ರಾಜಕಾರಣಿಗಳ ಸರದಿ; ಮೂಡಿಗೆರೆ ಶಾಸಕಿ ನಯನಾ ಮೋಟಮ್ಮಗೂ ಅಶ್ಲೀಲ ಕಾಮೆಂಟ್ ಕಾಟ! ಆರೋಪಿ ಅರೆಸ್ಟ್
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಶ್ಲೀಲ ಕಾಮೆಂಟ್: ಆರೋಪಿ ಬಂಧನ
Edited By:

Updated on: Jan 12, 2026 | 10:49 AM

ಚಿಕ್ಕಮಗಳೂರು, ಜನವರಿ 12: ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಕ್ಟೋಬರ್​ನಲ್ಲೇ ದಾಖಲಾಗಿತ್ತು FIR

ಶಾಸಕಿ ನಯನಾ ಮೋಟಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಎರಡು ಅಧಿಕೃತ ಖಾತೆ ಹೊಂದಿದ್ದಾರೆ. ವೈಯಕ್ತಿಕ ವಿಚಾರ ಹಂಚಿಕೊಳ್ಳಲು ಒಂದು ಖಾತೆಯಾದರೆ ರಾಜಕೀಯ ವಿಚಾರ ಹಂಚಿಕೊಳ್ಳಲು ಮತ್ತೊಂದು ಖಾತೆ. ಖಾಸಗಿ ಪ್ರವಾಸ, ವೈಯಕ್ತಿಕ ವಿಚಾರ ಹಂಚಿಕೊಳ್ಳುತ್ತಿದ್ದ ವೈಯಕ್ತಿಕ ಖಾತೆಯಲ್ಲಿ ಬಟ್ಟೆ ಬಗ್ಗೆ ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್​​ ಮಾಡಿದ್ದಾರೆ. ಈ ಕುರಿತು ಮೋಟಮ್ಮ ಅವರ ಪಿಎ ಸಂಸುದ್ದೀನ್ ಅವರು ಕಳೆದ ಅಕ್ಟೋಬರ್ ತಿಂಗಳಲ್ಲೇ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿಯು ನಿರಂತರವಾಗಿ ಶಾಸಕಿ ಅವರ ಬಟ್ಟೆ ವಿಚಾರವಾಗಿ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವ ಪ್ರಯತ್ನ ನಡೆಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಶಾಸಕಿ ಆಕ್ರೋಶ

ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆಯ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್‌ನನ್ನು ಬಂಧಿಸಲಾಗಿದೆ. ಆರೋಪಿಯು ಶಾಸಕಿ ವಿರುದ್ಧ ಮರುಮರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದು, ಅವರ ಗೌರವಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಶಾಸಕಿ ನಯನಾ ಮೋಟಮ್ಮ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ನನ್ನನ್ನು ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಕೆಲವರು ಇಳಿಯುತ್ತಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ ರಮ್ಯಾ, ವಿಜಯಲಕ್ಷ್ಮಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ

ಈ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಮಹಿಳಾ ವಿರೋಧಿ ಮನೋಭಾವವನ್ನು ನಾನು ವಿರೋಧಿಸುತ್ತೇನೆ. ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ವೇಶ್ಯೆ ಎನ್ನುವ ಮಟ್ಟಕ್ಕೂ ಇಳಿಯುತ್ತಾರೆ. ಡಿಪಿ ಇಲ್ಲದ ಪ್ರೊಫೈಲ್ ಇಟ್ಟುಕೊಂಡು ಕಾಮೆಂಟ್ ಮಾಡುತ್ತಾರೆ. ಬಹುಶಃ ಒಂದು ದಿನ ನಾನವರನ್ನು ಎದುರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 10:48 am, Mon, 12 January 26