ಕಲಬುರಗಿ: ಚಿಕ್ಕಮಗಳೂರು ಜಿಲ್ಲೆಯ (chikmagalur) ಎನ್. ಆರ್. ಪುರ ತಾಲೂಕಿನ ಸಾತ್ಕೊಳಿ ಬಳಿ ನೀರಿನಲ್ಲಿ ಕಾರು ಸಮೇತ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿರುವ ಬೆನ್ನಿಗೆ ಕಲಬುರಗಿ ಜಿಲ್ಲೆ (kalaburagi) ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ನಿನ್ನೆ ಸಂಜೆ ವ್ಯಕ್ತಿಯೋರ್ವ ನೀರು ಪಾಲಾಗಿದ್ದಾರೆ. ಸೇತುವೆ ಮೇಲೆ ಕುಳಿತು ನದಿಯಲ್ಲಿ ಬಲೆ ಬೀಸಿದ್ದ ಶೇಖ್ ಅಹ್ಮದ್ ಈ ವೇಳೆ ಬಲೆ ಜೊತೆ ಆಯಾ ತಪ್ಪಿ ತುಂಬಿ ಹರಿಯುತ್ತಿರುವ ನದಿ ನೀರಿನಲ್ಲಿ ಜಾರಿಹೋಗಿದ್ದಾನೆ. ಕಾಗಿಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿರೋ ಶೇಖ್ ಅಹ್ಮದ್ ಚಿತ್ತಾಪುರ ಪಟ್ಟಣದ ನಿವಾಸಿ. ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ನಡೆದಿದೆ. ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ( Karnataka Rains).
ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಮಳೆಯಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ 50 ಅಡಿ ಉದ್ದದ ಗೋಡೆ ಕುಸಿದು ಬಿದ್ದಿದೆ. ಕೊಡಗು ಜಿಲ್ಲೆ
ಕೃಷ್ಣ ನದಿಗೆ ಭಾರಿ ನೀರು, ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಖಡಕ್ ಆದೇಶ
ಬಸವಸಾಗರ ಡ್ಯಾಂನಿಂದ ಕೃಷ್ಣ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆ ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಖಡಕ್ ಆದೇಶ ಜಾರಿಯಾಗಿದೆ. ಆದರೂ ಜಿಲ್ಲಾಡಳಿತದ ಆದೇಶಕ್ಕೆ ಜನ ಡೋಂಟ್ ಕೇರ್ ಅನ್ನುತ್ತಿದ್ದಾರೆ. ನದಿ ಉಕ್ಕಿ ಹರಿಯುತ್ತಿದ್ದರೂ ಮಹಿಳೆಯರು ದಡದಲ್ಲಿಯೇ ಬಟ್ಟೆ ತೊಳೆಯುತ್ತಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿ ಬಳಿ ಗ್ರಾಮದ ಮಹಿಳೆಯರಿಂದ ನದಿ ದಡದಲ್ಲಿ ಈ ದುಸ್ಸಾಹಸ ಕಂಡುಬಂದಿದೆ. ಆದರೂ ಸ್ಥೃಳೀಯ ಪೊಲೀಸರು ಮಹಿಳೆಯರನ್ನ ನದಿ ದಡದಿಂದ ಹೊರ ಕಳುಹಿಸುತ್ತಿದ್ದಾರೆ. ಸುರಪುರ ಠಾಣೆಯ ಪೊಲೀಸರಿಂದ ಮಹಿಳೆಯರಿಗೆ ವಾರ್ನ್ ರವಾನೆಯಾಗಿದೆ. ನದಿ ದಡಕ್ಕೆ ಜನ ಬಾರದ ರೀತಿಯಲ್ಲಿ ಟೇಪ್ ಅಳವಡಿಸಿ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಭಾರೀ ಮಳೆಗೆ ಮನೆ ಗೋಡೆ ಕುಸಿದು ನಾಲ್ವರಿಗೆ ಗಾಯ
ಶಿವಮೊಗ್ಗದಲ್ಲಿ ಮಳೆ ಆವಾಂತರ ಮುಂದುವರಿದಿದೆ. ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಸಮೀಪದ ಗೌಳಿ ನಗರದಲ್ಲಿ ಬೆಳಗಿನ ಜಾವ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿ ಮಲಗಿದ್ದವರ ಮೇಲೆ ಗೋಡೆ ಬಿದ್ದು ನಾಲ್ವರಿಗೆ ಗಾಯಗಳಾಗಿವೆ, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೌಳಿನಗರದ ಬಿಬಿ ಜಾನ್ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಗೋಡೆ ಕುಸಿತದಿಂದ ಬಿಬಿ ಜಾನ್ ( 55), ಸಾಧಿಕ್ (6), ಉಮರ್ (7) ಹಾಗೂ ಅಬ್ದುಲ್ ಎಂಬುವರಿಗೆ ಗಾಯಗಳಾಗಿವೆ. ಮನೆ ಕುಸಿತ ಸ್ಥಳ ಹಾಗೂ ಆಸ್ಪತ್ರೆಗೆ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ ಇತರೆ ಭಾಗಗಳಲ್ಲೂ ಮಳೆ ಅವಾಂತರ ಹೆಚ್ಚಿದ್ದು, ಭದ್ರಾವತಿ ತಾಲೂಕಿನ ಕಾಚಾಗೊಂಡನಹಳ್ಳಿ ಗ್ರಾಮದಲ್ಲಿ ಮನೆ ಕುಸಿದು ವೃದ್ದೆ ಭಾಗ್ಯಮ್ಮ (62) ಸಾವನ್ನಪ್ಪಿದ್ದಾರೆ. ಮನೆ ಕುಸಿತದ ಭಯಾನಕ ಕ್ಷಣವನ್ನು ಸಂತ್ರಸ್ತರ ಕುಟುಂಬದ ಸದಸ್ಯರು ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ.
ಮೃತ ಮಹಿಳೆಯ ಮಗ ಮತ್ತು ಸೊಸೆಯಂದಿರು ಹೇಳಿದಂತೆ ನಿನ್ನೆ ಸೋಮವಾರ ರಾತ್ರಿ ಊಟದ ಸಮಯದಲ್ಲಿ ಈ ಅನಾಹುತವಾಗಿದೆ. ಮಂಚದ ಮೇಲೆ ಕುಳಿತ ವೃದ್ದೆ ಭಾಗ್ಯಮ್ಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಗೋಡೆಯಡಿ ಸಿಲುಕಿದ ಮಗ ಕೃಷ್ಣಮೂರ್ತಿ ಅವರನ್ನು ಗ್ರಾಮಸ್ಥರು ಬಚಾವ್ ಮಾಡಿದ್ದಾರೆ. ಮನೆಯಲ್ಲಿ ಇಬ್ಬರು ಸೊಸೆಯಂದಿರು.. ಇಬ್ಬರು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳಿದ್ದರು. ಒಟ್ಟು 9 ಸದಸ್ಯರಲ್ಲಿ 8 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೂರ್ಣ ಮನೆ ಕುಸಿದು ಬಿದ್ದಿದ್ದರೆ ದೊಡ್ಡ ದುರ್ಘಟನೆ ನಡೆಯುತ್ತಿತ್ತು. ಬಡ ಕುಟುಂಬ ಮನೆ ಕಳೆದುಕೊಂಡು ಬೀದಿಗೆ ಬಂದಿದೆ. ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ಗೋಡೆ ಕುಸಿತದಿಂದ ವೃದ್ದೆ ಭಾಗ್ಯಮ್ಮ ಸಾವು ಸಂಭವಿಸಿದ್ದು, ಮನೆಗೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ವರ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ಸರಕಾರದಿಂದ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಿದ್ದಾರೆ.