ಚಿಕ್ಕಮಗಳೂರು: ರಜೆ ಮುಗಿಸಿ ಸೇನೆಗೆ ಹಿಂದಿರುಗುವಾಗ ಬಿಹಾರದ ಕಿಶನ್ ಗಂಜ್ ಎಂಬ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದ ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದ ಯೋಧ ಗಣೇಶ್(Soldier Ganesh) ಪಾರ್ಥೀವ ಶರೀರಕ್ಕೆ ಸಾವಿರಾರು ಜನ ಅಂತಿಮ ದರ್ಶನ ಸಲ್ಲಿಸಿದ್ದಾರೆ. ನಿನ್ನೆ ರಾತ್ರಿ ಜಿಲ್ಲೆಗೆ ಬಂದ ಮೃತದೇಹವನ್ನ ಸಾರ್ವಜನಿಕರು ಬೈಕ್ ರ್ಯಾಲಿ ಮೂಲಕ ಬರಮಾಡಿಕೊಂಡಿದ್ದರು.
ಇಂದು ಬೆಳಗ್ಗೆ ಜಿಲ್ಲಾಸ್ಪತ್ರೆಯಿಂದ ಹೊರಟ ಮೃತದೇಹಕ್ಕೆ ಮಲೆನಾಡಿಗರು ಮೆರವಣಿಗೆ ಮೂಲಕ ಖಾಂಡ್ಯ ಸಮೀಪದ ಸಂಗಮೇಶ್ವರಪೇಟೆಗೆ ಆಗಮಿಸಿದ್ದಾರೆ. ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿದ್ದು, ಸಾವಿರಾರು ಜನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ನಿವೃತ್ತ ಸೈನಿಕರು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಮೃತ ಯೋಧನ ಅಂತಿಮ ದರ್ಶನ ಮಾಡಿದರು. ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಸಾರ್ವಜನಿಕ ಅಂತಿಮ ದರ್ಶನದ ಬಳಿಕ ಯೋಧನ ಸ್ವಗ್ರಾಮಕ್ಕೆ ಮಸಿಗದ್ದೆಗೆ ತೆರಳಲಿರುವ ಪಾರ್ಥೀವ ಶರೀರಕ್ಕೆ ಮನೆ ಬಳಿ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ ಬಳಿಕ ಮನೆ ಹಿಂಭಾಗದ ಜಮೀನಿನಲ್ಲಿ ಅಂತ್ಯ ಸಂಸ್ಕಾರದ ಅಂತಿಮ ಕ್ರಿಯೆ ನಡೆಯಲಿದೆ. ಜಿಲ್ಲಾಡಳಿತದ ಅಧಿಕಾರಿಗಳು, ಸಿ.ಎಂ.ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಶಾಸಕ ರಾಜೇಗೌಡ ಸ್ಥಳದಲ್ಲಿದ್ದು ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಸೇನೆ ಅಧಿಕಾರಿಗಳ ಮುಂದಾಳತ್ವದಲ್ಲಿ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ತಾಯ್ನಾಡಿಗೆ ಬಂದ ಯೋಧ ಗಣೇಶ್ ಪಾರ್ಥಿವ ಶರೀರ; ರಸ್ತೆ ಮೂಲಕ ಸ್ವಗ್ರಾಮಕ್ಕೆ ತೆರಳಲಿರುವ ಮೃತದೇಹ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಸೇನಾ ಕರ್ತವ್ಯಕ್ಕೆ ತೆರಳುತ್ತಿದ್ದ ಯೋಧ ಗಣೇಶ್!
ಏಪ್ರಿಲ್ 24ರಂದು ರಜೆ ನಿಮಿತ್ತ ಯೋಧ ಗಣೇಶ್, ಸೇನೆಯಿಂದ ಗ್ರಾಮಕ್ಕೆ ಬಂದಿದ್ರು. ಒಂದೂವರೆ ತಿಂಗಳು ಕುಟುಂಬದೊಂದಿಗೆ ಸಮಯ ಕಳೆದು ಜೂನ್ 12ರಂದು ಕರ್ತವ್ಯಕ್ಕೆ ಹಾಜರಾಗಬೇಕಿದ್ದರಿಂದ ಗುರುವಾರವಷ್ಟೇ (ಜೂನ್ 9) ಬೆಂಗಳೂರು ಮೂಲಕ ಅಸ್ಸಾಂನ ಗುವಾಹಟಿಗೆ ಹಿಂದಿರುಗುತ್ತಿದ್ರು. ಆದರೆ ದುರಂತ ಅಂದ್ರೆ ರೈಲಿನಲ್ಲಿ ಬೆಂಗಳೂರಿನಿಂದ ಬಿಹಾರ ಮೂಲಕ ಅಸ್ಸಾಂ ತಲುಪುವ ಮೊದಲೇ ಯೋಧ ಗಣೇಶ್ ಸಾವನ್ನಪ್ಪಿದ್ದಾರೆ. ಬಿಹಾರದ ಕಿಶನ್ ಗಂಜ್ ರೇಲ್ವೆ ನಿಲ್ದಾಣದ ಲಗೇಜ್ ರೂಂನಲ್ಲಿ ಗಣೇಶ್ ಅವರ ಬ್ಯಾಗ್ ಪತ್ತೆಯಾಗಿವೆ. ಈ ರೇಲ್ವೆ ನಿಲ್ದಾಣದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಗಣೇಶ್ ಅವರ ಮೃತದೇಹ ಸಿಕ್ಕಿದೆ. ಹೋಗುವ ವೇಳೆ ಯೋಧ ಗಣೇಶ್ ಅವರ ಬಳಿ 30 ಸಾವಿರಕ್ಕೂ ಅಧಿಕ ಹಣ ಇತ್ತು, ಈ ಹಣವನ್ನ ನೋಡಿಯೇ ಯಾರಾದ್ರೂ ಗಣೇಶ್ ಅವರ ಪ್ರಾಣಕ್ಕೆ ಕುತ್ತು ತಂದಿರಬಹುದಾ ಅನ್ನೋದು ಸದ್ಯದ ಯಕ್ಷಪ್ರಶ್ನೆಯಾಗಿದೆ.
14 ವರ್ಷದಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ!
ಯೋಧ ಗಣೇಶ್ ಕಳೆದ 14 ವರ್ಷದಿಂದ ಸೇನೆಯಲ್ಲಿರುವ 4 CORPS ಸಿಗ್ನಲ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ರು. ಸೇನೆ, ದೇಶದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಗಣೇಶ್ ಅವರಿಗೆ ಸೈನಿಕನಾಗಬೇಕು ಅನ್ನೋ ಹಂಬಲ ಚಿಕ್ಕದಾಗಿನಿಂದಲೂ ಇತ್ತು. ಹಾಗಾಗಿಯೇ ಪಿಯುಸಿ ಆಗುತ್ತಲೇ ಸೇನೆಗೆ ಸೇರಿಕೊಂಡು ತನ್ನ ಕನಸನ್ನ ನನಸು ಮಾಡಿಕೊಂಡಿದ್ರು. ಇನ್ನೂ ಹಲವು ವರ್ಷ ಸೇನೆಯಲ್ಲಿ ಮುಂದುವರಿಯಬೇಕು ಅನ್ನೋ ಮಹತ್ವಕಾಂಕ್ಷೆ ಕಾಫಿನಾಡಿನ ಯೋಧನದ್ದಾಗಿತ್ತು. ಆದ್ರೆ ವಿಧಿ ಮಾತ್ರ ಅದಕ್ಕೆ ಅವಕಾಶ ಕೊಡದೇ ಇರೋದು ನಿಜಕ್ಕೂ ದುರಂತವೇ ಸರಿ.
Published On - 12:49 pm, Thu, 16 June 22