ಚಿಕ್ಕಮಗಳೂರು: ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಇಲ್ಲಿನ ಅದೆಷ್ಟೋ ಸತ್ಯಗಳಿಗೆ ಕಾರಣ ಹುಡುಕ ಹೊರಟರೆ ಸೋಲು ಕಟ್ಟಿಟ್ಟ ಬುತ್ತಿ. ಭೂಗರ್ಭದ ಒಡಲಾಳದಲ್ಲಿ ಅಡಗಿರುವ ಒದೊಂದು ಸತ್ಯ ಹೊರಬಂದಾಗಲು ದೇವರಿರೋದು ಸತ್ಯ ಅನಿಸುತ್ತದೆ. ಇದಕ್ಕೆ ಉದಾಹರಣೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾನಳ್ಳಿ. ಆ ಊರಿನ ಜಾತ್ರೆಯನ್ನು ನೋಡಿದರೆ ಎಂತವರು ಒಮ್ಮೆ ಮೂಕವಿಸ್ಮಿತರಾಗುತ್ತಾರೆ. ಹೌದು ಇಲ್ಲೊಂದು ಹುತ್ತ ಇದೆ. ಈ ಹುತ್ತಕ್ಕೆ (Termitarium) ಸೂರಿಲ್ಲ. ತಡೆಗೋಡೆಗಳೂ ಇಲ್ಲ. ಆದರೂ ಮಳೆ-ಗಾಳಿಗೆ ಒಂದಿಂಚು ಕರಗಿಲ್ಲ. ಹುತ್ತದ ಸುತ್ತಲೂ ಕಲ್ಲು-ಸಿಮೆಂಟ್‌ಗಳಿಂದ ಬಂದೋಬಸ್ತ್ ಮಾಡಿದರೂ ಕೂಡ ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯ ದಿನ ಮಹಾಮಂಗಳಾರತಿ ವೇಳೆ ಇಲ್ಲಿ ನಡೆಯುವ ವಿಚಿತ್ರ ಅನುಭವ ಎಂತಹ ನಾಸ್ತಿಕರನ್ನು ಕೂಡ ಆಸ್ತಿಕರನ್ನಾಗಿಸುತ್ತದೆ. ಏನಿದು ಹುತ್ತದ ಪವಾಡ ಅಂತೀರಾ ಈ ವರದಿ ಒಮ್ಮೆ ಓದಿ.
ದನ ಕಾಯುವ ಹುಡುಗರು ಕಟ್ಟಿದ ಮಣ್ಣಿನ ಗೂಡು ಇಂದು ಸಾವಿರಾರು ಭಕ್ತರ ಇಷ್ಟದೈವವಾಗಿದೆ. ಹೊಯ್ಸಳರ ಕಾಲದಿಂದಲೂ ನಡೆದು ಬರುತ್ತಿರುವ ಆಚರಣೆಗೆ 400 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ದೀಪಾವಳಿ ಅಮಾವಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯಂದು ನಡೆಯುವ ಉತ್ಸವದಲ್ಲಿ ಮಹಾಮಂಗಳಾರತಿ ವೇಳೆ ಈ ಹುತ್ತ 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತದೆ. ಹೌದು, ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾನಳ್ಳಿಯಲ್ಲಿ ನಡೆಯುವ ಉಣ್ಣಕ್ಕಿ ಉತ್ಸವ. ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವಿಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದ್ದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ. ಈ ಹುತ್ತಕ್ಕೆ ಸೂರಿಲ್ಲ. ಮಳೆ-ಗಾಳಿಗೆ ಕರಗಿಲ್ಲ. ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಈ ಪವಾಡವನ್ನು ನೋಡಲೆಂದು ಬಂದವರು ನಾಗಪ್ಪನ ಭಕ್ತರಾಗಿ ಪ್ರತಿ ವರ್ಷ ಬರುತ್ತಿದ್ದಾರೆ.
ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನು ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಡುವ ವಾಡಿಕೆ ಇಲ್ಲಿದೆ. ಇದರಿಂದ ಊರಿನ ದನಕರುಗಳು ಆರೋಗ್ಯದಿಂದಿದ್ದು, ಯಾವುದೇ ಅನಾಹುತಗಳು ನಡೆಯುವುದಿಲ್ಲ ಎನ್ನುವುದು ನಂಬಿಕೆ. ದನ ಕಾಯುವ ಹುಡುಗರು ಕಟ್ಟಿದ ಹುತ್ತವಾದ್ದರಿಂದ ಕರುವನ್ನು ಕಾಡಿಗೆ ಹೊಡೆಯುವ ಆಚರಣೆ ಬೆಳೆದು ಬಂದಿದೆ.
ಉತ್ಸವದ ದಿನ ಕರುವನ್ನು ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ ಹಾಕುತ್ತಾರೆ. ಹರಕೆ ಕಟ್ಟಿಕೊಂಡರೆ ಎಂತಹ ಕಷ್ಟವೂ ಕಳೆಯುತ್ತದೆ ಎಂಬ ನಂಬಿಕೆ ಇಲ್ಲಿದೆ. ಪ್ರತಿವರ್ಷ ದೀಪಾವಳಿಯ ನಂತರದ ಮಕ್ಕಳ ಹುಣ್ಣಿಮೆಯ ಗುರುವಾರ ಅಥವಾ ಭಾನುವಾರ ಈ ಉತ್ಸವ ನಡೆಯಲಿದೆ. ಚರ್ಮರೋಗ, ಮಕ್ಕಳಾಗದವರು, ದನಕರು ಸಾಯುತ್ತಿದ್ದರೆ ಅಥವಾ ಆರೋಗ್ಯ ಹದಗೆಟ್ಟಿದ್ದರೆ ಇಲ್ಲಿಗೆ ಹರಕೆ ಕಟ್ಟಿದರೆ ಸಾಕು ವರ್ಷದೊಳಗೆ ಆ ಹರಕೆ ಈಡೇರುವುದರಿಂದ ಸುತ್ತಮುತ್ತಲಿನ ಜಿಲ್ಲೆಯ ಜನರು ಈ ನಾಗಪ್ಪನ ಮಾಯೆಗೆ ಬೆರಗಾಗಿದ್ದಾರೆ ಎಂದು ಸ್ಥಳೀಯರಾದ ಸುಂದರೇಶ್ ಹೇಳಿದ್ದಾರೆ.
ಒಟ್ಟಾರೆ ಉಣ್ಣಕ್ಕಿ ಉತ್ಸವದಲ್ಲಿ ಸಾವಿರಾರು ಮಂದಿ ಆಗಮಿಸಿ ಅಲುಗಾಡುವ ಹುತ್ತವನ್ನು ಕಣ್ತುಂಬಿಸಿಕೊಂಡು ಸಂತಸಪಡುತ್ತಾರೆ. ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತ. ಹುತ್ತ ಅಲುಗಾಡುವುದರ ಹಿಂದೆ ವೈಜ್ಞಾನಿಕ ಕಾರಣವಿದ್ಯೋ ಅಥವಾ ದೈವಿಶಕ್ತಿಯ ಪ್ರಭಾವವಿದ್ಯೋ ಎನ್ನುವುದು ಇಂದಿಗೂ ನಿಗೂಢ.
ವರದಿ: ಪ್ರಶಾಂತ್
ಇದನ್ನೂ ಓದಿ:
ಮದ್ದೂರು: ಮಾಜಿ ಪೊಲೀಸಪ್ಪನ ಪ್ರತಿಷ್ಠೆ, ದೊಡ್ಡರಸಿನಕೆರೆ ಗ್ರಾಮದಲ್ಲಿ ದೇಗುಲಕ್ಕೆ ಬೀಗ, ಬೀದಿಯಲ್ಲೇ ಉಳಿದ ಪವಾಡ ಬಸವ
Temple Tour: ಶಿಲ್ಪಕಲೆಯಿಂದ ಗಮನ ಸೆಳೆಯುತ್ತಿದೆ ಐತಿಹಾಸಿಕ ದೇವಾಲಯ