ಚಿಕ್ಕಮಗಳೂರು: ನಾನಾ ರೀತಿಯ ಆಫರ್ ನೀಡಿ ಎಸ್.ಎಸ್.ಎಲ್.ಸಿ. ಫಲಿತಾಂಶ ಬರುವ ಆರು ತಿಂಗಳ ಮೊದಲೇ ಮುಂಗಡವಾಗಿ 50 ಸಾವಿರ ಹಣ ಕಟ್ಟಿಸಿಕೊಂಡಿದ್ದ ಖಾಸಗಿ ವಿದ್ಯಾ ಸಂಸ್ಥೆ 10ನೇ ತರಗತಿ ಫಲಿತಾಂಶ ಪ್ರಕಟವಾದ ಬಳಿಕ ಉಲ್ಟಾ ಹೊಡೆದು ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆತಂಕ ಹುಟ್ಟಿಸಿತ್ತು. ಈ ಬಗ್ಗೆ ಟಿವಿ9ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಖಾಸಗಿ ವಿದ್ಯಾ ಸಂಸ್ಥೆ 50 ಸಾವಿರ ಹಣವನ್ನ (Admission fees) ಚೆಕ್ ರೂಪದಲ್ಲಿ ವಾಪಸ್ ನೀಡಿದೆ.
ಅಂದಹಾಗೆ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಪೂರ್ಣಪ್ರಜ್ಞಾ ಶಾಲೆಯ (Aldur Purna Prajna School) ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಚರಿತಾಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಎಕ್ಸಲೆಂಟ್ ಖಾಸಗಿ ವಿದ್ಯಾ ಸಂಸ್ಥೆ ಹಣವನ್ನ ವಾಪಸ್ ನೀಡಿದೆ. ಕಳೆದ ಡಿಸೆಂಬರ್‍ನಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆ (Moodbidri Excellent PU College) ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಆಫರ್ ನೀಡಿತ್ತು. ಪಿಯುಸಿ ಕಾಲೇಜು ಶುಲ್ಕದಲ್ಲಿ ಬಾರಿ ರಿಯಾಯಿತಿ ನೀಡುವುದಾಗಿ ತಿಳಿಸಿತ್ತು.
ಎಸ್ಸೆಸ್ಸೆಲ್ಸಿಯಲ್ಲಿ ಶೇಕಡಾ 90 ಬಂದರೆ 25 ಸಾವಿರ ಡಿಸ್ಕೌಂಟ್, 95% ಬಂದರೆ 50 ಸಾವಿರ ಡಿಸ್ಕೌಂಟ್, ಶೇಕಡಾ 95ಕ್ಕೂ ಅಧಿಕ ಬಂದರೆ 75 ಸಾವಿರ ಡಿಸ್ಕೌಂಟ್, 100% ಬಂದರೆ ಒಂದು ಲಕ್ಷ ಡಿಸ್ಕೌಂಟ್ ಎಂದು ಆಫರ್ ನೀಡಿತ್ತು. ಆಲ್ದೂರಿನ ವಿದ್ಯಾರ್ಥಿನಿ ಚರಿತಾ ತನಗೆ 95% ಬರುತ್ತೆ. ಭವಿಷ್ಯಕ್ಕೆ ಅನುಕೂಲವಾಗಲಿ ಎಂದು ಡಿಸೆಂಬರ್‍ನಲ್ಲೇ 50 ಸಾವಿರ ಮುಂಗಡ ಹಣ ಕಟ್ಟಿ ಆಡ್ಮಿಷನ್ ಆಗಿದ್ದರು.
ಆದರೆ, 10ನೇ ತರಗತಿಯಲ್ಲಿ ಚರಿತಾ ಔಟ್ ಆಫ್ ಔಟ್ ಅಂಕಗಳನ್ನು ತೆಗೆದಿದ್ದಾಳೆ. ಆದರೆ, ಫಲಿತಾಂಶ ಪ್ರಕಟವಾದ ಬಳಿಕ ಕಾಲೇಜು ಆಡಳಿತ ಮಂಡಳಿ ಸೀಟು-ಹಣ ಎರಡೂ ನೀಡಿಲ್ಲ! ಸೀಟು ಬೇಕಾದರೆ 2 ಲಕ್ಷದ 25 ಸಾವಿರ ಹಣ ಪೂರ್ತಿ ಕಟ್ಟಬೇಕು ಎಂದು ಹೇಳಿದೆ. ಅಲ್ಲದೆ, ಕಟ್ಟಿದ 50 ಸಾವಿರ ಹಣವೂ ವಾಪಸ್ ಬರೋದಿಲ್ಲ ಎಂದಿದ್ದರಂತೆ! ಅಂದು ಒಂದು ರೀತಿ ಹೇಳಿ, ಅಡ್ಮಿಷನ್ ಮಾಡಿಸಿಕೊಂಡು ಈಗ, ಮತ್ತೊಂದು ರೀತಿ ಹೇಳುತ್ತಿದ್ದಾರೆ. ನಮ್ಮ ಹಣ ವಾಪಸ್ ನೀಡಿ ನಾವೇ ಬೇರೆ ಕಾಲೇಜಿಗೆ ಸೇರುತ್ತೇವೆ ಎಂದರೂ ಹಣ ನೀಡುತ್ತಿಲ್ಲ ಎಂದು ಚರಿತಾ ಹಾಗೂ ತಾಯಿ ಪುಷ್ಪ ಟಿವಿ9 ಬಳಿ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಟಿವಿ9ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮೂಡಬಿದರೆ ಖಾಸಗಿ ಪಿಯು ಕಾಲೇಜು ಎಕ್ಸಲೆಂಟ್ ಆಡಳಿತ ಸಿಬ್ಬಂದಿ ಮುಂಗಡವಾಗಿ ಕಟ್ಟಿಸಿಕೊಂಡಿದ್ದ 50 ಹಣವನ್ನ ಚೆಕ್ ರೂಪದಲ್ಲಿ ಚರಿತಾಗೆ ವಾಪಸ್ ನೀಡಿದ್ದಾರೆ. ಚರಿತಾ ತಾಯಿ ಟಿವಿ9 ಗೆ ಧನ್ಯವಾದ ಸಲ್ಲಿಸಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Sat, 28 May 22