ಕಳಸ: ಸೂಕ್ತ ರಸ್ತೆಯಿಲ್ಲದೇ ವೃದ್ಧೆಯನ್ನು ಆಸ್ಪತ್ರೆಗೆ ಹೊತ್ತೊಯ್ದ ಗ್ರಾಮಸ್ಥರು; ಕಳಕೋಡು ಗ್ರಾಮದಲ್ಲಿ ಕರುಣಾಜನಕ ಘಟನೆ

| Updated By: shivaprasad.hs

Updated on: Oct 13, 2021 | 9:17 AM

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ಸಮೀಪ ಗ್ರಾಮವೊಂದಕ್ಕೆ ರಸ್ತೆಯ ಸಂಪರ್ಕವೇ ಇಲ್ಲ. ದೈನಂದಿನ ಚಟುವಟಿಕೆಗಳಿಗೂ ಸೇರಿದಂತೆ ಅತ್ಯಂತ ಅನಿವಾರ್ಯ ಸಂದರ್ಭದಲ್ಲಿಯೂ ಬಹಳ ದೂರ ನಡೆದುಕೊಂಡೇ ತೆರಳಬೇಕಾಗಿದೆ. ಇತ್ತೀಚೆಗೆ ಗ್ರಾಮದ ವೃದ್ಧೆಯೋರ್ವರನ್ನು ಆಸ್ಪತ್ರೆಗೆ ಹೊತ್ತೊಯ್ದ ಕರುಣಾಜನಕ ಘಟನೆ ನಡೆದಿದೆ. ಈ ಕುರಿತ ವರದಿ ಇಲ್ಲಿದೆ.

ಕಳಸ: ಸೂಕ್ತ ರಸ್ತೆಯಿಲ್ಲದೇ ವೃದ್ಧೆಯನ್ನು ಆಸ್ಪತ್ರೆಗೆ ಹೊತ್ತೊಯ್ದ ಗ್ರಾಮಸ್ಥರು; ಕಳಕೋಡು ಗ್ರಾಮದಲ್ಲಿ ಕರುಣಾಜನಕ ಘಟನೆ
ವೃದ್ಧೆಯೋರ್ವರನ್ನು ಆಸ್ಪತ್ರೆಗೆ ಕರೆದೊಯ್ಯಲು ರಸ್ತೆಯವರೆಗೆ ಹೊತ್ತೊಯ್ಯುತ್ತಿರುವ ಗ್ರಾಮಸ್ಥರು
Follow us on

ಕಳಸ: ಚಿಕ್ಕಮಗಳೂರು(Chikkamagalur) ಜಿಲ್ಲೆಯ ಕಳಸ(Kalasa) ತಾಲೂಕಿನ ಕಳಕೋಡು ಸಮೀಪ ಗ್ರಾಮವೊಂದಕ್ಕೆ ಸೂಕ್ತವಾದ ರಸ್ತೆ ಸಂಪರ್ಕವೇ ಇಲ್ಲ. ಮಕ್ಕಳು- ಹಿರಿಯರಾದಿಯಾಗಿ ಗ್ರಾಮಸ್ಥರು ಅನಿವಾರ್ಯ ಸಂದರ್ಭಗಳಲ್ಲೂ ಕಡಿದಾದ ಕಾಲುದಾರಿ ಮೂಲಕ ಬಲುದೂರ ಸಾಗಿಯೇ ರಸ್ತೆ ಹಿಡಿಯಬೇಕು. ಸೂಕ್ತ ರಸ್ತೆ ಇಲ್ಲದ ಕಾರಣ, ಆಸ್ಪತ್ರೆಗೆ ಹೋಗುವುದಕ್ಕೂ ಪರದಾಟ ನಡೆಸಬೇಕಾದ ಸ್ಥಿತಿಯಿದ್ದು, ವೃದ್ಧೆಯೋರ್ವರನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಕರುಣಾಜನಕ ಘಟನೆ ನಡೆದಿದೆ. ಕಂಬಕ್ಕೆ ಬೆಡ್ ಶೀಟ್ ಕಟ್ಟಿಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದ 70 ವರ್ಷದ ಲಕ್ಷ್ಮಿ ಎಂಬುವವರನ್ನು ಗ್ರಾಮಸ್ಥರು ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆ.

ಜೋಳಿಗೆಯಲ್ಲಿಯೇ ಕಳಕೋಡುನಿಂದ ಈಚಲುಹೊಳೆವರೆಗೆ ಒಟ್ಟು 4 ಕಿ.ಮೀ. ದೂರವನ್ನು ಕ್ರಮಿಸಲಾಗಿದೆ. ಹಲವು ದಶಕಗಳಿಂದ ರಸ್ತೆಯಿಲ್ಲದೆ ಗ್ರಾಮಸ್ಥರ ಪರದಾಟ ನಡೆಸುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ
ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರು ಹೇಳೋದೇನು?
‘‘ಗ್ರಾಮದಿಂದ ಮಕ್ಕಳು ದಿನವೂ ಶಾಲೆಗೆ ಸಂಚರಿಸುತ್ತಾರೆ. ಅವರನ್ನು ಕರೆದೊಯ್ಯಲು‌ ಹಿರಿಯರು ಓಡಾಡಬೇಕು. ಆಗ ಬಹಳ ಕಷ್ಟವಾಗುತ್ತದೆ. ಸುಮಾರು 70 ವರ್ಷದಿಂದ ಈ ಗ್ರಾಮದಲ್ಲಿ ನಿವಾಸಿಯಾಗಿದ್ದೇವೆ.‌ ಅದಾಗ್ಯೂ ಯಾವ ರಸ್ತೆಗಳೂ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳಲ್ಲಿ ಹೇಳಿಕೊಂಡು ಸಾಕಾಗಿದೆ. ನಾವು ಬೆಳೆದದ್ದನ್ನು ಹೊತ್ತುಕೊಂಡೇ ಸಾಗಿಸಬೇಕು. ರೇಷನ್ ಸೇರಿದಂತೆ ಯಾವುದೇ ಅಗತ್ಯ ವಸ್ತುಗಳನ್ನು ಹೊತ್ತುಕೊಂಡೇ‌ ಮನೆಗೆ ತರಬೇಕು. ನಮ್ಮ‌ ಅಕ್ಕನಿಗೆ ಇಂದು ಹುಷಾರಿಲ್ಲದೇ ಮುಖ್ಯರಸ್ತೆಯವರೆಗೆ ಹೊತ್ತುಕೊಂಡು ಹೋಗಿ ಮತ್ತೆ ಹಾಗೇ ಕರೆದುಕೊಂಡು ಬರಬೇಕಾಯ್ತು. ಭದ್ರಾ ನದಿ ದಂಡೆಯಲ್ಲೇ ಸಾಗಬೇಕು. ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿದ್ದರೆ ಬಹಳ‌ ಕಷ್ಟ. ಆಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಬರಲೂ ಸಾಧ್ಯವಿಲ್ಲ. ನೆಟ್‌ವರ್ಕ್ ಸಮಸ್ಯೆಯೂ ಇದ್ದು, ಅನಿವಾರ್ಯ ಸಂದರ್ಭದಲ್ಲಿ ಹೊರಜಗತ್ತನ್ನು ಸಂಪರ್ಕಿಸುವುದು ಕಷ್ಟವಾಗಿದೆ” ಎಂದು ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ ಗ್ರಾಮದ ಹಿರಿಯ ನಿವಾಸಿ ಚಂದ್ರಯ್ಯ.

ಇದನ್ನೂ ಓದಿ:

ಮಹಾರಾಷ್ಟ್ರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ; 34ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ

ಚಿಕ್ಕಬಳ್ಳಾಪುರ: ಭಾರಿ ಮಳೆಗೆ ಬಟ್ಲಹಳ್ಳಿ ಮುಖ್ಯ ರಸ್ತೆ ಬಂದ್; ಕೆರೆ ಕಟ್ಟೆ ಒಡೆದು ಅಪಾರ ಬೆಳೆ ಹಾನಿ

Published On - 8:44 am, Wed, 13 October 21