ಚಿಕ್ಕಮಗಳೂರು: ಫ್ಲವರ್ ಪಾಟ್ನಲ್ಲಿ ಗಾಂಜಾ ಬೆಳೆದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ. ಸ್ಥಳೀಯರು ಹಾಗೂ ಪೊಲೀಸರಿಂದ ಮರೆಮಾಚುವುದಕ್ಕಾಗಿ ಫ್ಲವರ್ ಪಾಟ್ನಲ್ಲಿ ಗಾಂಜಾ ಬೆಳೆದಿದ್ದವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ತರೀಕೆರೆ ಮೂಲದ ಶಕೀಲ್ ಹಾಗೂ ಭದ್ರಾವತಿ ಮೂಲದ ರೋಷನ್ ಎಂಬುವರನ್ನ ಈ ಪ್ರಕರಣದಲ್ಲಿ ಬಂಧಿಸಲಾಗಿದೆ.
ಶಕೀಲ್ ಹಾಗೂ ರೋಷನ್ ಎತ್ತರವಾಗಿ ಗಿಡಗಳು ಬೆಳೆದ ಟೊಮೆಟೋ ಫಾರಂನ ಮಧ್ಯದ ಫ್ಲವರ್ ಪಾಟಿನಲ್ಲಿ ಗಾಂಜಾ ಬೆಳೆದಿದ್ದರು. ಅತ್ತಿಗನಾಳು ಗ್ರಾಮದ ಅಂಚಿನಲ್ಲಿ ಗುಡ್ಡದ ಬೀರನಹಳ್ಳಿ ಅರಣ್ಯ ವ್ಯಾಪ್ತಿಯಿದೆ. ಇಲ್ಲಿನ ಜಮೀನಿನಲ್ಲಿ ಟೊಮೊಟೊ ಬೆಳೆಯಲಾಗಿತ್ತು. ಟೊಮೊಟೊ ಗಿಡಗಳ ಮಧ್ಯೆ ಮನೆ ಮುಂದೆ ಶೋಗೆ ಗಿಡಗಳನ್ನ ಬೆಳೆಸುವ ಚಿಕ್ಕ-ಚಿಕ್ಕ ಪಾಟಿನಲ್ಲಿ ಗಾಂಜಾ ಬೆಳೆದಿದ್ದರು. ಒಂದು ವೇಳೆ ಯಾರಿಗಾದರೂ ವಿಷಯ ತಿಳಿದರೆ ಪಾಟುಗಳನ್ನ ಬೇರೆಡೆ ಸ್ಥಳಾಂತರ ಮಾಡಬಹುದು ಎಂದು ಫ್ಲವರ್ ಪಾಟಿನಲ್ಲಿ ಗಾಂಜಾ ಬೆಳೆದಿದ್ದರು.
ಈ ಮಧ್ಯೆ ತರೀಕೆರೆಯಲ್ಲಿ ಗಾಂಜಾ ಸಪ್ಲೈ ಮಾಡುವ ತಂಡ ಇರೋದಾಗಿಯೂ ಪೊಲೀಸರಿಗೆ ಅನುಮಾನವಿತ್ತು. ಅಲ್ಲಲ್ಲೇ ಸಣ್ಣ-ಪುಟ್ಟ ಗಾಂಜಾ ಗಿರಾಕಿಗಳು ಸಿಕ್ಕಿಬಿದ್ದಿದ್ದರು. ಅತ್ತಿಗನಾಳು ಗ್ರಾಮದಲ್ಲಿ ಗಾಂಜಾ ಬೆಳೆದಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದ ಡಿಸಿಐಬಿ ಪೊಲೀಸರು ಎಂಟೂವರೆ ಕೆ.ಜಿ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಎಸ್ಪಿ ಅಕ್ಷಯ್, 100-200 ಗ್ರಾಂ ಗಾಂಜಾ ಮಾರಾಟ ಮಾಡುವವರನ್ನು ಬಂಧಿಸಿದರೆ ಮಾದಕ ವಸ್ತುಗಳ ಜಾಲ ಕಡಿಮೆಯಾಗಲ್ಲ. ಮುಖ್ಯವಾಗಿ ಯಾರು ಸಪ್ಲೈ ಮಾಡುತ್ತಾರೋ ಅವರನ್ನ ಬಂಧಿಸಿದರೆ ಬಹುತೇಕ ಗಾಂಜಾ ವಹಿವಾಟು ಕಡಿಮೆಯಾಗುತ್ತದೆ. ನಮ್ಮ ದೃಷ್ಟಿ ಮುಖ್ಯ ಡೀಲರ್ ಮೇಲೆ ಇರುತ್ತದೆ ಎಂದಿ ತಿಳಿಸಿದ್ದಾರೆ.
ಹಾಸನ ಜಿಲ್ಲೆಯಿಂದ ಬಂದು ಬೆಳವಾಡಿ, ಜಾವಗಲ್ ಬಳಿ ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನ ಬಂಧಿಸಿದ್ದೇವೆ. ಚಿಕ್ಕಮಗಳೂರು ತಾಲೂಕಿನ ಹೊಲದಲ್ಲೂ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಜಪ್ತಿ ಮಾಡಿದ್ದೇವೆ. ಶಿವಮೊಗ್ಗದಿಂದ ಬಂದು ತರೀಕೆರೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಬಂಧಿಸಿದ್ದೇವೆ. ಇವರಿಂದ ಎಂಟೂವರೆ ಕೆಜಿ ಗಾಂಜಾ ಸೀಜ್ ಮಾಡಿದ್ದೇವೆ. ಅವರು ಸೀಟ್ ಕೆಳಗೆ ಚಿಕ್ಕ-ಚಿಕ್ಕ ಪ್ಯಾಕ್ ಮಾಡಿ ಇಟ್ಟಿದ್ದರು. ಗಾಡಿಯಲ್ಲಿದ್ದ ನಾಲ್ಕು ಜನರನ್ನೂ ಬಂಧಿಸಿದ್ದೇವೆ ಎಂದು ಎಸ್ಪಿ ಅಕ್ಷಯ್ ಹೇಳಿದ್ದಾರೆ.
ಜಿಲ್ಲಾದ್ಯಂತ ಗಾಂಜಾ ಮಾರಾಟ ಅವ್ಯಾಹತವಾಗಿದ್ದು, ಕಳೆದ ಮೂರ್ನಾಲ್ಕು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನ ಪೊಲೀಸರು ಬೇಧಿಸಿದ್ದಾರೆ. ಆದರೂ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಹತೋಟಿಗೆ ಬಂದಿಲ್ಲ.
ಇದನ್ನೂ ಓದಿ:
ಆಂಧ್ರದಿಂದ ದಾವಣಗೆರೆಗೆ ಗಾಂಜಾ ಸಪ್ಲೈ; ಅಲರ್ಟ್ ಆದ ಪೊಲೀಸ್ ಪಡೆ, ಎಲ್ಲೆಡೆ ಹದ್ದಿನ ಕಣ್ಣು
Interesting.. ಫ್ಲವರ್ ಪಾಟ್ಸ್ ಮಧ್ಯೆ ಗಾಂಜಾ ಬೆಳೆದವನು ಪೊಲೀಸರ ಅತಿಥಿಯಾಗಿದ್ದು ಹೇಗೆ ಗೊತ್ತಾ?
(Chikmagalur police arrests 2 people who farming Ganja in Flower Pot)