20ರ ಯುವತಿಗೆ 17ರ ಯುವಕನ ಮೇಲೆ ಪ್ರೀತಿ; ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಯುವತಿ ಮೇಲೆ ಪ್ರಕರಣ ದಾಖಲು
ಯುವತಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೊರೊನಾ ನಿಯಮ ಉಲ್ಲಂಘನೆ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ. ಈಗ ಯುವತಿ ಹಾಗೂ ಯುವಕನನ್ನು ಪ್ರತ್ಯೇಕವಾಗಿ ಜಿಲ್ಲೆಯ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
ಚಿಕ್ಕಮಗಳೂರು: ಯುವತಿಯೊಬ್ಬಳು ತನಗಿಂತ ಮೂರು ವರ್ಷ ಕಿರಿಯ ಯುವಕನನ್ನು ಮದುವೆಯಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಸಿಲೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೂಲತಃ ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಯುವಕನ ಜತೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಅದು ನಂತರ ಪ್ರೀತಿಯಾಗಿದ್ದು, ಮದುವೆ ಕೂಡ ಮಾಡಿಕೊಂಡಿದ್ದಾರೆ. ಆದರೆ ಈ ಮದುವೆಗೆ ಕಾನೂನು ಅಡ್ಡಿಯಾಗಿದ್ದು, ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಫೇಸ್ಬುಕ್ನಲ್ಲಿ ಸ್ನೇಹವಾಗಿ ಅದೇಷ್ಟೋ ಜನರು ಮದುವೆಯಾಗಿರುವುದನ್ನು ನಾವು ಓದಿದ್ದೇವೆ. ಅದರಂತೆ ಕಡೂರು ಜಿಲ್ಲೆಯ ಈ ಯುವಕ-ಯುವತಿಯ ಪ್ರೀತಿಗೂ ಫೇಸ್ಬುಕ್ ವೇದಿಕೆಯಾಗಿದೆ. ಯುವಕ ಆಕೆ ಬಳಿ ನನಗೆ 21 ವರ್ಷ ಎಂದು ಹೇಳಿಕೊಂಡಿದ್ದನು. ಅದರಂತೆ ಪ್ರೀತಿ ಇಬ್ಬರಲ್ಲೂ ಆಗಿದ್ದರಿಂದ, ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಯುವತಿ ತನ್ನ ಪ್ರೀತಿಯ ಬಗ್ಗೆ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಫೋಷಕರು ಈ ಕಡೆ ಬರಬೇಡ, ಅಲ್ಲೇ ಇರು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ, ಯುವಕನ ಮನೆಯಲ್ಲಿ ಇದಕ್ಕೆ ವಿರೋಧವಿರಲಿಲ್ಲ. ತಂದೆ ಇಲ್ಲದ ಈ ಯುವಕ ಅಮ್ಮನನ್ನು ಮದುವೆಗೆ ಒಪ್ಪಿಸಿದ್ದು, ತಾಯಿ ಸಂಬಂಧಿಕರ ಜತೆ ಸೇರಿ ಇಬ್ಬರಿಗೂ ಬ್ರಹ್ಮಸಮುದ್ರ ಗ್ರಾಮದ ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಜೂನ್ 16ರಂದು ಮದುವೆ ಮಾಡಿದ್ದರು. ಈವರೆಗೆ ಎಲ್ಲವೂ ಚೆನ್ನಾಗಿದ್ದ ಪ್ರೀತಿಗೆ ಈಗ ಕಾನೂನು ತಡೆಯೊಡ್ಡಿದ್ದು, ಯುವತಿ ವಿರುದ್ಧ ಕೇಸ್ ದಾಖಲಾಗಿದೆ.
20 ವರ್ಷದ ಯುವತಿ 17 ವರ್ಷದ ಯುವಕನ ಜತೆ ಮದುವೆಯಾಗಿದ್ದ ಬಗ್ಗೆ ಮಕ್ಕಳ ಸಹಾಯವಾಣಿಗೆ ಜೂನ್ 23 ರಂದು ಮಾಹಿತಿ ದೊರೆತಿದೆ. ಸಖರಾಯಪಟ್ಟಣ ಪೊಲೀಸರೊಡನೆ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಮತ್ತು ಬಿಸಿಲೇಹಳ್ಳಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ಇಂದ್ರಮ್ಮ ಸ್ಥಳಕ್ಕೆ ಭೇಟಿ ನೀಡಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಈ ಯುವತಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೊರೊನಾ ನಿಯಮ ಉಲ್ಲಂಘನೆ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ. ಈಗ ಯುವತಿ ಹಾಗೂ ಯುವಕನನ್ನು ಪ್ರತ್ಯೇಕವಾಗಿ ಜಿಲ್ಲೆಯ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಸದ್ಯ ಸಖರಾಯಪಟ್ಟಣ ಪೊಲೀಸರು ಈ ವಿಷಯವನ್ನು ಯುವತಿಯ ಪೋಷಕರ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ:
ಕಾಲೇಜು ಕೊಠಡಿಯಲ್ಲೇ ವಿದ್ಯಾರ್ಥಿಗಳ ಮದುವೆ: ಬಾಲ್ಯ ವಿವಾಹ ಪ್ರಕರಣ ದಾಖಲು
ಅಕ್ಕ-ತಂಗಿಯನ್ನು ಒಟ್ಟಿಗೆ ಮದುವೆಯಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಪತಿ ಉಮಾಪತಿ ಅರೆಸ್ಟ್, ಕಾರಣ ಏನು?