ಮಕ್ಕಳು ಅಂತ್ಯಕ್ರಿಯೆ ನಡೆಸುವಂತಿಲ್ಲವೆಂದು ಎಸ್‌ ಎಲ್‌ ಭೈರಪ್ಪ ವಿಲ್: ಇದು ನಿಜವೇ?

ಭೈರಪ್ಪನವರು ನಿಧನಕ್ಕೆ ಅವರ ಬಗ್ಗೆ ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು, ಅವರ ಜೊತೆಗಿನ ಒಡನಾಟಗಳನ್ನು ಹಂಚಿಕೊಂಡು ಕಂಬನಿ ಮಿಡಿದ್ದಾರೆ. ಇನ್ನು ನಾಳೆ (ಸೆಪ್ಟೆಂಬರ್ 26) ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪನವರ ಅಂತ್ಯಕ್ರಿಯೆ ನೆರವೇರಲಿದೆ. ಆದ್ರೆ ಈ ವೇಳೆ ಭೈರಪ್ಪನವರು ಬರೆದಿದ್ದಾರೆ ಎನ್ನಲಾದ ವಿಲ್ ಒಂದು ಹರಿದಾಡುತ್ತಿದ್ದು, ಭಾರೀ ಗೊಂದಲ ಸೃಷ್ಟಿಸಿದೆ. ಹಾಗಾದ್ರೆ, ವಿಲ್​ ನಲ್ಲಿ ಏನಿದೆ? ವಿಲ್ ಹರಿಬಿಟ್ಟವರು ಯಾರು ಎನ್ನುವ ವಿವರ ಇಲ್ಲಿದೆ.

ಮಕ್ಕಳು ಅಂತ್ಯಕ್ರಿಯೆ ನಡೆಸುವಂತಿಲ್ಲವೆಂದು ಎಸ್‌ ಎಲ್‌ ಭೈರಪ್ಪ ವಿಲ್: ಇದು ನಿಜವೇ?
Sl Bhyrappa

Updated on: Sep 25, 2025 | 8:56 PM

ಬೆಂಗಳೂರು, (ಸೆಪ್ಟೆಂಬರ್ 25): ನಾಡಿನ ಹಿರಿಯ ಸಾಹಿತಿ, ಕಾದಂಬರಿಕಾರ ಎಸ್‌ಎಲ್‌ ಭೈರಪ್ಪ (SL bhyrappa) ಅವರು ನಿಧನರಾಗಿದ್ದು, ನಾಳೆ ಅಂದ್ರೆ ಸೆಪ್ಟೆಂಬರ್ 26ರಂದು ಮೈಸೂರಿನ (Mysuru) ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬ್ರಾಹ್ಮಣ ಸಂಪ್ರದಾಯದ ವಿಧಿ ಅತ್ಯಸಂಸರ ನೆರವೇರಲಿದೆ. ಆದ್ರೆ, ತಮ್ಮ ಅಂತ್ಯಕ್ರಿಯೆಯನ್ನು (funeral) ಮಕ್ಕಳು (children) ಮಾಡುವಂತಿಲ್ಲ ಎಂದು ಭೈರಪ್ಪನವರು ವಿಲ್  (will)ಬರೆದಿಟ್ಟಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ವಿಲ್ ಬಾಂಡ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ, ಈ ಬಗ್ಗೆ ಅವರ ಕುಟುಂಬಸ್ಥರು ಖಚಿತಪಡಿಸಿಲ್ಲ. ಹೀಗಾಗಿ ಈ ವಿಲ್ ಗೊಂದಲ ಸೃಷ್ಟಿಸಿದ್ದು, ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಎಸ್‌ಎಲ್‌ ಭೈರಪ್ಪ ಅವರ ಅಂತಿಮ ದರ್ಶನಕ್ಕಾಗಿ ಇಂದು (ಸೆಪ್ಟೆಂಬರ್ 25) ಮೈಸೂರಿನ ಕಲಾಮಂದಿರದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ, ಈ ವೇಳೆ ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳು ಉದಯ ಶಂಕರ್ ಮತ್ತು ರವಿಶಂಕರ್ ನಡೆಸುವಂತಿಲ್ಲ ಎಂದು ಲೇಖಕ ಎಸ್. ಎಲ್. ಭೈರಪ್ಪ ಮಾಡಿರುವ ವಿಲ್ ಎಂದು ಅವರ ಅಭಿಮಾನಿ ಫಣೀಶ್ ಎಂಬುವರು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: SL Bhyrappa: ಎಸ್​ಎಲ್ ಭೈರಪ್ಪ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್: ಸಿಎಂ ಸಿದ್ದರಾಮಯ್ಯ ಘೋಷಣೆ

ಭೈರಪ್ಪನವರ ಅಂತಿಮ ದರ್ಶನಕ್ಕೆ ಗಣ್ಯರು, ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರು ಆಗಮಿಸುತ್ತಿದ್ದಂತೆ, ಫಣೀಶ್  ಭೈರಪ್ಪನವರ ವಿಲ್‌ನ ಪ್ರತಿಯನ್ನು ಪ್ರದರ್ಶಿಸಿದರು. ಭೈರಪ್ಪನವರು ವಿಲ್‌ನಲ್ಲಿ ತಮ್ಮ ಮಕ್ಕಳಾದ ಉದಯಶಂಕರ್ ಮತ್ತು ರವಿಶಂಕರ್ ಅವರು ಅಂತ್ಯಸಂಸ್ಕಾರವನ್ನು ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಅವರ ಬದುಕಿನ ಕೊನೆಯ ದಿನಗಳಲ್ಲಿ ಅವರನ್ನು ನೋಡಿಕೊಂಡ ಹೆಣ್ಣುಮಗಳೇ ಅಂತಿಮ ಸಂಸ್ಕಾರವನ್ನು ನೆರವೇರಿಸಬೇಕು ಎಂಬುದು ಅವರ ಆಶಯವಾಗಿತ್ತು. ಆ ಮಹಾನ್ ಚೇತನದ ಕೊನೆಯ ಆಸೆಯನ್ನು ಈಡೇರಿಸಬೇಕು ಎಂದು ಫಣೀಶ್  ಪ್ರತಿಪಾದಿಸಿದರು.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಲಾಮಂದಿರದ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಅಭಿಮಾನಿಯ ಈ ನಡೆಯಿಂದಾಗಿ, ಕುಟುಂಬ ಸದಸ್ಯರು ಮತ್ತು ಸಾರ್ವಜನಿಕರ ನಡುವೆ ಗೊಂದಲ ಉಂಟಾಯಿತು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಸ್ಥಳದಲ್ಲಿದ್ದ ಪೊಲೀಸರು, ಕೊನೆಗೆ ಫಣೀಶ್ ಅವರನ್ನ  ವಶಕ್ಕೆ ಪಡೆದು ಕರೆದೊಯ್ದರು.

ಇದನ್ನೂ ಓದಿ: 1 ವಾರ ಬಾನು ಮುಷ್ತಾಕ್ ಮನೆಯಲ್ಲಿ ತಂಗಿದ್ದ ಭೈರಪ್ಪ, ಮಸೀದಿಗೂ ಹೋಗಿದ್ರು: ಕುತೂಹಲಕಾರಿ ಸಂಗತಿಗಳು ಇಲ್ಲಿವೆ

ಸದ್ಯ ಈ ವಿಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದ್ರೆ, ಭೈರಪ್ಪನವರೇ ನಿಜವಾಗಿ ಈ ರೀತಿ ವಿಲ್ ಬರೆದಿದ್ದಾರಾ ಎನ್ನುವುದು ಎಲ್ಲೂ ಅಧಿಕೃತವಾಗಿಲ್ಲ. ಹೀಗಾಗಿ ನಿಮ್ಮ ಟಿವಿ9 ಕನ್ನಡ ಡಿಜಿಟಲ್ ಈ ಸುದ್ದಿಯನ್ನು ಏಕೆ ಮಾಡಿದೆ ಅಂದ್ರೆ, ಓದುಗರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಎಲ್ಲೋ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿರುವುದನ್ನು ನಿಜವೆಂದು ನಂಬುವ ಬದಲಾಗಿ ಅದರ ಸತ್ಯಾಸತ್ಯ ತಿಳಿಯುವುದು ಒಳಿತು ಎನ್ನುವ ಉದ್ದೇಶದಿಂದ ಅಷ್ಟೆ.