ಸೀರೆ ಕದ್ದಿದ್ದಾಳೆಂದು ಮಹಿಳೆಯ ಖಾಸಗಿ ಅಂಗಕ್ಕೆ ಬೂಟುಗಾಲಿನಿಂದ ಒದ್ದು ಅಂಗಡಿ ಮಾಲೀಕ ಕ್ರೌರ್ಯ
ಬೆಂಗಳೂರಿನಲ್ಲೊಂದು ಅಮಾನುಷ ಘಟನೆ ನಡೆದಿದೆ. ಸೀರೆ ಕದ್ದಿದ್ದಾಳೆಂದು ಅಂಗಡಿ ಮಾಲೀಕನೋರ್ವ ಮಹಿಳೆಯ ಖಾಸಗಿ ಅಂಗಕ್ಕೆ ಬೂಟುಗಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದಾನೆ. ಬೆಂಗಳೂರಿನ ಸೀರೆ ಅಂಗಡಿ ಮಾಲೀಕನ ಅಮಾನವೀಯ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಳ್ಳತನ ಮಾಡಿದ್ದಾಳೆ ಎನ್ನುವ ಮಾತ್ರಕ್ಕೆ ಸಾರ್ವಜನಿಕವಾಗಿ ಮಹಿಳೆ ಮೇಲೆ ಮನಬಂದಂತೆ ಹಲ್ಲೆ ಮಾಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 25): ಸೀರೆ ಕದ್ದಿದ್ದಾಳೆಂದು ಆರೋಪಿಸಿ ಅಂಗಡಿ ಮಾಲೀಕ, ಮಹಿಳೆಯ (Woman) ಖಾಸಗಿ ಅಂಗಕ್ಕೆ ಒದ್ದು ಕ್ರೌರ್ಯ ಮೆರೆದಿದ್ದಾನೆ. ಮಹಿಳೆ ಸೀರೆ ಕದ್ದಿದ್ದಾಳೆಂದು ಆರೋಪಿಸಿ ನಡುರಸ್ತೆಯಲ್ಲೇ ದೌರ್ಜನ್ಯ ಎಸಗಿರುವ ಅಮಾನುಷ ಘಟನೆ ಬೆಂಗಳೂರಿನ (Bengaluru) ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಮಾಲೀಕ ಬಾಬುಲಾಲ್, ಹಾಡಹಗಲೇ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಬೂಟುಗಾಲಿನಿಂದ ಒದ್ದು ಅಮಾನವೀಯ ನಡೆದುಕೊಂಡಿದ್ದಾನೆ.
ಮಾಲೀಕ ಮಾತ್ರವಲ್ಲದೇ ಅಂಗಡಿ ಸಿಬ್ಬಂದಿ ಸಹ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೋವಿನಿಂದ ಮಹಿಳೆ ಕಿರುಚಾಡಿ ಅಂಗಲಾಚಿದ್ರು ಸಹ ಬಿಟ್ಟಿಲ್ಲ. ಮಹಿಳೆ ಮೇಲೆ ಹಲ್ಲೆ ಮಾಡಿದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಮಹಿಳೆ ಪರವಾಗಿ ಕನ್ನಡಪರ ಹೋರಾಟಗಾರರು ನಿಂತಿದ್ದಾರೆ.
ಇದನ್ನೂ ನೋಡಿ: ಕ್ರಿಕೆಟ್ ಕೋಚ್ನ ಮತ್ತಷ್ಟು ಕಾಮ ಪುರಾಣ ಬಟಾಬಯಲು, ಸ್ಫೋಟಕ ಅಂಶ ಬಿಚ್ಚಿಟ್ಟ ಸಂತ್ರಸ್ತೆ
ಇನ್ನು ಮಹಿಳೆಯ ರಕ್ಷಣೆಗೆ ನಿಲ್ಲಬೇಕಾಗಿದ್ದ ಕೆ.ಆರ್. ಮಾರ್ಕೆಟ್ ಪೊಲೀಸರೇ ನಿರ್ಲಕ್ಷ್ಯ ತೋರಿದ್ದಾರೆ. ಮಹಿಳೆಯ ದೂರು ದಾಖಲಿಸಿಕೊಳ್ಳುವ ಬದಲಾಗಿ ಬಟ್ಟೆ ಅಂಗಡಿಯ ಮಾಲೀಕನ ಪರವಾಗಿ ನಿಂತಿದ್ದು, ಕಳ್ಳತನ ಕೇಸ್ ಹಾಕಿ ಮಹಿಳೆಯನ್ನ ಜೈಲಿಗಟ್ಟಿದ್ದಾರೆ. ಪೂರ್ವಪರ ಪರಿಶೀಲಿಸದೆ ಮಹಿಳೆಯ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಆದ್ರೆ,ಓರ್ವ ಮಹಿಳೆಯ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಆಕ್ರೋಶ ವ್ಯಕ್ತವಾಗಿದ್ದು, ಮಹಿಳೆ ಪರವಾಗಿ ಕನ್ನಡ ಪರ ಸಂಘಟನೆಗಳು ನಿಂತಿವೆ. ಬಟ್ಟೆ ಅಂಗಡಿ ಮಾಲೀಕ ಬಾಬುಲಾಲ್ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿವೆ. ಮಹಿಳೆಯ ಮಾನಕ್ಕೆ ಧಕ್ಕೆ ತಂದವನನ್ನು ಬಂಧಿಸಲೇಬೇಕೆಂದು ಆಗ್ರಹಿಸಿವೆ. ಮಹಿಳೆ ಕಳ್ಳತನ ಮಾಡಿದ್ದರೆ ಕಾನೂನಾತ್ಮಕ ಕ್ರಮವಾಗಲಿ. ಆದ್ರೆ, ನಡುರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸೋದು ಎಷ್ಟು ಸರಿ? ಎಂದು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಈ ಘಟನೆ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಪೊಲೀಸರು, ಈಗ ತರಾತುರಿಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಿಸಲು ತಯಾರಿ ನಡೆಸಿದ್ದಾರೆ.
Published On - 9:48 pm, Thu, 25 September 25



