“ಬುಟ್ಟಿಯಲ್ಲಿ ಹಣ್ಣು ಕೊಳೆತರೆ ಅದನ್ನು ತೆಗೆದು ಎಸೆಯಬೇಕು”; ಪೀಠದಿಂದ ಮುರುಘಾಶ್ರೀ ವಜಾಗೊಳಿಸುವ ಸುಳಿವು ನೀಡಿದ ಸಮುದಾಯದ ಮುಖಂಡರು

| Updated By: Rakesh Nayak Manchi

Updated on: Nov 25, 2022 | 9:01 AM

ಕೋಟೆನಾಡು ಚಿತ್ರದುರ್ಗದ ಮುರುಘಾಮಠದ ಸ್ವಾಮೀಜಿ ಮುರುಘಾ ಶರಣರು ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾದರೂ ಇದುವರೆಗೆ ಪೀಠ ತ್ಯಾಗ ಮಾಡದಿರುವುದು ಟೀಕೆಗೆ ಕಾರಣವಾಗಿದೆ. ಅಲ್ಲದೆ ಸ್ವಾಮಿಗಳ ವಿರುದ್ಧವೇ ಸಮುದಾಯದ ಮುಖಂಡರು ಕಿಡಿ ಕಾರುವ ಸ್ಥಿತಿ ನಿರ್ಮಾಣ ಆಗಿದೆ.

ಬುಟ್ಟಿಯಲ್ಲಿ ಹಣ್ಣು ಕೊಳೆತರೆ ಅದನ್ನು ತೆಗೆದು ಎಸೆಯಬೇಕು; ಪೀಠದಿಂದ ಮುರುಘಾಶ್ರೀ ವಜಾಗೊಳಿಸುವ ಸುಳಿವು ನೀಡಿದ ಸಮುದಾಯದ ಮುಖಂಡರು
ಪೀಠದಿಂದ ಮುರುಘಾಶ್ರೀ ವಜಾಗೊಳಿಸುವ ಸುಳಿವು ನೀಡಿದ ಸಮುದಾಯದ ಮುಖಂಡರು
Follow us on

ಚಿತ್ರದುರ್ಗ: ಮುರುಘಾ ಮಠದ (Murugha Mutt) ಸ್ವಾಮೀಜಿ ಶಿವಮೂರ್ತಿ ಮುರುಘಾ ಶರಣರು (Shivamurthy Murugha Sharanaru) ಪೋಕ್ಸೋ ಕಾಯ್ದೆಯಡಿ ಜೈಲು ಪಾಲಾಗಿದ್ದರೂ ಈವರೆಗೆ ಪೀಠ ತ್ಯಾಗ ಮಾಡಿಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೀಠ ತ್ಯಾಗಕ್ಕೆ ಒತ್ತಾಯಗಳು ಕೇಳಿಬಂದಿದ್ದವು. ಆದರೂ ಪೀಠ ತ್ಯಾಗ ಮಾಡದ ಶ್ರೀಗಳ ವಿರುದ್ಧ ಇದೀಗ ಸಮುದಾಯ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ. ಬುಟ್ಟಿಯಲ್ಲಿನ ಹಣ್ಣು ಕೆಟ್ಟರೆ ಆ ಹಣ್ಣನ್ನು ತೆಗೆದು ಬಿಸಾಕಬೇಕು ಎಂದು ಹೇಳುವ ಮೂಲಕ ಮುರುಘಾಶ್ರೀ ವಜಾಗೊಳಿಸುವ ನಿರ್ಣಯದ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾದ (Akhila Bharatha Veerashaiva Mahasabha) ಉಪಾಧ್ಯಕ್ಷ ಅಣಬೇರು ರಾಜಣ್ಣ ಸುಳಿವು ನೀಡಿದರು.

ದಾವಣಗೆರೆ ನಗರದಲ್ಲಿ ಡಿಸೆಂಬರ್ 24, 25 ಮತ್ತು 26ರಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಅಧಿವೇಶನ ನಡೆಯಲಿದೆ. ಹೀಗಾಗಿ, ಚಿತ್ರದುರ್ಗ ನಗರದಲ್ಲಿ ಮಹಾಸಭಾದ ಉಪಾದ್ಯಕ್ಷ ಅಣಬೇರು ರಾಜಣ್ಣ ನೇತೃತ್ವದಲ್ಲಿ ನಗರದ ಒನಕೆ ಓಬವ್ವ ವೃತ್ತದ ಬಳಿಯ ಖಾಸಗಿ ಸಭಾಂಗಣದಲ್ಲಿ ವೀರಶೈವ ಮಹಾಸಭಾದಿಂದ ಪೂರ್ವಭಾವಿ ಸಭೆ ನಡೆಸಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಅಣಬೇರು ರಾಜಣ್ಣ, ಮುರುಘಾಮಠದ ಬಿಕ್ಕಟ್ಟಿನ ಬಗ್ಗೆಯೂ ದಾವಣಗೆರೆಯಲ್ಲಿ ಮಹಾಸಭಾದಿಂದ ನಡೆಯುವ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗಂಭೀರ ಪ್ರಕರಣವಿದ್ದು, ಜೈಲು ಸೇರಿದ್ದಾರೆ. ಆದರೂ ಅವರು ಪೀಠ ತ್ಯಾಗ ಮಾಡಿಲ್ಲ. ಈ ಬಗ್ಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸುತ್ತೇವೆ. ಬುಟ್ಟಿಯಲ್ಲಿನ ಹಣ್ಣು ಕೆಟ್ಟರೆ ಆ ಹಣ್ಣನ್ನು ತೆಗೆದು ಬಿಸಾಕಬೇಕೆಂದು ಹೇಳುವ ಮೂಲಕ ಮುರುಘಾಶ್ರೀ ವಜಾಗೊಳಿಸುವ ನಿರ್ಣಯದ ಬಗ್ಗೆ ಸುಳಿವು ನೀಡಿ ಕಿಡಿಕಾರಿದರು.

ಮುರುಘಾಮಠದ ಏಕಸದಸ್ಯ ಟ್ರಸ್ಟ್ ರಚನೆ ಮಾಡಿಕೊಂಡಿರುವ ಮುರುಘಾಶ್ರೀ ಅಧಿಕಾರ ಚಲಾಯಿಸುತ್ತಿದ್ದಾರೆ. ಮಠಗಳು ಭಕ್ತರ ಆಸ್ತಿ, ಸ್ವಾಮಿಗಳ ಆಸ್ತಿ ಅಲ್ಲ. ಆದರೆ ಇತ್ತೀಚೆಗೆ ಬಹುತೇಕ ಮಠಗಳ ಸ್ವಾಮಿಗಳು ಏಕಸದಸ್ಯ ಟ್ರಸ್ಟ್ ರಚಿಸಿಕೊಂಡು ಅಧಿಕಾರ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಆದರೆ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದರೂ ಸೊಲೊ ಟ್ರಸ್ಟ್ ಕಾರಣಕ್ಕೆ ಮಠದ ಅಧಿಕಾರ ಸ್ವಾಮಿಗಳ ಕೈಯಲ್ಲಿ ಇರುವಂತಾಗಿದೆ. ಸರ್ಕಾರಗಳೂ ಆಡಳಿತಾಧಿಕಾರಿ, ನೂತನ ಪೀಠಾದ್ಯಕ್ಷರ ನೇಮಿಸಲಾಗದ ಸ್ಥಿತಿ ನಿರ್ಮಾಣ ಆಗಿದೆ ಎಂದು ಕಿಡಿ ಕಾರಿದರು.

ಒಟ್ಟಾರೆಯಾಗಿ ಫೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾಶ್ರೀ ವಿರುದ್ಧ ವೀರಶೈವ ಲಿಂಗಾಯತ ಸಮಾಜದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಂತೆಯೇ ಇಂದು ಮುರುಘಾಶ್ರೀ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಲಿದ್ದು, ಕೋರ್ಟ್ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನ ವಿಸ್ತರಿಸುವ ಸಾಧ್ಯತೆ ಇದೆ. ಅಂತೆಯೇ ಈಗಾಗಲೇ ಚಾರ್ಜ್​ಶೀಟ್ ಸಲ್ಲಿಕೆ ಆಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ದಿನಾಂಕ ನಿಗದಿಯಾಗುವ ಸಾಧ್ಯತೆಯೂ ಇದೆ.

ಮತ್ತೊಂದು ಕಡೆ ಮುರುಘಾಶ್ರೀ ವಿರುದ್ಧ ಸುಳ್ಳು ಕೇಸ್ ದಾಖಲಿಸಲು ಪಿತೂರಿ ಪ್ರಕರಣದಲ್ಲಿ ಬಂಧನದಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಜಾಮೀನು ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ. ವಿಚಾರಣೆ ನಂತರ ಇವರು ಮತ್ತೆ ಜೈಲು ಪಾಲಾಗಲಿದ್ದಾರೆಯೇ ಎಂಬುದನ್ನು ನೋಡಬೇಕಿದೆ.

ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 am, Fri, 25 November 22