ಚಿತ್ರದುರ್ಗ: ರಾಂಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಪೊದೆಯಲ್ಲಿ ಬಚ್ಚಿಟ್ಟಿದ್ದ 146 ಚೀಲ ಅನ್ನಭಾಗ್ಯದ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಬಳಿ ಅಕ್ಕಿ ಜಪ್ತಿ ಮಾಡಲಾಗಿದ್ದು, ಆರೋಪಿ ರಾಮು ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಂಪುರ ಪಿಎಸ್ಐ ಗಾದಿಲಿಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಲಕ್ಷಾಂತರ ಬೆಲೆ ಬಾಳುವ ಚಿನ್ನ, ನಗದು ಕಳವು
ಇನ್ನು ಬೆಂಗಳೂರಿನ ಬಾಗಲಗುಂಟೆ ಬಳಿಯ ಕಲ್ಯಾಣನಗರದಲ್ಲಿ ಕಳ್ಳತನ ನಡೆದಿದೆ. ಸೈಕಲ್ ಶಾಪ್ ರಂಗಪ್ಪ ಅವರ ಮನೆಯಲ್ಲಿ ಹಾಡುಹಗಲೇ ಲಕ್ಷಾಂತರ ಬೆಲೆ ಬಾಳುವ ಚಿನ್ನ, ನಗದು ಕಳವು ಮಾಡಲಾಗಿದೆ. ರಂಗಪ್ಪರ ಮಗ ವಿನಯ್ ಮನೆಯಿಂದ ಹೊರ ಹಾಗುವಾಗ ತಂದೆಗೆ ಸುಲಭವಾಗಿ ಕೀ ಸಿಗಲೆಂದು ಮನೆ ಟೆರಸ್ನ ಬಾತ್ ರೂಂನಲ್ಲಿ ಬಚ್ಚಿಟ್ಟಿದ್ದರು.
ಇದನ್ನು ಗಮನಿಸಿದ ದುಷ್ಕರ್ಮಿಗಳು ಮನೆ ಕೀ ಕದ್ದು 2ಲಕ್ಷದ 30ಸಾವಿರ ಬೆಲೆ ಬಾಳುವ 75ಗ್ರಾ ಚಿನ್ನ,90ಸಾವಿರ ನಗದು ದೋಚಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಮಗ ವಿನಯ್ ಮದುವೆ ನಿಶ್ಚಿಯವಾಗಿತ್ತು. ಮಗನ ಮದುವೆಗೆಂದು ರಂಗಪ್ಪ ಚಿನ್ನ ಖರೀದಿಸಿದ್ದರು. ಪರಿಚಯಸ್ಥರಿಂದಲೇ ಮನೆಗಳ್ಳತನ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಾಗಲಗುಂಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೇವಸ್ಥಾನ ಬಾಗಿಲು ಮುರಿದು ಕಳ್ಳತನ
ಇನ್ನು ಮತ್ತೊಂದು ಕಡೆ ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಾಗಿಲು ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ. ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿದ್ದ ಖದೀಮರು ದೇವಸ್ಥಾನದಲ್ಲಿದ್ದ 2 ಕೆ.ಜಿ ಬೆಳ್ಳಿ ಕಿರೀಟ, 2 ಬೆಳ್ಳಿ ಬೆತ್ತ, 1 ಬಂಗಾರ ಲೇಪಿತ ಕಳಸ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸುದ್ದಿ ತಿಳಿದು ಅಪಾರ ಭಕ್ತರು ದೇಗುಲ ಬಳಿ ಜಮಾಯಿಸಿದ್ದಾರೆ. ಇದೇ ಮಾದರಿಯಲ್ಲಿ ಗದಗ ಜಿಲ್ಲೆ ರೊಣ ತಾಲೂಕಿನ ಬೆಳವಣಕಿ ಗ್ರಾಮದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿಯೂ ಕಳ್ಳತನ ನಡೆದಿದೆ. ಅಲ್ಲಿ ಕಳ್ಳತನವಾಗಿರುವ ವಸ್ತುಗಳ ಕುರಿತು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಸರಣಿ ಕಳ್ಳತನ ಪ್ರಕರಣದಿಂದಾಗಿ ಜನ ಆತಂಕಗೊಂಡಿದ್ದಾರೆ.
ಇದನ್ನೂ ಓದಿ: LPG Cashback Offer: ಪೇಟಿಎಂ ಮೂಲಕ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿ 2700 ರೂ. ತನಕ ಕ್ಯಾಶ್ಬ್ಯಾಕ್ ಪಡೆಯಿರಿ
Published On - 11:44 am, Fri, 6 August 21