ಚಿತ್ರದುರ್ಗ, ನವೆಂಬರ್ 01: ಭದ್ರಾ ಮೇಲ್ದಂಡೆ ಯೋಜನೆ (Bhadra project) ಕೋಟೆನಾಡಿನ ಜನರ ಬಹು ದಶಕಗಳ ಕನಸು. ಆದ್ರೆ, ಜನಪ್ರಧಿನಿಧಿಗಳ ಹಗ್ಗಜಗ್ಗಾಟದಿಂದಾಗಿ ಭದ್ರಾ ಯೋಜನೆ ಬಹುತೇಕ ಸ್ಥಗಿತಗೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕಮಿಷನ್ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದು ಬಯಲುಸೀಮೆಯ ಜನರ ಸ್ಥಿತಿ ಇಬ್ಬರ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ಮುಂದೆ ಓದಿ.
ಚಿತ್ರದುರ್ಗ ಜಿಲ್ಲೆಯ ಜನರ ಮೂರು ದಶಕಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿದೆ. ಆದರೆ ಒಂದೂವರೆ ದಶಕ ಕಳೆದರೂ ಕಾಮಗಾರಿ ಮಾತ್ರ ಪುರ್ಣಗೊಂಡಿಲ್ಲ. ಬದಲಾಗಿ ಇತ್ತೀಚೆಗೆ ಅನುದಾನ ಕೊರತೆ, ಬಿಲ್ ಪೆಂಡಿಂಗ್ ಕಾರಣಕ್ಕೆ ಬಹುತೇಕ ಕಾಮಗಾರಿ ಸ್ಥಗಿತಗೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಬಿಡುಗಡೆ ಆಗಬೇಕಿರುವ 1950 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ಬಾಕಿ ಇರಿಸಿಕೊಂಡಿದೆ.
ಇದನ್ನೂ ಓದಿ: 30 ಟಿಎಂಸಿ ಸಂಗ್ರಹ ಸಾಮರ್ಥ್ಯದ ಆ ಜಲಾಶಯದಲ್ಲಿ 22 ಟಿಎಂಸಿ ನೀರಿದೆ, ಬರಗಾಲದ ರೈತಾಪಿ ವರ್ಗ ಫುಲ್ ಖುಷ್!
ಕಮಿಷನ್ ಬಂದ ಬಳಿಕ ಹಣ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಕಮಿಷನ್ ಕಲೆಕ್ಷನ್ ಗಾಗಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆಂದು ಚಿತ್ರದುರ್ಗದ ಬಿಜೆಪಿ ಸಂಸದ , ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ರಾಜ್ಯ ಸರ್ಕಾರ, ಸಚಿವರು ಮತ್ತು ಶಾಸಕರ ವಿರುದ್ಧ ಹೆಸರು ಪ್ರಸ್ತಾಪಿಸದೆ ಆರೋಪಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ನಾನಾ ತೊಡಕುಗಳು ಎದುರಾಗಿವೆ. ಒಂದು ಕಡೆ ಅನುದಾನದ ಕೊರತೆ.
ಮತ್ತೊಂದು ಕಡೆ ಬಿಲ್ ಬಾಕಿ ಉಳಿದಿದ್ದು ಕಾಮಗಾರಿ ಸ್ಥಗಿತಗೊಂಡಿದೆ. ಅಬ್ಬಿನಹೊಳೆ ಬಳಿ ಭೂಸ್ವಾಧೀನ ಪ್ರಕ್ರಿಯೆಯೂ ಹಾಗೆ ಉಳಿದಿದೆ. ಭದ್ರಾ ಯೋಜನೆಗೆ ಹಣ ಬಿಡುಗಡೆಗೆ ಕಮಿಷನ್ ಕಲೆಕ್ಷನ್ಗೆ ಡಿಮ್ಯಾಂಡ್ ಮಾಡುತ್ತಿದ್ದಾರೆಂಬ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಮಂಗಳಮುಖಿ ಬದುಕಿಗೆ ಕಳ್ಳರಿಂದ ಕೊಳ್ಳಿ
ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಭದ್ರಾ ಯೋಜನೆಗೆ 5300 ಕೋಟಿ ರೂ. ಘೋಷಣೆ ಮಾಡಿದ್ದು ಮೊದಲು ಬಿಡುಗಡೆ ಮಾಡಿಸಲಿ. ನಾವು 2 ಸಾವಿರ ಕೋಟಿ ರೂ. ಹಣವಿಟ್ಟುಕೊಂಡಿದ್ದೇವೆ. ಒಂದು ವರ್ಷದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಬಯಲುಸೀಮೆ ಚಿತ್ರದುರ್ಗಕ್ಕೆ ಹರಿದು ಬರಬೇಕಿರುವ ಭದ್ರಾ ಮೇಲ್ದಂಡೆ ಯೋಜನೆ ಅನುದಾನವಿಲ್ಲದೆ
ಬಹುತೇಕ ಕಾಮಗಾರಿ ಸ್ಥಗಿತಗೊಂಡಿದೆ. ಬಿಜೆಪಿ ಸಂಸದ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಡುವೆ ಆರೋಪ ಪ್ರತ್ಯಾರೋಪಗಳ ಸಮರ ಶುರುವಾಗಿದೆ. ಇಬ್ಬರ ನಡುವೆ ಕೂಸು ಬಡವಾಯಿತೆಂಬ ಸ್ಥಿತಿ ದುರ್ಗದ ಜನರಿಗೆ ಎದುರಾಗಿದೆ. ಹೀಗಾಗಿ, ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಪ್ರತಿಷ್ಠೆ ಬಿಟ್ಟು ಕೋಟೆನಾಡಿಗೆ ಭದ್ರೆ ಹರಿಸಲು ತ್ವರಿತಗತಿಯ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.