ನನಗೀಗ 82 ವರ್ಷ, ದೇವರು ಶಕ್ತಿಕೊಟ್ರೆ ಇನ್ನೊಂದು ವಿಧಾನಸಭೆ, ಲೋಕಸಭೆ ಚುನಾವಣೆ ಮಾಡ್ತೇನೆ:ಬಿಎಸ್ವೈ
ಲೋಕಸಭಾ ಚುನಾವಣೆ ಹಿನ್ನಲೆ ಉಭಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದೆ. ಅದರಂತೆ ಇಂದು(ಏ.16) ಚಿತ್ರದುರ್ಗ(Chitradurga)ದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಮಾತನಾಡಿ, ‘ಎಲ್ಲೆಡೆ ಮೋದಿ ಮೋದಿ ಘೋಷಣೆ ಕೇಳುತ್ತಿದ್ದು, ದೇವೇಗೌಡರು ಸಹ ರಾಜ್ಯದಲ್ಲಿ ಸಂಚರಿಸಿ ಮತಯಾಚನೆ ಮಾಡುತ್ತಿದ್ದಾರೆ. ಅದರಂತೆ ಗೋವಿಂದ ಕಾರಜೋಳಗೆ ಗೆಲ್ಲಿಸಿದರೆ ನನಗೆ ಗೆಲ್ಲಿಸಿದಂತೆ ಎಂದರು.
ಚಿತ್ರದುರ್ಗ, ಏ.16: ನನಗೀಗ 82ವರ್ಷ, ದೇವರು ಶಕ್ತಿಕೊಟ್ಟರೆ ಇನ್ನೊಂದು ವಿಧಾನಸಭೆ, ಲೋಕಸಭೆ ಚುನಾವಣೆ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಹೇಳಿದರು. ಚಿತ್ರದುರ್ಗ(Chitradurga)ದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಗೋವಿಂದ ಕಾರಜೋಳಗೆ ಗೆಲ್ಲಿಸಿದರೆ ನನಗೆ ಗೆಲ್ಲಿಸಿದಂತೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ, ಆದರೆ ಮೋದಿ ಎದುರು ಮತ್ತೊಂದು ಹೆಸರು ಹೇಳುವ ಧೈರ್ಯ ಇಲ್ಲ. ಹೀಗಾಗಿ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಇನ್ನು ಹಂಪಿ ಉತ್ಸವದಂತೆ ಮದಕರಿ ನಾಯಕ ಉತ್ಸವ ಮಾಡುವ ಭರವಸೆ ನೀಡಿದ ಅವರು, ‘ಭದ್ರಾ ಯೋಜನೆಗೆ 5.300ಕೋಟಿ ಈವತ್ತಲ್ಲ, ನಾಳೆ ಬರಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷದಿಂದ ತಡವಾಗಿರಬಹುದು. ಮೋದಿ, ಅಮಿತ್ ಶಾ ಜೊತೆ ಮಾತಾಡಿ ಶೀಘ್ರ ಅನುದಾನ ತರುತ್ತೇವೆ ಎಂದರು. ಕಿಸಾನ್ ಸಮ್ಮಾನ್ ಯೋಜನೆ ಅಡಿ 4ಸಾವಿರ ರೂ.ಕೊಡುವುದನ್ನು ಸಿದ್ಧರಾಮಯ್ಯ ಸರ್ಕಾರ ನಿಲ್ಲಿಸಿದೆ. ಇದಷ್ಟೇ ಅಲ್ಲ, ದುಡ್ಡಿಲ್ಲದೆ ಕಾಂಗ್ರೆಸ್ ಸರ್ಕಾರ ಭಾಗ್ಯ ಲಕ್ಷ್ಮಿ ಯೋಜನೆ, ಹಾಲು ಉತ್ಪಾದನೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ನಿಲ್ಲಿಸಿದೆ.
ಇದನ್ನೂ ಓದಿ:ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ: ಬಿಎಸ್ ಯಡಿಯೂರಪ್ಪ
ಬಿಜೆಪಿ-ಜೆಡಿಎಸ್ ಹಾಲು-ಜೇನಿನಂತೆ ಒಂದಾಗಿ ಕೆಲಸ
ರಾಜಕೀಯ ದೊಂಬರಾಟ ಇನ್ಮುಂದೆ ನಡೆಯಲ್ಲ, ಜಾತಿ ವಿಷ ಬೀಜ ಬಿತ್ತಿ ಮತ ಪಡೆಯುವ ಕಾಂಗ್ರೆಸ್ ತಂತ್ರ, ಹಣ ಹೆಂಡದ ಬಲದಿಂದ ಮತ ಪಡೆಯುವ ಕಾಂಗ್ರೆಸ್ ಭರವಸೆ ನಡೆಯಲ್ಲ. ಈಗಾಗಲೇ ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ ಹಾಲು ಜೇನಿನಂತೆ ಒಂದಾಗಿ ಕೆಲಸ ಮಾಡುತ್ತಿದ್ದೇವೆ, ನಮ್ಮನ್ನು ಬೇರ್ಪಡಿಸುವ ಕಾಂಗ್ರೆಸ್ ತಂತ್ರ ನಡೆಯಲ್ಲ. ಹೀಗಾಗಿ ನೀವೆಲ್ಲ ಒಟ್ಟಾಗಿ ಬಿಜೆಪಿಗೆ ಮತದಾನ ಮಾಡಿಸಿ ಎಂದು ಮನವಿ ಮಾಡಿದರು. ಇನ್ನು ವಾತಾವರಣ ನಮಗೆ ತುಂಬಾ ಅನುಕೂಲಕರವಾಗಿದ್ದು, ಎಲ್ಲೆಡೆ ಮೋದಿ ಮೋದಿ ಘೋಷಣೆ ಕೇಳುತ್ತಿದೆ. ದೇವೇಗೌಡರು ಸಹ ರಾಜ್ಯದಲ್ಲಿ ಸಂಚರಿಸಿ ಮತಯಾಚನೆ ಮಾಡುತ್ತಿದ್ದಾರೆ. ಕಾರಜೋಳ ಕನಿಷ್ಟ 2 ಲಕ್ಷ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಬೇಡ ಅಂದರೂ ಬಿಎಸ್ ವೈ, ವರಿಷ್ಠರು ಸ್ಪರ್ಧೆಗಿಳಿಸಿದ್ದಾರೆ
ಇದೇ ವೇಳೆ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿಯಾದ ಗೋವಿಂದ ಕಾರಜೋಳ ಮಾತನಾಡಿ, ‘20ವರ್ಷದಿಂದ ನನ್ನನ್ನ ಒಡಹುಟ್ಟಿದ ಸಹೋದರನಂತೆ ಬಿಎಸ್ ವೈ ಕಂಡಿದ್ದಾರೆ. ನನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಬಿಎಸ್ ಯಡಿಯೂರಪ್ಪ. ನರೇಂದ್ರ ಮೋದಿ ಅವರು ಕಳಂಕರಹಿತ ರಾಜಕಾರಣಿ, ನೂರಾರು ದೇಶ ಮೆಚ್ಚಿ ಹೌದೌದು ಎನ್ನುವಂತೆ ಮೋದಿ ಆಡಳಿತವಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಎರಡು ದೈತ್ಯ ಶಕ್ತಿ ಒಂದಾಗಿವೆ. ‘ನಾನು ಬೇಡ ಅಂದರೂ ಬಿಎಸ್ ವೈ, ವರಿಷ್ಠರು ಸ್ಪರ್ಧೆಗಿಳಿಸಿದ್ದಾರೆ. ಯಾವ ಜನ್ಮದ ರುಣಾನುಬಂಧವೋ ಗೊತ್ತಿಲ್ಲ. ಬಸವಣ್ಣನ ನಾಡಿನಲ್ಲಿ ಹುಟ್ಟಿ ಚಿತ್ರದುರ್ಗಕ್ಕೆ ಬಂದಿದ್ದೇನೆ. ಈ ಕ್ಷೇತ್ರದ ಜನರ ರುಣ ನನ್ನ ಮೇಲಿದೆ, ಆ ರುಣ ತೀರಿಸಲು ಭಗವಂತ ಅವಕಾಶ ನೀಡಿದ್ದಾನೆಂದು ಭಾವಿಸಿದ್ದೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Tue, 16 April 24