ಸಿಬಿಐ ನಿವೃತ್ತ ಎಸ್​ಪಿಯ 97ಲಕ್ಷ ರೂ. ಸಮೇತ ಬಾಡಿಗೆ ಕಾರು ಚಾಲಕ ಪರಾರಿ: ಕೆಲವೇ ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂಧನ

ಅವರು ಸಿಬಿಐನ ನಿವೃತ್ತ ಎಸ್​​ಪಿ. ಅವರಿಗೆ ಸೇರಿದ 97 ಲಕ್ಷ ರೂಪಾಯಿ ಸಮೇತ ಬಾಡಿಗೆ ಕಾರು ಚಾಲಕ ಪರಾರಿ ಆಗಿದ್ದ ಪ್ರಕರಣ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಚಳ್ಳಕೆರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆ ಹೇಗಿತ್ತೆಂಬ ವಿವರ ಇಲ್ಲಿದೆ.

ಸಿಬಿಐ ನಿವೃತ್ತ ಎಸ್​ಪಿಯ 97ಲಕ್ಷ ರೂ. ಸಮೇತ ಬಾಡಿಗೆ ಕಾರು ಚಾಲಕ ಪರಾರಿ: ಕೆಲವೇ ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂಧನ
ಆರೋಪಿ ರಮೇಶ್ ಹಾಗೂ ನಗದಿನ ಜತೆ ಚಳ್ಳಕೆರೆ ಪೊಲೀಸರು
Updated By: Ganapathi Sharma

Updated on: Aug 28, 2025 | 1:04 PM

ಚಿತ್ರದುರ್ಗ, ಆಗಸ್ಟ್ 28: ಸಿಬಿಐ (CBI) ನಿವೃತ್ತ ಎಸ್​​ಪಿಯನ್ನೇ ಯಾಮಾರಿಸಿ 97 ಲಕ್ಷ ರೂ. ಸಮೇತ ಬಾಡಿಕೆ ಕಾರು ಚಾಲಕನೊಬ್ಬ ಪರಾರಿಯಾಗಿದ್ದು, ಅದಾದ ಕೆಲವೇ ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂಧನಕ್ಕೊಳಗಾದ ಘಟನೆ ಚಿತ್ರದುರ್ಗದ (Chitradurga) ಚಳ್ಳಕೆರೆಯಲ್ಲಿ ನಡೆದಿದೆ. ಇದೀಗ ಚಳ್ಳಕೆರೆ ಪೊಲೀಸರ (Challakere Police) ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಬೆಂಗಳೂರು ಮೂಲದ ಸಿಬಿಐನ ನಿವೃತ್ತ ಎಸ್​​ಪಿ ಗುರುಪ್ರಸಾದ್ ಪತ್ನಿ ಲಲಿತಾ ಜತೆ ಬಾಡಿಗೆ ಕಾರಿನಲ್ಲಿ ಮಂಗಳವಾರ ಬಳ್ಳಾರಿಗೆ ತೆರಳಿದ್ದರು. ಬಳ್ಳಾರಿಯಲ್ಲಿದ್ದ ಜಮೀನು ಮಾರಾಟ ಮಾಡಿ 97ಲಕ್ಷ ರೂ. ಪಡೆದಿದ್ದರು. ಬಳಿಕ ಅದೇ ಕಾರಲ್ಲಿ ವಾಪಸ್ ಬೆಂಗಳೂರಿಗೆ ಹೊರಟಿದ್ದರು.

ಮಧ್ಯಾಹ್ನದ ವೇಳೆಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಹೋಟೆಲ್ ಒಂದರ ಬಳಿ ಊಟಕ್ಕೆ ನಿಂತಿದ್ದರು. ಬೇಗನೆ ಊಟ ಮುಗಿಸಿದ ಕಾರು ಚಾಲಕ, ಗುರುಪ್ರಸಾದ್ ಅವರನ್ನು ಯಾಮಾರಿಸಿ ಕಾರಲ್ಲಿದ್ದ ಹಣದ ಸಮೇತ ಪರಾರಿ ಆಗಿದ್ದಾನೆ. ಗುರುಪ್ರಸಾದ್ ತಕ್ಷಣ ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು ಡಿವೈಎಸ್ಪಿ ರಾಜಣ್ಣ, ಸಿಪಿಐ ಕುಮಾರ್, ಪಿಎಸ್​ಐ ಈರೇಶ್ ಹಾಗೂ ತಂಡ ಸಿನಿಮೀಯ‌ ರೀತಿಯಲ್ಲಿ ಬೆನ್ನತ್ತಿದೆ. ಪಾವಗಡ ಬಳಿ, ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಚಾಲಕ ರಮೇಶ್ ವೇಗವಾಗಿ ಚಾಲನೆ ಮಾಡಿದಾಗ ಮರಕ್ಕೆ ಕಾರು ಡಿಕ್ಕಿಯಾಗಿದೆ. ಪೊಲೀಸರು ಆರೋಪಿ ರಮೇಶನನ್ನು ಬಂಧಿಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗದಲ್ಲಿ ಕಾಂಗ್ರೆಸ್​ ಶಾಸಕ ಕೆಸಿ ವೀರೇಂದ್ರ ಮನೆ ಮೇಲೆ ಇ.ಡಿ ದಾಳಿ

ಇದನ್ನೂ ಓದಿ
ಶಾಸಕ ವೀರೇಂದ್ರ ಪಪ್ಪಿ ಬಂಧನ: ಇಡಿ ದಾಳಿ ವೇಳೆ ಕೋಟ್ಯಂತರ ರೂ ನಗದು ಪತ್ತೆ
ವಿರೇಂದ್ರ ಪಪ್ಪಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ
ಕರ್ನಾಟಕದಲ್ಲಿ ಇಡಿ ದಾಳಿ, ಸಿಕ್ಕಿಂನಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕ?
ಗೇಮಿಂಗ್​ ಆ್ಯಪ್​ಗಳಿಗೆ ಹಣ ವರ್ಗಾವಣೆ? ಕೈ​ ಶಾಸಕನ ಮನೆ ಮೇಲೆ ಇಡಿ ದಾಳಿ

ಆಂಧ್ರ ಪ್ರದೇಶದ ಹಿಂದೂಪುರ ಮೂಲದ‌ ರಮೇಶ್, ಬೆಂಗಳೂರಿನಿಂದ‌ ಗುರುಪ್ರಸಾದ್ ಜತೆಗೆ ಕಾರು ಚಾಲನೆ ಮಾಡಿಕೊಂಡು ಬರುತ್ತಲೇ‌ ಎಲ್ಲಾ ವಿಷಯ ತಿಳಿದುಕೊಂಡಿದ್ದಾನೆ. ಬಳ್ಳಾರಿಯಲ್ಲಿ ಜಮೀನು ಮಾರಾಟ‌ ಮಾಡಿ 97 ಲಕ್ಷ‌ ರೂ. ಪಡೆದು ಕಾರಲ್ಲಿಟ್ಟಾಗಲೇ ಕದಿಯಲು ಹೊಂಚು ಹಾಕಿದ್ದಾನೆ. ಚಳ್ಳಕೆರೆ ಬಳಿ ಊಟಕ್ಕೆ‌ ಕಾರು ನಿಲ್ಲಿಸುತ್ತಿದ್ದಂತೆಯೇ ಹೋಟೆಲ್‌ಗೆ ತೆರಳಿ ಬೇಗ ಊಟ ಮುಗಿಸಿ ಎದ್ದಿದ್ದಾನೆ. ಕಾರಿನಲ್ಲಿ ಹಣದ ಸಮೇತ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಸದ್ಯ, ಘಟನೆ ನಡೆದ ನಾಲ್ಕು ತಾಸುಗಳಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಮತ್ತೊಂದೆಡೆ, ನದಗು ವಹಿವಾಟಿಗೆ ಹೆಚ್ಚಿನ ನಿರ್ಬಂಧ ಹಾಗೂ ಮಿತಿಗಳಿರುವುದರಿಂದ ಅಪಾರ ಪ್ರಮಾಣದ ಕರೆನ್ಸಿಯೊಂದಿಗೆ ಸಿಬಿಐ ನಿವೃತ್ತ ಎಸ್​​ಪಿ ಕಾರಿನಲ್ಲಿ ಹೇಗೆ ಪ್ರಯಾಣಿಸಿದರು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಆದರೆ, ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆಸ್ತಿ ಮಾರಾಟ ಮಾಡಿದ್ದು ಮತ್ತು ನಗದಿನೊಂದಿಗೆ ತೆರಳುವುದಕ್ಕೆ ಸಂಬಂಧಿಸಿ ಸೂಕ್ತ ದಾಖಲೆಯನ್ನು ಅವರು ಹೊಂದಿದ್ದರು ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 am, Thu, 28 August 25