ಚಿತ್ರದುರ್ಗ ಅಸ್ಥಿಪಂಜರ ಪತ್ತೆ ಪ್ರಕರಣ: ಆತ್ಮಹತ್ಯೆಗೆ ಶರಣಾದ ಜಗನ್ನಾಥರೆಡ್ಡಿ ಕುಟುಂಬ? ಡೆತ್​​ ನೋಟ್​ನಿಂದ ರಿವೀಲ್​ ಆಯ್ತು ಹಲವು ಅಂಶ

ಚಿತ್ರದುರ್ಗದ ಚಳ್ಳಕೆರೆ ಗೇಟ್​ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಹೌದು ಜಗನ್ನಾಥರೆಡ್ಡಿ ಮನೆಯಲ್ಲಿ ಸಿಕ್ಕ ಡೆತ್ ನೋಟ್​​ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಚಿತ್ರದುರ್ಗ ಅಸ್ಥಿಪಂಜರ ಪತ್ತೆ ಪ್ರಕರಣ: ಆತ್ಮಹತ್ಯೆಗೆ ಶರಣಾದ ಜಗನ್ನಾಥರೆಡ್ಡಿ ಕುಟುಂಬ? ಡೆತ್​​ ನೋಟ್​ನಿಂದ ರಿವೀಲ್​ ಆಯ್ತು ಹಲವು ಅಂಶ
ಜಗನ್ನಾಥರೆಡ್ಡಿ ಮನೆಯಲ್ಲಿ ಪೊಲೀಸರ ಶೋಧ
Updated By: ವಿವೇಕ ಬಿರಾದಾರ

Updated on: Jan 01, 2024 | 9:34 AM

ಚಿತ್ರದುರ್ಗ, ಜನವರಿ 01: ಇಲ್ಲಿನ ಚಳ್ಳಕೆರೆ (Challakere) ಗೇಟ್​ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ (Skeleton) ಪತ್ತೆಯಾಗಿದ್ದ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಹೌದು ಜಗನ್ನಾಥರೆಡ್ಡಿ ಮನೆಯಲ್ಲಿ ಸಿಕ್ಕ ಡೆತ್ ನೋಟ್​​ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಚಿತ್ರದುರ್ಗ (Chiradurga) ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯಲ್ಲಿದ್ದ ನಿವೃತ್ತ ಇಂಜಿಯರ್ ಜಗನ್ನಾಥರೆಡ್ಡಿ ಅವರ ಜಮೀನು ಇದೆ. ಈ ಜಮೀನು ವಿಚಾರವಾಗಿ ರವಿ ಮತ್ತು ವಿಶ್ವಾಸ್ ಎಂಬುವರು ಜಗನ್ನಾಥರೆಡ್ಡಿ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಪೊಲೀಸರು ರವಿ ಮತ್ತು ವಿಶ್ವಾಸ್ ಎಂಬುವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಇನ್ನು ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ಬಿಡದಿ ಪೊಲೀಸ್​ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ನರೇಂದ್ರರೆಡ್ಡಿ ವಿರುದ್ಧ 2013ರಲ್ಲಿ ಬಿಡದಿ ಪೊಲೀಸ್​ ಠಾಣೆಯಲ್ಲಿ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಬಳಿಕ ತುಮಕೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: 1 ಕೇಸಿನಿಂದ ಮನನೊಂದು 2019ರಲ್ಲೇ ಐವರು ಆತ್ಮಹತ್ಯೆ: ಈಗ ಅಸ್ಥಿಪಂಜರ ಪತ್ತೆ: ಎಸ್ಪಿ ಹೇಳಿದ್ದೇನು?

ನರೇಂದ್ರರೆಡ್ಡಿ ವಿರುದ್ಧ ಡಕಾಯಿತಿ ಮತ್ತು ವಂಚನೆ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಜಗನ್ನಾಥರೆಡ್ಡಿ ಅವರಿಗೆ ಕಿರುಕುಳ ನೀಡಿದ್ದಾರೆ. ಪುತ್ರ ನರೇಂದ್ರರೆಡ್ಡಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲು ಜಗನ್ನಾಥರೆಡ್ಡಿ ಅಪಾರ ಹಣ ಖರ್ಚು ಮಾಡಿದ್ದರು. ಈ ಎರಡು ಘಟನೆಯಿಂದ ಮಾನಸಿಕವಾಗಿ ನೊಂದು, ನಿವೃತ್ತ ಇಂಜಿಯರ್ ಜಗನ್ನಾಥರೆಡ್ಡಿ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಡೆತ್ ನೋಟ್​ನಲ್ಲಿ ಉಲ್ಲೇಖವಾಗಿದೆ.

ಹೀಗಾಗಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಜಗನ್ನಾಥರೆಡ್ಡಿ ಕುಟುಂಬ 2019ರಲ್ಲೇ ಮೃತಪಟ್ಟಿರುವ ಸಾಧ್ಯತೆ ಇದೆ. ಇನ್ನು ಪಾಳು ಬಿದ್ದ ಮನೆಯಲ್ಲಿ ಅನೇಕ ಸಲ ಕಳ್ಳರು ನುಗ್ಗಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಪತ್ತೆಯಾದ ಫಿಂಗರ್ ಪ್ರಿಂಟ್ ಮತ್ತು ಇತರೆ ದಾಖಲೆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಟಿವಿ9 ಡಿಜಿಟಲ್​ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ