ಚಿತ್ರದುರ್ಗ: ಪಾಳುಬಿದ್ದ ಮನೆಯಲ್ಲಿ ನಿಗೂಢ ಐದು ಅಸ್ಥಿಪಂಜರ ಪತ್ತೆ

ಚಿತ್ರದುರ್ಗದ ಚಳ್ಳಕೆರೆ ಗೇಟ್​ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ ಆಗಿವೆ. ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ (80) ಮತ್ತು ಅವರ ಕುಟುಂಬ ವಾಸವಾಗಿತ್ತು. ಪ್ರಕರಣದ ಸಂಬಂಧ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ದೂರು ದಾಖಲಿಸಿದ್ದಾರೆ.

ಚಿತ್ರದುರ್ಗ: ಪಾಳುಬಿದ್ದ ಮನೆಯಲ್ಲಿ ನಿಗೂಢ ಐದು ಅಸ್ಥಿಪಂಜರ ಪತ್ತೆ
ಪತ್ತೆಯಾದ ಅಸ್ಥಿಪಂಜರ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ವಿವೇಕ ಬಿರಾದಾರ

Updated on:Dec 29, 2023 | 9:51 AM

ಚಿತ್ರದುರ್ಗ, ಡಿಸೆಂಬರ್​ 29: ನಗರದ ಚಳ್ಳಕೆರೆ (Challakere) ಗೇಟ್​ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ (Skeleton) ಪತ್ತೆ ಆಗಿವೆ. ಈ ಸಂಬಂಧ ಪವನ್ ಕುಮಾರ್ ಎಂಬುವರು ಚಿತ್ರದುರ್ಗ (Chitradurga) ಬಡಾವಣೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮನೆಯಲ್ಲಿ ಪವನ್ ಕುಮಾರ್ ಸಂಬಂಧಿ ಜಗನ್ನಾಥರೆಡ್ಡಿ ಮತ್ತು ಕುಟುಂಬ ವಾಸವಾಗಿದ್ದರು. ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು.

ಸ್ಥಳೀಯರೊಬ್ಬರು ನೀಡಿದ ಮಾಹಿತಿ ಅಧರಿಸಿ ಪೊಲೀಸರು ಪಾಳುಬಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಅಸ್ಥಿಪಂಜರಗಳು ಸಿಕ್ಕಿವೆ. ಸ್ಥಳಕ್ಕೆ ಡಿವೈಎಸ್‌ಪಿ ಪಿ.ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಕೊಲೆಯಾಗಿದ್ದಾರೆಯೇ? ಎಂಬುವುದರ ಕುರಿತು ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ಅಸ್ಥಿಪಂಜರಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಲು ತೀರ್ಮಾನಿಸಲಾಗಿದೆ. ಪೊಲೀಸರ ಸೂಕ್ತ ತನಿಖೆ ಬಳಿಕವಷ್ಟೇ ಐದು ಅಸ್ಥಿಪಂಜರಗಳ ಹಿನ್ನೆಲೆ ಗೊತ್ತಾಗಲಿದೆ.

ಈ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಮಾತನಾಡಿ “ಜಗನ್ನಾಥರೆಡ್ಡಿ (80) ನಿವೃತ್ತ ಇಂಜಿನಿಯರ್ ಆಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ, ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಜಗನ್ನಾಥರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು” ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: Bengal Crime: ಮಹಿಳೆ ಕಾಣೆಯಾಗಿ 3 ವರ್ಷಗಳ ಬಳಿಕ ಸೆಪ್ಟಿಕ್ ಟ್ಯಾಂಕ್​ನಲ್ಲಿ ಪತ್ತೆಯಾಯ್ತು ಅಸ್ಥಿಪಂಜರ

ಬುಧವಾರ (ಡಿ.27) ರಂದು ಕಳ್ಳರು ಬಾಗಿಲು ಹೊಡೆದು ಹಾಗೇ ಹೋಗಿರಬಹುದು. ಗುರುವಾರ (ಡಿ.28) ರ ಸಂಜೆ ವೇಳೆ ನಾಯಿಗಳು ಮನೆಯೊಳಗೆ ಹೋಗಿವೆ.ನಾಯಿಗಳು ತಲೆ ಬುರುಡೆಗಳನ್ನು ತಂದು ಮನೆ ಬಾಗಿಲ ಬಳಿ  ಹಾಕಿರಬಹುದು. ತಲೆ ಬುರುಡೆ ಕಂಡ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಟಿವಿ9ಗೆ ಸ್ಥಳೀಯ ದೇವರಾಜ್ ಅವರು ಮಾಹಿತಿ ನೀಡಿದ್ದಾರೆ.

ಸುಮಾರು 10ವರ್ಷದಿಂದ ನಾನು ಈ ಮನೆಯಲ್ಲಿ ಯಾರನ್ನೂ ನೋಡಿಲ್ಲ. ಕೃಷ್ಣರೆಡ್ಡಿ (ಬಾಬುರೆಡ್ಡಿ) ಮಾತ್ರ 10 ವರ್ಷದ ಹಿಂದೆ ಆಗಾಗ ಭೇಟಿ ಆಗುತ್ತಿದ್ದರು. ತರಕಾರಿ ಮತ್ತು ಹಾಲು ತರಲು ಹೊರಗೆ ಬರುತ್ತಿದ್ದರು. ಮನೆಯಲ್ಲಿ ವಯಸ್ಸಾದವರು, ನಡೆಯಲಾಗದಷ್ಟು ದಪ್ಪ ಇದ್ದವರು ಇದ್ದರು. ಮನೆ ಮುಂದೆ ರಸ್ತೆ, ಚರಂಡಿ ನಿರ್ಮಾಣ ವೇಳೆಯೂ ಮನೆಯಲ್ಲಿ ಯಾರೂ ಕಂಡುಬಂದಿಲ್ಲ. 10 ವರ್ಷದ ಹಿಂದೆಯೇ ಸಾವಿಗೀಡಾಗಿರಬಹುದು ಎಂದು ವಾಲ್‌ಮನ್ ಪರಶುರಾಮ್ ಶಂಕೆ ವ್ಯಕ್ತಪಡಿಸಿದ್ದಾರೆ.

ಜಗನ್ನಾಥರೆಡ್ಡಿ ಮನೆಯಲ್ಲಿ 2019ರ ಕ್ಯಾಲೆಂಡರ್ ಇದೆ ಎಂಬ ಮಾಹಿತಿ ಇದೆ. ಕೊರೊನಾ ಸಮಯದಲ್ಲಿ ಐವರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ನಾವು ಮೂರು ವರ್ಷದ ಹಿಂದೆಯೇ ಈ ಬಡಾವಣೆಗೆ ಬಂದಿದ್ದೇವೆ. ಜಗನ್ನಾಥರೆಡ್ಡಿ ಕುಟುಂಬದವರನ್ನು‌ ನಾವು ನೋಡಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಟಿವಿ9ಗೆ ಸ್ಥಳೀಯ ನಿವಾಸಿ ಭದ್ರಿ ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:23 am, Fri, 29 December 23