ಪತಿಯ ಕೊಲೆ ಅಳಿಯನ ತಲೆಗೆ ಕಟ್ಟಿ ಪ್ರಿಯಕರನ ಜೊತೆ ಜಾಲಿಯಾಗಿರಲು ಪ್ಲಾನ್​ ಮಾಡಿದ್ದ ಪತ್ನಿ

ಕೋಟೆನಾಡು ಚಿತ್ರದುರ್ಗದಲ್ಲಿ ಆಟೋ ಚಾಲಕನ ಭೀಕರ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮೃತನ ಪತ್ನಿ ಮತ್ತು ಪುತ್ರ ತಾವೆಸಗಿದ ಪಾಪ ಕೃತ್ಯವನ್ನು ಮತ್ತೊಬ್ಬನ ತಲೆಗೆ ಕಟ್ಟಲು ಸಂಚು ರೂಪಿಸಿದ್ದರು. ಆದರೆ, ಪೊಲೀಸ್​ ತನಿಖೆಯಲ್ಲಿ ಸತ್ಯ ಬಯಲಾಗಿದ್ದು, ತಾಯಿ-ಮಗ ಮತ್ತು ಪ್ರಿಯಕರ ಜೈಲು ಪಾಲಾಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ.

ಪತಿಯ ಕೊಲೆ ಅಳಿಯನ ತಲೆಗೆ ಕಟ್ಟಿ ಪ್ರಿಯಕರನ ಜೊತೆ ಜಾಲಿಯಾಗಿರಲು ಪ್ಲಾನ್​ ಮಾಡಿದ್ದ ಪತ್ನಿ
ಆರೋಪಿಗಳಾದ ವಿಷ್ಣು, ಸುನೀತಾ, ಗಣೇಶ್​
Edited By:

Updated on: Aug 13, 2025 | 9:04 PM

ಚಿತ್ರದುರ್ಗ, ಆಗಸ್ಟ್​ 13: ಕಳೆದ ತಿಂಗಳು ಜುಲೈ 20ರಂದು ಚಿತ್ರದುರ್ಗ (Chitradurga) ತಾಲೂಕಿನ ಈರಜ್ಜನಹಟ್ಟಿ ಬಳಿ ಬೆಡ್ ಶೀಟ್​ನಲ್ಲಿ ಓರ್ವ ವ್ಯಕ್ತಿಯ ಶವ ಪತ್ತೆಯಾಗಿತ್ತು. ಪೊಲೀಸರು (Police) ಪರಿಶೀಲಿಸಿದಾಗ ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯ ಆಟೋ ಚಾಲಕ ರವಿಕುಮಾರ್ (50) ಎಂಬುದು ಖಚಿತವಾಗಿತ್ತು. ರವಿಕುಮಾರ್ ಪತ್ನಿ ಸುನೀತಾ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

“ಜುಲೈ 19ರ ಸಂಜೆ ಪತಿ ರವಿಕುಮಾರ್ ಆಟೋ ಓಡಿಸಲು ಹೋದವರು ಮನೆಗೆ ಬಂದಿರಲಿಲ್ಲ. ಈಗ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಪುತ್ರಿ ಜಯಶ್ರೀ, ಐಮಂಗಲದ ಮಂಜುನಾಥ್ ಎಂಬುವರನ್ನು ಪ್ರೀತಿಸಿ ಮದುವೆ ಆಗಿದ್ದಾಳೆ. ಮಂಜುನಾಥ್ ಕುಡಿತಕ್ಕೆ ಶರಣಾಗಿದ್ದಾನೆ. ಪತಿ ರವಿಕುಮಾರ್ ಮತ್ತು ಅಳಿಯ ಮಂಜುನಾಥ್ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಕೆಲ ತಿಂಗಳಿಂದ ಪುತ್ರಿ ಜಯಶ್ರೀ, ಪತಿಯನ್ನು ತೊರೆದು ತವರು ಸೇರಿದ್ದಾಳೆ. ಹೀಗಾಗಿ, ಅದೇ ದ್ವೇಷದಿಂದ ಅಳಿಯ ಮಂಜುನಾಥ್​ನೇ, ನನ್ನ ಪತಿ ರವಿಕುಮಾರ್​ರನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿ” ದೂರು ದಾಖಲಿಸಿದ್ದರು.

ಕೈಹಿಡಿದ ಟೆಕ್ಸಿನಕಲ್​ ಎವಿಡೆನ್ಸ್​

ಆಗ ಪೊಲೀಸರು ಮಂಜುನಾಥ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆದರೆ, ಮಂಜುನಾಥ್​ಗೂ ಮತ್ತು ಈ ಕೊಲೆಗೂ ಸಂಬಂಧವೇ ಇಲ್ಲ ಎಂಬುದು ತಿಳಿದಿತ್ತು. ಟೆಕ್ನಿಕಲ್ ಎವಿಡೆನ್ಸ್ ಹುಡುಕುತ್ತಾ ಹೊರಾಟಾಗ ಕೆಳಗೋಟೆಯ ಓರ್ವ ಮಂಗಳಮುಖಿಯ ಮನೆಯಲ್ಲಿ ಕೊಲೆ ಮಾಡಿ ಈರಜ್ಜನಹಟ್ಟಿ ಬಳಿಗೆ ತಂದು ಶವ ಬಿಸಾಡಿದ್ದು ಬಯಲಾಗಿದೆ. ಮಂಗಳಮುಖಿ ಕಲ್ಪನಾ ವಿಚಾರಣೆ ನಡೆಸಿದಾಗ ಅಸಲಿಯತ್ತು ಬಯಲಾಗಿದೆ.

ಕೇಸ್​ಗೆ ಎಂಟ್ರಿ ಕೊಟ್ಟ ಸುನಿತಾಳ ಹೃದಯ ಕದ್ದ ಕಳ್ಳ

ಬೆಂಗಳೂರು ಮೂಲದ ಗಣೇಶ ಅಲಿಯಾಸ್ ಟಚ್ ಗಣೇಶ ಹಲವೆಡೆ ಕಳ್ಳತನ ಪ್ರಕರಗಳಲ್ಲಿ ಭಾಗಿಯಾಗಿದ್ದನು. ಬೆಂಗಳೂರಿನಿಂದ ತಪ್ಪಿಸಿಕೊಂಡು ಚಿತ್ರದುರ್ಗದಲ್ಲಿನ ಓರ್ವ ಮಂಗಳಮುಖಿ ಮನೆಯಲ್ಲಿ ಆಶ್ರಯ ಪಡೆದಿದ್ದನು. ಕಳೆದ ಕೆಲ‌ ತಿಂಗಳಿಂದ ಪಕ್ಕದ ಮನೆಯ ಸುನೀತಾಳ ಜೊತೆ ಲವ್ವಿಡವ್ವಿಯಲ್ಲಿ ತೊಡಗಿದ್ದನು. ವಿಷಯ ತಿಳಿದ ಆಟೋ ಚಾಲಕ ರವಿಕುಮಾರ್ ಪತ್ನಿ ಜೊತೆ ಜಗಳವಾಡಿದ್ದನು. ಆದರೂ ಕೂಡ ಇವರಿಬ್ಬರ ನಡುವಿನ ಲವ್ವಿಡವ್ವಿ ನಿಂತಿರಲಿಲ್ಲ.

ಗಣೇಶ ತನ್ನ ಬಳಿ ಕಳ್ಳತನದಿಂದ ಬಂದ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ ಇರುವುದಾಗಿ ಬಿಂಬಿಸಿಕೊಂಡಿದ್ದನು. ಪ್ರೇಯಸಿ ಸುನೀತಾ ಮತ್ತು ಸುನೀತಾ ಪುತ್ರ ವಿಷ್ಣುಗೂ ಹಣದಾಸೆ ತೋರಿಸಿದ್ದನು. ಈ ಹಣದಲ್ಲಿ ಬ್ಯುಸಿನೆಸ್ ಶುರುಮಾಡುವುದಲ್ಲದೇ ಮನೆ ಕಟ್ಟಿಸಿಕೊಂಡು ಸೆಟ್ಲ್ ಆಗೋಣ ಎಂದು ಹೇಳಿ ನಂಬಿಸಿದ್ದನು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ರವಿಕುಮಾರ್ ಕಥೆ ಮುಗಿಸಲು ಮೂವರು ಸೇರಿ ಸ್ಕೆಚ್ ಹಾಕಿದ್ದರು.

ಇದನ್ನೂ ಓದಿ: ಹಾಡಹಗಲೇ ಲೇಡಿಸ್ ಪಿಜಿಗೆ ನುಗ್ಗಿದ ಖದೀಮ; ಚಾಕು ತೋರಿಸಿ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ

ಮಂಗಳಮುಖಿ ಮನೆಯಲ್ಲಿ ಕೊಲೆ

ಗಣೇಶ ಜುಲೈ 19ರಂದು ರವಿಕುಮಾರ್​ನನ್ನು ಮಂಗಳಮುಖಿ ಮನೆಗೆ ಕರೆದುಕೊಂಡು ಹೋಗಿ ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಈರಜ್ಜನಹಟ್ಟಿ ಬಳಿ ಶವ ಬಿಸಾಡಿ ಪರಾರಿಯಾಗಿದ್ದಾನೆ. ಬಳಿಕ ತಾಯಿ, ಮಗ ಹೈಡ್ರಾಮಾ ಮಾಡಿ ಅಳಿಯನ ಮೇಲೆ ಕೊಲೆ ಆರೋಪ ಹೊರಿಸಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಆದರೆ, ಡಿವೈಎಸ್​ಪಿ ದಿನಕರ್, ಪಿಎಸ್​ಐ ಸುರೇಶ್ ನೇತೃತ್ವದ ಪೊಲೀಸರ ತಂಡ ಕೊನೆಗೂ ಅಸಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಒಟ್ಟಾರೆಯಾಗಿ ಚಿತ್ರದುರ್ಗದಲ್ಲಿ ಪತ್ನಿ ಮತ್ತು ಪುತ್ರ ಕಿರಾತಕ ಕಳ್ಳನ ಜೊತೆ ಸೇರಿ ಸಂಬಂಧವನ್ನು ಮರೆತು ಅಮಾಯಕ ಆಟೋ ಚಾಲಕನ ಬಲಿ ಪಡೆದಿದ್ದಾರೆ. ತಾಯಿ, ಮಗ ಮತ್ತು ಪ್ರಿಯತಮ ಜೈಲು ಪಾಲಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ಬೇಧಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Wed, 13 August 25