ಮುರುಘಾಶ್ರೀ ವಿರುದ್ಧ ಅರೆಸ್ಟ್ ವಾರಂಟ್: ಮತ್ತೆ ಬಂಧನದ ಭೀತಿಯಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು
2ನೇ ಪೋಕ್ಸೋ ಕೇಸ್ನಲ್ಲಿ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುರುಘಾಶ್ರೀಗೆ ಮತ್ತೆ ಬಂಧನ ಭೀತಿ ಶುರುವಾಗಿದೆ.
ಚಿತ್ರದುರ್ಗ, (ನವೆಂಬರ್ 20): ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಚಿತ್ರದುರ್ಗದ ಮುರುಘಾಶ್ರೀಗೆ 2ನೇ ಪ್ರಕರಣ ಕಂಟಕವಾಗಿದೆ. 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(Chitradurga Court) ಮುರುಘಾ ಶರಣರ(Shivamurthy Muruga Sharan) ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ 1ನೇ ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದು, ಆಚೆ ಬಂದಿರುವ ಚಿತ್ರದುರ್ಗದ ಮುರುಘಾಶ್ರೀಗೆ ಇದೀಗ ಮತ್ತೆ ಬಂಧನದ ಭೀತಿ ಶುರುವಾಗಿದೆ.
ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ ಅವರು ಕೋರ್ಟ್ಗೆ ಆಗಮಿಸಿದ್ದು, ಕೋರ್ಟ್ ಆದೇಶ ಪಡೆದುಕೊಳ್ಳಲಿದ್ದಾರೆ. ಬಳಿಕ ದಾವಣಗೆರೆ ವಿರಕ್ತ ಮಠಕ್ಕೆ ತೆರಳಿ ಮುರುಘಾಶ್ರೀ ಅವರನ್ನು ಬಂಧಿಸುವ ಸಾಧ್ಯತೆಗಳಿವೆ. ಮತ್ತೊಂದೆಡೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಅರೆಸ್ಟ್ ವಾರೆಂಟ್ಅನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲು ಮುರುಘಾ ಶರಣರ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.
ವಿರಕ್ತ ಮಠಕ್ಕೆ ಮಾಜಿ ಶಾಸಕ ದೌಡು
ಇನ್ನು ಶ್ರೀಗಳ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಬೆನ್ನಲ್ಲೇ ಹರಿಹರದ ಮಾಜಿ ಶಾಸಕ ಶಿವಶಂಕರ್ ಅವರು ಮುರುಘಾಶ್ರೀ ಇರುವ ದಾವಣಗೆರೆಯಲ್ಲಿರುವ ವಿರಕ್ತ ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೋರ್ಟ್ ವಾರಂಟ್ ಜಾರಿ ಮಾಡುತ್ತೆಂದು ನಿರೀಕ್ಷೆ ಇರಲಿಲ್ಲ. ಮುರುಘಾಶ್ರೀಗಳು ಆರೋಪಿ ಅಷ್ಟೇ, ಅಪರಾಧಿಯಲ್ಲ. ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು, ಎಲ್ಲವನ್ನೂ ಎದುರಿಸಲು ಮುರುಘಾ ಶ್ರೀಗಳು ಸಿದ್ಧರಿದ್ದಾರೆ ಎಂದರು.
ಮಠದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮರುಘಾಶ್ರೀ ವಿರುದ್ಧ ಎರಡು ಪೋಕ್ಸೋಗಳು ದಾಖಲಾಗಿದ್ದವು. ಬಳಿಕ ಒಂದನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಒಂದು ವರ್ಷ ಕಾಲ ಜೈಲಿನಲ್ಲಿದ್ದರು. ನಂತರ ಅವರಿಗೆ ಮೊದಲನೇ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದು, ನವೆಂಬರ್ 16ರಂದು ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಆದ್ರೆ, ಇದೀಗ ಅವರಿಗೆ ಎರಡನೇ ಪೋಕ್ಸೋ ಪ್ರಕರಣ ಕಂಟಕ ಎದುರಾಗಿದ್ದು, ಮತ್ತೆ ಜೈಲು ಸೇರುವ ಸಾಧ್ಯತೆಗಳಿವೆ.
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ 1ನೇ ಫೋಕ್ಸೋ ಕೇಸ್ನಲ್ಲಿ ಜಾಮೀನು ಹಿನ್ನಲೆ ಹೈಕೋರ್ಟ್ ಆದೇಶದನ್ವಯ ಬಿಡುಗಡೆಗೆ ಸೂಚನೆ ನೀಡಿತ್ತು. ಆದರೆ, 2ನೇ ಫೋಕ್ಸೋ ಪ್ರಕರಣದಲ್ಲಿ ಬಾಡಿ ವಾರೆಂಟ್ ಹಿನ್ನೆಲೆ ಬಂಧನ ವಾರೆಂಟ್ಗೆ ಸರ್ಕಾರಿ ವಕೀಲ ಜಗದೀಶ್ ಮನವಿ ಮಾಡಿದ್ದರು. ಈ ಬಗ್ಗೆ ಕೋರ್ಟ್ನಲ್ಲಿ ಸರ್ಕಾರಿ ವಕೀಲ ಜಗದೀಶ್ ಪ್ರಶ್ನಿಸಿರುವ ಬೆನ್ನಲ್ಲೇ ಕಾರಾಗೃಹ ಇಲಾಖೆಗೆ ತನಿಖೆ ನಡೆಸಿ ವರದಿ ನೀಡಲು 2ನೇ ಅಪರ ಜಿಲ್ಲಾ& ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ ಕೆ ಕೋಮಲಾರಿಂದ ಆದೇಶಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Mon, 20 November 23