Chitradurga News: ಅಂಗವೈಕಲ್ಯತೆ ಮೆಟ್ಟಿನಿಂತು ಚಿನ್ನದ ಸಾಧನೆ ಮಾಡಿದ ಚಿತ್ರದುರ್ಗದ ಯುವತಿ: ನೆರವಿಗೆ ಜಿಲ್ಲಾಧಿಕಾರಿಗೆ ಪತ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2023 | 9:20 PM

ಛಲವೊಂದಿದ್ದರೆ ಯಾರೂ ಬೇಕಾದರೂ, ಎಂಥವರು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ಈ ಯುವತಿಯೇ ಸಾಕ್ಷಿ. ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಬ್ಯಾಡ್ಮಿಂಟನ್​ನಲ್ಲಿ ಚಾಂಪಿಯನ್​ ಆಗಿದ್ದು, ಸದ್ಯ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗಿಯಾಗಲು ಜಿಲ್ಲಾಡಳಿತ ಮತ್ತು ಸರ್ಕಾರ ನೆರವು ನೀಡುವಂತೆ ಕೋರಿದ್ದಾರೆ.

Chitradurga News: ಅಂಗವೈಕಲ್ಯತೆ ಮೆಟ್ಟಿನಿಂತು ಚಿನ್ನದ ಸಾಧನೆ ಮಾಡಿದ ಚಿತ್ರದುರ್ಗದ ಯುವತಿ: ನೆರವಿಗೆ  ಜಿಲ್ಲಾಧಿಕಾರಿಗೆ ಪತ್ರ
ಬ್ಯಾಡ್ಮಿಂಟನ್ ಚಾಂಪಿಯನ್ ಪಲ್ಲವಿ
Follow us on

ಚಿತ್ರದುರ್ಗ, ಜುಲೈ 27: ಎಲ್ಲಾ ಮಕ್ಕಳಂತೆ ಆಡಿ ನಲಿಯುವ ವೇಳೆಯೇ ಆ ಬಾಲೆ ಅಪಘಾತದ ಆಘಾತ ಎದುರಾಗಿತ್ತು. ಪರಿಣಾಮ ಸ್ಪೈನಲ್ ಕಾರ್ಡ್ ಇಂಜುರಿಯಾಗಿದ್ದು, ಶಾಶ್ವತವಾಗಿ ಮನೆ ಸೇರುವ ಸ್ಥಿತಿ ನಿರ್ಮಾಣ ಆಯಿತು. ಆದರೆ ಛಲವೊಂದಿದ್ದರೆ ಸಾಧನೆ ಸಾಧ್ಯ ಎಂಬುದನ್ನು ಆ ಯುವತಿ ಸಾಧಿಸಿದ್ದಾಳೆ. ಅಂಗವೈಕಲ್ಯತೆ (Disability) ಯನ್ನು ಮೆಟ್ಟಿನಿಂತು ಬ್ಯಾಡ್ಮಿಂಟನ್​ನಲ್ಲಿ ಚಾಂಪಿಯನ್ ಆಗಿದ್ದಾಳೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ರೈತ ಮಂಜುನಾಥ್-ಶಾಂತಾ ದಂಪತಿಯ ಪುತ್ರಿ ಪಲ್ಲವಿ (29)ಗೆ ಸುಮಾರು 25 ವರ್ಷಗಳ ಹಿಂದೆ ಗ್ರಾಮದ ಬಳಿ ಅಪಘಾತ ಆಗಿತ್ತು. ಟ್ರ್ಯಾಕ್ಟರ್ ಟ್ರ್ಯಾಲಿ ಮೈಮೇಲೆ ಹರಿದಿತ್ತು. ಪರಿಣಾಮ ಸ್ಪೈನಲ್ ಕಾರ್ಡ್ ಸಮಸ್ಯೆ ಉಂಟಾಗಿ ಅಂಗವೈಕಲ್ಯತೆ ಎದುರಾಗಿತ್ತು. ಹೀಗಾಗಿ, ಶಾಶ್ವತವಾಗಿ ಮನೆ ಸೇರುವ ದುಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಕೆಲ ವರ್ಷಗಳಲ್ಲೇ ಸಾಧಿಸುವ ಛಲದೊಂದಿಗೆ ಪಲ್ಲವಿ ಫಿನಿಕ್ಸ್ ಹಕ್ಕಿಯಂತೆ ಮೇಲೆದಿದ್ದರು.

ಇದನ್ನೂ ಓದಿ: Chitradurga News: ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ಮಾಡಿದ 2ನೇ ತರಗತಿ ಬಾಲಕ; ಯಾಕೆ ಗೊತ್ತಾ?

ಮನೆಯಲ್ಲೇ ಓದಿಕೊಂಡು ಎಸ್​ಎಸ್​ಎಲ್​ಸಿ ಪಾಸ್ ಆಗಿದ್ದಳು. 2019ರಲ್ಲಿ ಬೆಂಗಳೂರಿನಲ್ಲಿ ಸುಮಾರು 3 ತಿಂಗಳ ಕೋರ್ಸ್​ ಪಡೆದಿದ್ದಾಳೆ. ವ್ಹೀಲ್ ಚೇರ್ ಸ್ಪೋರ್ಟ್ಸ್​ನಲ್ಲಿ ಬ್ಯಾಡ್ಮಿಂಟನ್ ಆಯ್ದುಕೊಂಡು ಪ್ರಾಕ್ಟೀಸ್ ಶುರು ಮಾಡಿದ್ದಳು. ಬಳಿಕ ಮೈಸೂರಿನಲ್ಲಿ ಬಾಡ್ಮಿಂಟನ್ ಕೋಚಿಂಗ್ ಪಡೆದಿದ್ದಾಳೆ. ಬಳಿಕ ಅಂಗವಿಕಲರ ಬ್ಯಾಡ್ಮಿಂಟನ್ 5ನೇ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಸಿಂಗಲ್ಸ್​ನಲ್ಲಿ ಸಿಲ್ವರ್, ಡಬಲ್ಸ್​​ನಲ್ಲಿ ಗೋಲ್ಡ್ ಮೆಡಲ್​ಗಳನ್ನು ಪಡೆದಿದ್ದಳು.

ಬಳಿಕ ಇದೇ ಜುಲೈ 3ರಿಂದ 9ರವರೆಗೆ ಉಗಾಂಡ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲೂ ಪಾಲ್ಗೊಂಡಿದ್ದರು. ಅಂತೆಯೇ ಸಿಂಗಲ್ಸ್ ಮತ್ತು ಡಬಲ್ಸ್​ನಲ್ಲೂ ಗೋಲ್ಡ್ ಮೆಡಲ್​ ಪಡೆದಿದ್ದಾರೆ. ಇನ್ನಷ್ಟು ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗಿಯಾಗುವ ಗುರಿಯಿದೆ ಅಂತಾರೆ ಪಲ್ಲವಿ.

ಇದನ್ನೂ ಓದಿ: ಚಿತ್ರದುರ್ಗ: 7 ಸುತ್ತಿನ ಕೋಟೆಯಲ್ಲಿ ಏಳೇಳು ಸುತ್ತು ಸಮಸ್ಯೆಗಳ ಕಾಟ! ಕೇಂದ್ರ ಸಚಿವ ನಾರಾಯಣಸ್ವಾಮಿ-ಪುರಾತತ್ವ ಇಲಾಖೆ ಮಾತ್ರ ಗಪ್​ಚುಪ್!

ಪಲ್ಲವಿಗೆ ಪೋಷಕರು ಮತ್ತು ಸಂಬಂಧಿಕರು ಬೆಂಬಲವಾಗಿ ನಿಂತಿದ್ದಾರೆ. ರೈತ ಕುಟುಂಬದ ಮಂಜುನಾಥ್-ಶಾಂತಾ ದಂಪತಿ ಪುತ್ರಿಯ ಸಾಧನೆಯ ಹಾದಿಗೆ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಆದರೆ ಮುಂಬರುವ ಎರಡು ತಿಂಗಳಲ್ಲಿ ಇಂಡೋ ನೇಷ್ಯಾದಲ್ಲಿ ಅಂತರಾಷ್ಟ್ರೀಯ ಪಂದ್ಯಾವಳಿ ಆಯೋಜಿಸಲಾಗಿದೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಸರ್ಕಾರ ನೆರವು ನೀಡಬೇಕೆಂಬುದು ಇವರು ಆಗ್ರಹಿಸಿದ್ದಾರೆ.

ಕೋಟೆನಾಡಿನ ಬಾಲೆ ಪಲ್ಲವಿ ಅಪಘಾತದ ಆಘಾತ ಮತ್ತು ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧಿಸಿ
ತೋರಿಸಿದ್ದಾಳೆ. ಜಿಲ್ಲಾಡಳಿತ ಮತ್ತು ಸರ್ಕಾರದ ನೆರವಿನೊಂದಿಗೆ ವಿದೇಶಗಳಲ್ಲೂ ಸಾಧನೆಯ ಹೆಜ್ಜೆ ದಾಖಲಿಸಲು ಉತ್ಸುಕಳಾಗಿದ್ದಾಳೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಪಲ್ಲವಿ ನೆರವು ನೀಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:16 pm, Thu, 27 July 23