ಚಿತ್ರದುರ್ಗ: ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ವೈದ್ಯಕೀಯ ಸಂಘಟನೆಗಳಿಂದ ವಿರೋಧ ಏಕೆ?
ಕೋಟೆನಾಡಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಸ್ಥಳದ ಗೊಂದಲದಿಂದ ಈಗಾಗಲೇ ವಿಳಂಬ ಆಗಿದೆ. ವೈದ್ಯಕೀಯ ಸಂಘ ಸೇರಿದಂತೆ ಇತರೆ ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಕಾನೂನು ಹೋರಾಟದ ಎಚ್ಚರಿಕೆ ನೀಡಿವೆ.
ಚಿತ್ರದುರ್ಗ, ಆಗಸ್ಟ್ 27: ಕೋಟೆನಾಡಿಗೆ ಸರ್ಕಾರಿ ಮೆಡಿಕಲ್ ಕಾಲೇಜು (medical college) ಮಂಜೂರಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಸ್ಥಳದ ಗೊಂದಲದಿಂದ ಈಗಾಗಲೇ ವಿಳಂಬ ಆಗಿದೆ. ಆದರೆ ನಿನ್ನೆಯಷ್ಟೇ ವೈದ್ಯಕೀಯ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದ್ದು ಸ್ಥಳ ನಿಗದಿ ಆಗಿದೆಯಾದ್ರೂ ವೈದ್ಯಕೀಯ ಸಂಘ ಸೇರಿದಂತೆ ಇತರೆ ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಕಾನೂನು ಹೋರಾಟದ ಎಚ್ಚರಿಕೆ ನೀಡಿವೆ. ಹಾಗಾದ್ರೆ, ವಿರೋಧಕ್ಕೆ ಕಾರಣವೇನು. ಮುಂದೆ ಓದಿ.
ಕೋಟೆನಾಡು ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿ ಮೂರು ವರ್ಷಗಳೇ ಕಳೆದಿವೆ. ಆದ್ರೆ, ಜಿಲ್ಲಾಸ್ಪತ್ರೆಯ ಆವರಣದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ಆಗಬೇಕೆಂದು ಹಿಂದಿನ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪಟ್ಟು ಹಿಡಿದಿದ್ರೆ, ಸಂಸದ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಎಂಎಲ್ಸಿ ಕೆ.ಎಸ್.ನವೀನ್ ನಗರದ ಹೊರಭಾಗದಲ್ಲಿ ನಿರ್ಮಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಹೀಗಾಗಿ, ಸ್ಥಳದ ಗೊಂದಲದಿಂದಾಗಿ ಮೆಡಿಕಲ್ ಕಾಲೇಜು ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ನಿನ್ನೆಯಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮತ್ತು ಜಿಲ್ಲೆಯ ಶಾಸಕರು, ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಜಿಲ್ಲಾಸ್ಪತ್ರೆಯ ಆವರಣದಲ್ಲೇ ನೂತನ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟ; ಅನ್ನದಾತನಿಗೆ ಮಹಾಮೋಸ, ಸಿಎಂಗೆ ದೂರು
ಸಭೆಯಲ್ಲಿ ಮೆಡಿಕಲ್ ಕಾಲೇಜಿನ ವಿಶೇಷ ಅಧಿಕಾರಿ ಡಾ,ಯುವರಾಜ್ ನಗರದ ಹೊರಭಾಗದಲ್ಲಿನ ಸರ್ಕಾರಿ ಜಾಗಗಳಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದಾಗ ಸ್ಥಳೀಯ ಶಾಸಕ ಕೆ.ಸಿ.ವಿರೇಂದ್ರ ನಿಮಗೇಕೆ ಈ ಬಗ್ಗೆ ವಿಶೇಷ ಇಂಟರೆಸ್ಟ್ ಎಂದು ಗದರಿದ್ದ ಪ್ರಸಂಗವೂ ನಡೆದಿದೆ. ಇದೀಗ ವೈದ್ಯಕೀಯ ಸಂಘ ಮತ್ತು ಕರುನಾಡ ವಿಜಯಸೇನೆ ಹಾಗೂ ಇತರೆ ಸಂಘಟನೆಗಳು ಸಹ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿವೆ. ಯಾಕಂದ್ರೆ, ಜಿಲ್ಲಾಸ್ಪತ್ರೆಯ ಆವರಣದಲ್ಲಿ ವಿಶೇಷ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಿ.
ಮೆಡಿಕಲ್ ಕಾಲೇಜನ್ನು ನಗರದ ಹೊರಭಾಗದಲ್ಲಿರುವ ಸರ್ಕಾರಿ ಸ್ಥಳಗಳಲ್ಲಿ ನಿರ್ಮಿಸಲಿ. ಮುಂದಿನ ನೂರು ವರ್ಷದ ದೃಷ್ಠಿಯಿಂದ ವೈಜ್ಞಾನಿಕವಾಗಿ ಯೋಚಿಸಿ ನಿರ್ಧರಿಸಬೇಕು. ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಗದ ಅಭಾವವಿದೆ. ಈಗಲೇ ಆಸ್ಪತ್ರೆಗೆ ಬರುವ ಜನರಿಂದ ತುಂಬಿರುತ್ತದೆ. ಮೆಡಿಕಲ್ ಕಾಲೇಜೆಂದರೆ ಸಾವಿರಾರು ಜನ ನಿತ್ಯ ಸಂಚರಿಸಬೇಕಾಗುತ್ತದೆ. ಈಗಿನ ಪ್ಲಾನ್ ನಲ್ಲಿ ಆಟದ ಮೈದಾನ, ಆಡಿಟೋರಿಯಂ ಸೇರಿದಂತೆ ಇತರೆ ಯೋಜನೆಗಳಿಲ್ಲ. ಹೀಗಾಗಿ, ನಗರದ ಹೊರಭಾಗದಲ್ಲಿ ವಿಶಾಲವಾದ ಜಾಗದಲ್ಲಿ ಕಟ್ಟಡ ನಿರ್ಮಿಸಬೇಕು.
ಇದನ್ನೂ ಓದಿ: ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್ ಅಡ್ಡಿ: ವಾಹನ ಸವಾರರಿಗೆ ಕಿರಿಕಿರಿ
ಈ ಬಗ್ಗೆ ವೈದ್ಯಕೀಯ ಸಂಘದಿಂದ ಸಿಎಂ ಸಿದ್ಧರಾಮಯ್ಯ ಭೇಟಿ ಮಾಡಿ ಮನವಿ ಮಾಡುತ್ತೇವೆ. ಸ್ಪಂದಿಸದಿದ್ದರೆ ಕೋರ್ಟ್ ಮೊರೆ ಹೋಗುವುದು ಅನಿವಾರ್ಯ ಆಗಲಿದೆ ಎಂದು ವೈದ್ಯಕೀಯ ಸಂಘದ ಅದ್ಯಕ್ಷ ಡಾ.ವಿಜಯಕುಮಾರ್ ಹೇಳಿದ್ದಾರೆ.
ಈಗಾಗಲೇ ಚಿತ್ರದುರ್ಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ಸ್ಥಾಪನೆ ವಿಳಂಬ ಆಗಿದೆ. ಈ ವರ್ಷ ಜ್ಞಾನ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಕಾಲೇಜು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಆದ್ರೆ, ನಗರದಲ್ಲಿರುವ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹತ್ತಾರು ಕಟ್ಟಡಗಳನ್ನು ತೆರವುಗೊಳಿಸಿ ಮೆಡಿಕಲ್ ಕಾಲೇಜು ಕಟ್ಟುವುದು. ಆಯಾ ಕಟ್ಟಡದಲ್ಲಿರುವ ಕಚೇರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕಿಂದ ನಗರದ ಹೊರಭಾಗದಲ್ಲಿನ ಸರ್ಕಾರಿ ಸ್ಥಳದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುವುದು ಸೂಕ್ತ.
ಎಲ್ ಐಸಿ ಕಟ್ಟಡದ ಹಿಂಭಾಗದಲ್ಲಿ ಮುಸ್ಲಿಂ ಸಮುದಾಯದ ವಕ್ಫ ಬೋರ್ಡಿಗೆ ಸೇರಿದ ಜಾಗವಿದೆ. ಮುಸ್ಲಿಂ ಸಮುದಾಯದ ಬಂಧುಗಳು ಮನಸ್ಸು ಮಾಡಿ ಮೆಡಿಕಲ್ ಕಾಲೇಜಿಗೆ ನೀಡಬೇಕಾಗಿ ಮನವಿ ಮಾಡುತ್ತೇವೆ. ಸರ್ಕಾರ ಆ ಜಾಗವನ್ನೂ ಬಳಸಿಕೊಂಡು ವಿಶಾಲವಾಗಿ ಮೆಡಿಕಲ್ ಕಾಲೇಜು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು ಎಂದು ಕರುನಾಡ ವಿಜಯಸೇನೆ ಅದ್ಯಕ್ಷ ಆಗ್ರಹಿಸಿದ್ದಾರೆ.
ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಕಸರತ್ತು ಆರಂಭವಾಗಿದೆ. ಆದ್ರೆ, ವೈದ್ಯಕೀಯ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಿಸಿದ್ರೂ ಸಹ ವಿವಾದ ಮಾತ್ರ ಅಂತ್ಯ ಆದಂತಿಲ್ಲ. ವೈದ್ಯಕೀಯ ಸಂಘವೇ ಮುಖ್ಯವಾಗಿ ವಿರೋಧಿಸುತ್ತಿದ್ದು ಸರ್ಕಾರ ಈ ಬಗ್ಗೆ ಪುನರ್ ಪರಾಮರ್ಶೆ ಮಾಡುವ ಅಗತ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.