AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟ; ಅನ್ನದಾತನಿಗೆ ಮಹಾಮೋಸ, ಸಿಎಂಗೆ ದೂರು

ಹಬ್ಬ ಹುಣ್ಣಿಮೆ ಸಂದರ್ಭದಲ್ಲಿ ಹೂವಿಗೆ ಭಾರೀ ಡಿಮ್ಯಾಂಡ್ ಇದ್ದೇ ಇರುತ್ತದೆ. ಆದ್ರೆ, ಹೂವಿಗೆ ಡಿಮ್ಯಾಂಡ್ ಇರುವ ವೇಳೆಯೇ ಹೂವಿನ ಅಳತೆಯಲ್ಲಿ ಮಹಾ ಮೊಸ ನಡೆಯುತ್ತದೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ ಸಿಎಂಗೆ ಮನವಿಯನ್ನೂ ಸಲ್ಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ವರದಿ ಇಲ್ಲಿದೆ.

ಚಿತ್ರದುರ್ಗ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟ; ಅನ್ನದಾತನಿಗೆ ಮಹಾಮೋಸ, ಸಿಎಂಗೆ ದೂರು
ಚಿತ್ರದುರ್ಗ ಹೂವಿನ ಮಾರುಕಟ್ಟೆಯಲ್ಲಿ ರೈತರಿಗೆ ಮೋಸ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2023 | 10:20 PM

ಚಿತ್ರದುರ್ಗ, ಆ.25: ಕೋಟೆನಾಡು ಚಿತ್ರದುರ್ಗದಲ್ಲಿ ಬೆಳೆಯುವ ಹೂವಿಗೆ ಭಾರೀ ಡಿಮ್ಯಾಂಡ್​ಯಿದ್ದು, ಕಷ್ಟಪಟ್ಟು ಬೆಳೆದ ರೈತನಿಗೆ ಹೂವಿನ ಅಳತೆಯಲ್ಲಿ ಮೋಸವಾಗುತ್ತಿದ್ದು, ಹೂವಿನ ಮಾರುಕಟ್ಟೆಯಲ್ಲಿ (Flower  Market)ದಲ್ಲಾಳಿಗಳ ಕಾಟ, ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೌದು, ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ, ದೊಡ್ಡಸಿದ್ದವ್ವನಹಳ್ಳಿ ಸೇರಿದಂತೆ ವಿವಿದೆಡೆ ನೂರಾರು ಎಕರೆ ಪ್ರದೇಶದಲ್ಲಿ ಸೇವಂತಿಗೆ, ಮಲ್ಲಿಗೆ ಸೇರಿದಂತೆ ವಿವಿಧ ಹೂಗಳನ್ನು ರೈತರು ಬೆಳೆಯುತ್ತಾರೆ. ಆದ್ರೆ, ಚಿತ್ರದುರ್ಗದ ಹೂವಿನ ಮಾರುಕಟ್ಟೆಗೆ ಹೂವು ತಂದ ಸಂದರ್ಭದಲ್ಲಿ ದಲ್ಲಾಳಿಗಳು, ವರ್ತಕರೂ ಹೂವಿನ ಅಳತೆಯಲ್ಲಿ ಮಹಾ ಮೋಸ ಮಾಡುತ್ತಿದ್ದಾರೆ.

ಹೂವು ಅಳೆಯುವ ವೇಳೆ ಮೋಸ

ಹೌದು, ಮಾರು ಹೂವು ಅಳೆಯುವ ವೇಳೆ ಎಂಟು, ಒಂಭತ್ತು ಅಡಿಯಷ್ಟು ಅಳೆದು ವಂಚಿಸುತ್ತಾರೆ. ಹೀಗಾಗಿ, ರೈತರು ಕಷ್ಟಪಟ್ಟು ಬೆಳೆದ ಹೂವಿನ ಬೆಳೆಗೆ ಸೂಕ್ತ ಬೆಲೆ ಸಿಗದೆ ಹೈರಾಣಾಗುವಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಇನ್ನು ಶ್ರಾವಣ ಮಾಸ ಮತ್ತು ವಿವಿಧ ಹಬ್ಬದ ಸಂದರ್ಭಗಳಲ್ಲಿ ಹೂವಿಗೆ ಡಿಮ್ಯಾಂಡ್ ಇದ್ದೇ ಇರುತ್ತದೆ. ಈ ಸಲ ನಾಲ್ಕು ಕಾಸು ಲಾಭ ಮಾಡಿಕೊಳ್ಳಬಹುದೆಂಬ ಆಸೆಯಿಂದಿದ್ದ ರೈತನಿಗೆ ದಲ್ಲಾಳಿಗಳು, ವರ್ತಕರು ಸೇರಿ ವಂಚಿಸುತ್ತಾರೆ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳು, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತಕ್ಕೆ ಅನೇಕ ಸಲ ದೂರು ನೀಡಿದ್ರೂ ಪ್ರಯೋಜನ ಆಗಲಿಲ್ಲ. ಅನೇಕ ಸಲ ಪ್ರತಿಭಟನೆ ಮಾಡಿದ್ರೂ ಪ್ರಯೋಜನ ಆಗಲಿಲ್ಲ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಸೇವಂತಿ ಹೂವಿಗೆ ಭಾರೀ ಬೇಡಿಕೆ; ರೈತರ ಮೊಗದಲ್ಲಿ ಮಂದಹಾಸ

ಇನ್ನು ಕುರಿತು ಮಾತನಾಡಿದ ರೈತ ಕಾಂತರಾಜ್ ‘ಎರಡು ದಿನದ ಹಿಂದೆ ಕೆಲ ಹೂವಿನ ಬೆಳೆಗಾರರು ಸೇರಿ ಬೆಂಗಳೂರಿಗೆ ಹೋಗಿ ಸಿಎಂ ಸಿದ್ಧರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಕೊಟ್ಟು ಬಂದಿದ್ದೇವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಕಚೇರಿಯಿಂದ ಅಧಿಕಾರಿಗಳಿಗೆ ಸೂಚನೆ ಕೂಡ ಬಂದಿದೆ. ಇನ್ನಾದ್ರೂ ರೈತರಿಗೆ ನ್ಯಾಯ ಸಿಗುತ್ತದೆಯೇ ನೋಡಬೇಕೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಮಾರುಕಟ್ಟೆಗೆ ಬಂದ ಹೂವಿನ ಬೆಳೆಗಾರರಿಗೆ ಅಳತೆಯಲ್ಲಿ ಮಹಾ ಮೋಸ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಹೂವಿನ ಬೆಳೆಗಾರರು ನ್ಯಾಯಕ್ಕಾಗಿ ಸಿಎಂ ಸಿದ್ಧರಾಮಯ್ಯ ಮೊರೆ ಹೋಗಿದ್ದಾರೆ. ಸದ್ಯ ಸಿಎಂ ಕಚೇರಿಯಿಂದ ಕೃಷಿ ಉತ್ಪನ್ನ ಮಹಾಮಂಡಳಿಗೆ ಸೂಚನೆ ಹೋಗಿದ್ದು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ