ಚಿತ್ರದುರ್ಗದಲ್ಲಿ ಮಸೀದಿ ಕಟ್ಟಡ ನಿರ್ಮಾಣ ವಿವಾದ: ಸಿಡಿದೆದ್ದ ಹಿಂದೂ ಸಂಘಟನೆಗಳು, ಮುಸ್ಲಿಮರ ವಾದವೇನು?​​

ಚಿತ್ರದುರ್ಗದ ಸಾದಿಕ್ ನಗರದಲ್ಲಿ ಹೊಸ ಮಸೀದಿ ನಿರ್ಮಾಣ ವಿವಾದಕ್ಕೆ ಕಾರಣವಾಗಿದೆ. ಇದು ಅನಧಿಕೃತ ನಿರ್ಮಾಣ ಎಂದು ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಮುಸ್ಲಿಂ ಸಮುದಾಯದವರು ನಿಯಮಾನುಸಾರ ನಿರ್ಮಾಣ ನಡೆದಿದೆ ಎನ್ನುತ್ತಿದ್ದಾರೆ. ಸದ್ಯ ಸ್ಥಳೀಯರು ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಮಸೀದಿ ಕಟ್ಟಡ ನಿರ್ಮಾಣ ವಿವಾದ: ಸಿಡಿದೆದ್ದ ಹಿಂದೂ ಸಂಘಟನೆಗಳು, ಮುಸ್ಲಿಮರ ವಾದವೇನು?​​
ಮಸೀದಿ ಕಟ್ಟಡ
Updated By: ಗಂಗಾಧರ​ ಬ. ಸಾಬೋಜಿ

Updated on: Nov 28, 2025 | 5:37 PM

ಚಿತ್ರದುರ್ಗ, ನವೆಂಬರ್ 28: ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಮಸೀದಿ ನಿರ್ಮಾಣವೊಂದು ವಿವಾದಕ್ಕೀಡಾಗಿದೆ. ಅನಧಿಕೃತವಾಗಿ ಮಸೀದಿ ಕಟ್ಟಡ ನಿರ್ಮಾಣ ಎಂದು ಗಂಭೀರ ಆರೋಪ ಕೇಳಿಬಂದಿದೆ. ಆದರೆ ನಿಯಮಾನುಸಾರ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಮುಸ್ಲಿಂ ಸಮುದಾಯದ ಜನರ ವಾದವಾಗಿದೆ. ಹೀಗಾಗಿ ಸ್ಥಳೀಯರು ಹಾಗೂ ಹಿಂದೂ ಸಂಘಟನೆ ಮುಖಂಡರು ಮಸೀದಿ ಕಟ್ಟಡ ತಡೆಗೆ ಆಗ್ರಹಿಸಿ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik)​ ಕೂಡ ಕಿಡಿಕಾರಿದ್ದಾರೆ.

ಕೋಟೆನಾಡು ಚಿತ್ರದುರ್ಗ ನಗರದ ಸಾದಿಕ್ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 35ನೇ ವಾರ್ಡ್​ನಲ್ಲಿ ಸುಮಾರು 500 ಹಿಂದೂ ಸಮುದಾಯದ ಮನೆಗಳಿದ್ದರೆ, 30 ಮನೆಗಳು ಮಾತ್ರ ಮುಸ್ಲಿಂ ಸಮುದಾಯಕ್ಕೆ ಸೇರಿದ ಮನೆಗಳಿವೆ. ಈಗಾಗಲೇ ಮಸೀದಿಯೊಂದು ಇದೆ. ಆದರೂ ಮುಖ್ಯರಸ್ತೆ ಬದಿಯಲ್ಲಿ ಅನಧಿಕೃತವಾಗಿ ಮತ್ತೊಂದು ಮಸೀದಿ ಕಟ್ಟಲಾಗುತ್ತಿದೆ ಎಂಬುದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಅಧಿಕೃತವಾಗಿಯೇ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯ ಮುಸ್ಲಿಂ ಮುಖಂಡ ಅಬ್ದುಲ್​​​ ಅವರು ಹೇಳುತ್ತಾರೆ.

ಇದನ್ನೂ ಓದಿ: ಆಧುನಿಕ ಪ್ರಪಂಚದಿಂದ ಬಲು ದೂರು ಉಳಿದ ಗ್ರಾಮ: ಈ ಹಳ್ಳಿಗೆ ಮೊಬೈಲ್ ಸಿಗ್ನಲ್, ಇಂಟರ್​ನೆಟ್ ಇಲ್ಲ

ಇನ್ನು ಈ ಬಗ್ಗೆ ಈಗಾಗಲೇ ಸ್ಥಳೀಯರು ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶ್ರೀಕೃಷ್ಣ ಬಡಾವಣೆ ಎಂಬುದನ್ನು ಸಾದಿಕ್ ನಗರ ಎಂದು ಬಿಂಬಿಸಲಾಗಿದೆ. ಗೂಂಡಾಗಿರಿ ಮೂಲಕ ಅನಧಿಕೃತವಾಗಿ ಮಸೀದಿ ನಿರ್ಮಿಸಿಕೊಂಡು ಹಿಂದೂ ಹಬ್ಬ-ಉತ್ಸವಗಳಿಗೆ ಕಡಿವಾಣ ಹಾಕುವ ಕೆಲಸ ನಡೆಯುತ್ತಿದೆ.

ಪ್ರಮೋದ್ ಮುತಾಲಿಕ್ ಕಿಡಿ

ಕಾಂಗ್ರೆಸ್​​ನವರಿಗೆ ವೋಟ್​ ಬ್ಯಾಂಕ್ ಪ್ರೀತಿ ಇದ್ದರೆ ನಿಮ್ಮ ಮನೆಯಲ್ಲಿ ಮಸೀದಿ ಕಟ್ಟಿಕೊಳ್ಳಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ. ಇನ್ನು ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಮಾತನಾಡಿ, ಈ ಹಿಂದಿನ ಪೌರಾಯುಕ್ತರು ಸಾರ್ವಜನಿಕ ಪ್ರಕಟಣೆ ನೀಡದೆ. ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದ ಗೂಡಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ; ಅಂಗಡಿಗೆ ನುಗ್ಗಿ ಮದ್ಯದ ಬಾಟಲಿಗಳನ್ನು ಬೀದಿಗೆಸೆದು ಸ್ಥಳೀಯರ ಆಕ್ರೋಶ

ಒಟ್ಟಾರೆಯಾಗಿ ಚಿತ್ರದುರ್ಗ ನಗರದ ಸಾದಿಕ್ ನಗರ ಬಡಾವಣೆಯಲ್ಲಿ ಕಳೆದೊಂದು ತಿಂಗಳಿಂದ ಮಸೀದಿ ಕಟ್ಟಡ ನಿರ್ಮಾಣ ವಿವಾದ ಭುಗಿಲೆದ್ದಿದೆ. ಇಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳು ಯಾವ ರೀತಿ ಕ್ರಮಕೈಗೊಳ್ಳಲಿದ್ದಾರೆಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.