AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧುನಿಕ ಪ್ರಪಂಚದಿಂದ ಬಲು ದೂರು ಉಳಿದ ಗ್ರಾಮ: ಈ ಹಳ್ಳಿಗೆ ಮೊಬೈಲ್ ಸಿಗ್ನಲ್, ಇಂಟರ್​ನೆಟ್ ಇಲ್ಲ

ಮೊಬೈಲ್​ ಮತ್ತು ಇಟರ್​​ನೆಟ್​ ಇಡೀ ಜಗತ್ತನ್ನು ಆಳುತ್ತಿರುವ ಇಂದಿನ ಕಾಲದಲ್ಲಿ ಚಿತ್ರದುರ್ಗ ತಾಲೂಕಿನ ಅದೊಂದು ಗ್ರಾಮ ಮಾತ್ರ ಆಧುನಿಕತೆಯಿಂದ ಮೈಲಿಗಟ್ಟಲೆ ದೂರ ಉಳಿದುಕೊಂಡಿದೆ. ಒಂದು ದಶಕದಿಂದ ಇಲ್ಲಿನ ಜನರಿಗೆ ಮೊಬೈಲ್ ಸಿಗ್ನಲ್ ಮತ್ತು ಇಂಟರ್ನೆಟ್ ಸಂಪರ್ಕವೇ ಇಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಆಧುನಿಕ ಪ್ರಪಂಚದಿಂದ ಬಲು ದೂರು ಉಳಿದ ಗ್ರಾಮ: ಈ ಹಳ್ಳಿಗೆ ಮೊಬೈಲ್ ಸಿಗ್ನಲ್, ಇಂಟರ್​ನೆಟ್ ಇಲ್ಲ
ಮೊಬೈಲ್ ಸಿಗ್ನಲ್​​ಗಾಗಿ ಜನರ ಪರದಾಟ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Nov 21, 2025 | 7:43 PM

Share

ಚಿತ್ರದುರ್ಗ, ನವೆಂಬರ್​ 21: ಆ ಗ್ರಾಮ ನಗರ ಪ್ರದೇಶದಿಂದ ಕೇವಲ 25 ಕಿ.ಮೀ ವ್ಯಾಪ್ತಿಯಲ್ಲೇ ಇದೆ. ಆದರೆ ಆಧುನಿಕ ಪ್ರಪಂಚದಿಂದ ಮೈಲು ದೂರದಲ್ಲೇ ಉಳಿದಿದೆ. ಇಂದಿಗೂ ಆ ಗ್ರಾಮದ ಜನರಿಗೆ ಮೊಬೈಲ್ ಸಿಗ್ನಲ್ (Mobile Signal) ಸಿಗುತ್ತಿಲ್ಲ, ಇಂಟರ್​ನೆಟ್ ಕನೆಕ್ಟಿವಿಟಿ (Internet) ಇಲ್ಲವೇ ಇಲ್ಲದ ದುಸ್ಥಿತಿ ಇದೆ. ಆದರೂ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ಯಾರೆ ಅಂದಿಲ್ಲ.

ಚಿತ್ರದುರ್ಗ ತಾಲೂಕಿನ ವಿ.ಪಾಳ್ಯ ಗ್ರಾಮದಲ್ಲಿ ಅಪ್ಪಿ ತಪ್ಪಿ ಮೊಬೈಲ್ ರಿಂಗಣಿಸಿದರೂ ಮಾತುಗಳು ಮಾತ್ರ ಕೇಳಿಸುವುದಿಲ್ಲ. ಇಂಟರ್ ನೆಟ್ ಇಲ್ಲದೆ ಆಧುನಿಕತೆಯೇ ಮರೀಚಿಕೆ ಆಗಿದೆ. ದಶಕದಿಂದ ಯಾರೊಬ್ಬರು ನಮ್ಮ ಗೋಳು ಕೇಳುತ್ತಿಲ್ಲ ಎಂದು ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಬಾಲಕನನ್ನ ಕಾಲಲ್ಲಿ ಒದ್ದು, ತುಳಿದು ರಾಕ್ಷಸೀ ಕೃತ್ಯ: ಸಂಸ್ಕೃತ ಶಾಲೆಯಲ್ಲಿ ಇವನೆಂಥಾ ಸುಸಂಸ್ಕೃತ ಶಿಕ್ಷಕ

ಹೌದು.. ಈ ಗ್ರಾಮದ ಜನರು ಮನೆ ಮಾಳಿಗೆ ಹತ್ತಿದರೂ ಅಷ್ಟೇ, ಗಿಡ-ಮರವೇರಿದರು ಅಷ್ಟೆ, ಮೊಬೈಲ್ ಸಿಗ್ನಲ್​ ಸಿಗುವುದಿಲ್ಲ. ಮಕ್ಕಳ ಓದು, ಸಿಲಿಂಡರ್, ನ್ಯಾಯಬೆಲೆ ಅಂಗಡಿ ರೇಷನ್​ಗಾಗಿ ನೆಟವರ್ಕ್ ಬಳಸುವುದು ಅಸಾಧ್ಯವಾಗಿದೆ. ಹೀಗಾಗಿ, ವಿ.ಪಾಳ್ಯ ಗ್ರಾಮದ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಇನ್ನು ಮಕ್ಕಳ ಶಾಲೆಗಳಿಂದ ಮೆಸೇಜ್​ಗಳು ಬರುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲೂ ಹೊರ ಜಗತ್ತು‌ ಸಂಪರ್ಕಿಸಲು ಆಗದೆ ಪರದಾಡುವ ದುಸ್ಥಿತಿ ನಿರ್ಮಾಣ ಆಗಿದೆ ಎಂದು ಗ್ರಾಮಸ್ಥರಾದ ಶೋಭಾ ಎನ್ನುವವರು ಹೇಳುತ್ತಾರೆ.

ಜಿಲ್ಲಾಡಳಿತ, ಅಧಿಕಾರಿಗಳು ನಿರ್ಲಕ್ಷ 

ಈ ಬಗ್ಗೆ ವಿ.ಪಾಳ್ಯ ಗ್ರಾಮದ ಜನರು ಅನೇಕ ಸಲ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಗ್ರಾಮದ ಸಮಸ್ಯೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಕಳೆದೊಂದು ದಶಕದಿಂದಲೂ ಇಲ್ಲಿನ ಗ್ರಾಮದ ಜನರ ಪ್ರಯತ್ನಗಳು ಫಲಿಸಿಲ್ಲ. ಜಿಲ್ಲಾಡಳಿತ, ಸಂಬಂಧಿತ ಅಧಿಕಾರಿಗಳು ತೀವ್ರ ನಿರ್ಲಕ್ಷ ತೋರಿದ್ದು ಜನರ ಹಿಡಿಶಾಪಕ್ಕೆ ಗುರಿ ಆಗಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಚಡ್ಡಿ ಗ್ಯಾಂಗ್ ಹಾವಳಿಗೆ ಜನರು ತಲ್ಲಣ: ಬಂಧಿಸುವಲ್ಲಿ ಖಾಕಿ ವಿಫಲ?

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ತಾಲೂಕಿನ ವಿ.ಪಾಳ್ಯ ಗ್ರಾಮ ಇಂದಿಗೂ ಮೊಬೈಲ್ ಸಂಪರ್ಕ, ಇಂಟರ್ ನೆಟ್ ಸಂಪರ್ಕದಿಂದ ಹೊರಗುಳಿದಿದೆ. ವಿದ್ಯಾರ್ಥಿಗಳಿಗೆ ಓದು ಬರಹಕ್ಕೆ ತೊಂದರೆ ಉಂಟಾಗಿದ್ದು, ಸಂಪರ್ಕ ವ್ಯವಸ್ಥೆಯೇ ಇಲ್ಲದೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕಿದೆ. ಸೂಕ್ತ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.