ದುರ್ಗದ ಕುರಿಗಾಹಿ ಬಾಲಕಿ ವಿಶ್ವ ಥ್ರೋಬಾಲ್ ಗೆದ್ದುಬಂದಳು, ಆದರೆ ಹೋಗುವ ಮುನ್ನ ಆರ್ಥಿಕ ನೆರವು ಕೇಳಿದರೆ ಸಿಎಂ ಬೊಮ್ಮಾಯಿ ಇಲ್ಲಾ ಅಂದರು!
ದುರ್ಗದ ಪುಟ್ಟ ಹಳ್ಳಿಯಲ್ಲಿ ಕುರಿಗಾಹಿಯಾಗಿರುವ ಬಾಲಕಿ ವೈಶಾಲಿ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಥ್ರೋ ಬಾಲ್ ಗೆದ್ದುಬಂದಳು, ಆದರೆ ಹೋಗುವ ಮುನ್ನ ಖುದ್ದು ಸಿಎಂ ಬೊಮ್ಮಾಯಿ ಅವರನ್ನೇ ಆರ್ಥಿಕ ನೆರವು ಕೇಳಿದರೂ ಇಲ್ಲಾ ಅಂದುಬಿಟ್ರು.
ಸಾಧಿಸುವ ಛಲವಿದ್ದರೆ ಸಕ್ಸಸ್ ಸಿಗುವುದು ಖಚಿತ ಎಂದು ಅನೇಕರು ಹೇಳುತ್ತಿರುತ್ತಾರೆ. ಹೌದು ಇದಕ್ಕೆ ಕೋಟೆನಾಡಿನ ಈ ಬಾಲಕಿ ತಾಜಾ ಉದಾಹರಣೆಯಾಗಿ ಹೊರಹೊಮ್ಮಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಥ್ರೋಬಾಲ್ (throwball)ನಲ್ಲಿ ಗೆದ್ದು ಬೀಗಿದ್ದು ನಾಡಿನ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈ ಕುರಿತು ವರದಿ ಇಲ್ಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಬೀಗಿದ ಬಾಲೆಗೆ ಅಭಿನಂದನೆಗಳ ಮಹಾಪುರ ಹರಿದುಬಂದಿದೆ. ಇನ್ನು ಗ್ರಾಮೀಣ ಜನರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಬಡತನದಲ್ಲೇ ಅರಳಿದ ಕ್ರೀಡಾಪಟುವಿಗೆ ಸರ್ಕಾರ (basavarj bommai) ನೆರವು ನೀಡಬೇಕೆಂಬ ಆಗ್ರಹ ಕೇಳಿಬರುತ್ತಲೇ ಇದೆ. ಚಿತ್ರದುರ್ಗ (chitradurga) ಜಿಲ್ಲೆ ಹಿರಿಯೂರು ತಾಲೂಕಿನ ವದ್ದೀಕೆರೆ ಗ್ರಾಮದಲ್ಲಿ. ಹೌದು (ಜೋಗಿ) ಅಲೆಮಾರಿ ಸಮುದಾಯದ ಗುರುಪ್ರಕಾಶ್-ಲಕ್ಷ್ಮೀದೇವಿ ದಂಪತಿಯ ಪುತ್ರಿ ವೈಶಾಲಿ ಪದವಿ ವಿದ್ಯಾರ್ಥಿನಿ. ಮನೆಯಲ್ಲಿ ಬಡತನವೇ ತಾಂಡವ ಆಡುತ್ತಿದ್ದು ವೈಶಾಲಿಯೂ ಸಹ ಕುರಿ-ಮೇಕೆ ಸಾಕಾಣಿಕೆ ಕೆಲಸದಲ್ಲಿ (shepherd) ಕುಟುಂಬಕ್ಕೆ ನೆರವಾಗುತ್ತಲೇ ಬೆಳೆದಿದ್ದಾಳೆ.
ಆದ್ರೆ, ಸಾಧಿಸಬೇಕೆಂಬ ತನ್ನ ಛಲವನ್ನು ಮಾತ್ರ ಬಿಟ್ಟಿಲ್ಲ. ಹೀಗಾಗಿ, ಥ್ರೋಬಾಲ್ ನಲ್ಲಿ ಅದ್ವಿತೀಯ ಸಾಧನೆ ತೋರಿದ ವೈಶಾಲಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಇತ್ತೀಚೆಗೆ ಮಲೇಷಿಯಾದಲ್ಲಿ ಅಂತರಾಷ್ಟ್ರೀಯ ಸೀನಿಯರ್ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಭಾರತದಿಂದ ಫ್ರೆಂಡ್ಸ್ ಸ್ಪೋರ್ಟ್ಸ್ ಅಕಾಡೆಮಿಯ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು.
ಆ ತಂಡದಲ್ಲಿ ಸ್ಥಾನ ಪಡೆದಿದ್ದ ವೈಶಾಲಿ ಪ್ರಥಮ ಸ್ಥಾನ ಪಡೆದಿದ್ದು ಚಿನ್ನದ ಪದಕ ಗೆದ್ದಿದ್ದಾಳೆ. ಹೀಗಾಗಿ, ಸ್ವಗ್ರಾಮದಿಂದ ಹಿಡಿದು ನಾಡಿನ ಜನರೆಲ್ಲಾ ವೈಶಾಲಿಗೆ ಭೇಷ್ ಎನ್ನುತ್ತಿದ್ದಾರೆ. ಅಂತೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಓಲಿಂಪಿಕ್ಸ್ ನಂಥ ಕ್ರೀಡೆಗಳಲ್ಲಿ ವೈಯಕ್ತಿಕ ಸಾಧನೆ ತೋರುವ ಗುರಿ ಹೊಂದಿದ್ದು ಸಾಧಿಸುವ ಭರವಸೆಯನ್ನು ಹೊಂದಿದ್ದಾಳೆ. ಆದ್ರೆ, ಸರ್ಕಾರವೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ವೈಶಾಲಿ ಮನವಿ ಮಾಡಿದ್ದಾಳೆ.
ಸಿಎಂ ಬಸವರಾಜ ಬೊಮ್ಮಾಯಿ ಈ ಹಿಂದೆ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಕ್ರೀಡಾಪಟು ವೈಶಾಲಿ ನೆರವು ನೀಡುವಂತೆ ಮನವಿ ಮಾಡಿದ್ದರು. ಆದ್ರೆ, ಮಲೇಷಿಯಾಕ್ಕೆ ತೆರಳುವ ಸಂದರ್ಭದಲ್ಲಿ ಸರ್ಕಾರದಿಂದ ಯಾವುದೇ ನೆರವು ಸಿಗಲಿಲ್ಲ. ಕೆಲ ಜನಪ್ರತಿನಿಧಿಗಳು ಹಾಗು ಸಂಘ ಸಂಸ್ಥೆಗಳು, ಗ್ರಾಮದ ಜನರು ವೈಯಕ್ತಿಕವಾಗಿ ಹಣ ಸಹಾಯ ಮಾಡಿದ್ದು ಮಲೇಷಿಯಾಕ್ಕೆ ಹೋಗಿ ಬರಲು ಸಾಧ್ಯವಾಯಿತು. ಹೀಗಾಗಿ, ಬಡತನದಲ್ಲಿ ಅರಳಿದ ಅಪರೂಪದ ಕ್ರೀಡಾಪಟುವಿಗೆ ಸರ್ಕಾರ ಸಹಾಯ ಹಸ್ತ ಚಾಚಿದರೆ ಮತ್ತಷ್ಟು ಸಾಧನೆ ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಪ್ರತಾಪ್ ಜೋಗಿ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಪುಟ್ಟ ಹಳ್ಳಿಯಲ್ಲಿ ಕುರಿಗಾಹಿಯಾಗಿದ್ದ ಬಾಲೆ ವೈಶಾಲಿ ರಾಜ್ಯ , ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಥ್ರೋ ಬಾಲ್ ಕ್ರೀಡೆಯಲ್ಲಿ ತನ್ನ ಶಕ್ತಿ ಪ್ರದರ್ಶಿಸಿದ್ದಾಳೆ. ಆದ್ರೆ, ಸರ್ಕಾರದಿಂದ ಮಾತ್ರ ಈವರೆಗೆ ಯಾವುದೇ ನೆರವು ಸಿಕ್ಕಿಲ್ಲ. ಹೀಗಾಗಿ, ಸರ್ಕಾರ ಈ ಬಗ್ಗೆ ಗಮನಹರಿಸಿ ಈ ಕ್ರೀಡಾ ಸಾಧಕಿಗೆ ಸಹಾಯ ಹಸ್ತ ಚಾಚಬೇಕೆಂಬುದು ಕ್ರೀಡಾಭಿಮಾನಿಗಳ ಆಗ್ರಹವಾಗಿದೆ.
ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ