ಚಿತ್ರದುರ್ಗದಲ್ಲೊಂದು ವಿಶೇಷ ಗ್ರಾಮ: ಮಾರಮ್ಮ ಜಾತ್ರೆಗೆ ಪ್ರತಿ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ದಿಗ್ಭಂಧನ

ಚಿತ್ರದುರ್ಗದ ನಗರಂಗೆರೆ ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ಶೂನ್ಯದ ಮಾರಮ್ಮ ಜಾತ್ರೆ ನಡೆಯುತ್ತದೆ. ಈ ವಿಶಿಷ್ಟ ಬುಡಕಟ್ಟು ಸಂಸ್ಕೃತಿಯ ಉತ್ಸವದಲ್ಲಿ ಇಡೀ ಗ್ರಾಮವನ್ನು ಮುಳ್ಳುಬೇಲಿ ಹಾಕಿ ಐದು ದಿನ ದಿಗ್ಭಂಧನಗೊಳಿಸಲಾಗುತ್ತದೆ. ಇದು ಪೂರ್ವಜರಿಂದ ಬಂದ ಅನನ್ಯ ಆಚರಣೆಯಾಗಿದ್ದು, ಇಂದಿಗೂ ರಾಜ್ಯದ ಗಮನ ಸೆಳೆಯುತ್ತಿದೆ.

ಚಿತ್ರದುರ್ಗದಲ್ಲೊಂದು ವಿಶೇಷ ಗ್ರಾಮ: ಮಾರಮ್ಮ ಜಾತ್ರೆಗೆ ಪ್ರತಿ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ದಿಗ್ಭಂಧನ
ಮಾರಮ್ಮ ಜಾತ್ರೆ
Edited By:

Updated on: Jan 11, 2026 | 9:40 PM

ಚಿತ್ರದುರ್ಗ, ಜನವರಿ 11: ಗ್ರಾಮ ದೇವತೆಯ ಜಾತ್ರೆ, ಉತ್ಸವದಂದು ವಿಶೇಷ ಸಂಭ್ರಮ ಕಳೆಗಟ್ಟುವುದು ಸಹಜ. ಆದರೆ ಕೋಟೆನಾಡಿನ ಅದೊಂದು ಗ್ರಾಮದಲ್ಲಿ ಮಾತ್ರ ಜಾತ್ರೆ ವೇಳೆ ಗ್ರಾಮದ ಪ್ರತಿ ದಿಕ್ಕಿಗೂ ಮುಳ್ಳು ಬೇಲಿ ಹಾಕಿ ದಿಗ್ಭಂಧನ ಹಾಕಲಾಗುತ್ತದೆ. ಇದು ಬುಡಕಟ್ಟು ಸಂಸ್ಕೃತಿಯ (Tribal Culture) ಆಚರಣೆ ಆಗಿದ್ದು, ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮ ಈ ವಿಶಿಷ್ಟ ಆಚರಣೆಗೆ ಸಾಕ್ಷಿಯಾಗಿದೆ.

ಮುಳ್ಳು ಬೇಲಿ ಹಾಕಿ ದಿಗ್ಭಂಧನ

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ಕಾಣಸಿಗುತ್ತದೆ. ಈ ಗ್ರಾಮದ ಜನರು ಐದು ವರ್ಷಕ್ಕೊಮ್ಮೆ ಗ್ರಾಮ ದೇವತೆ ಶೂನ್ಯದ ಮಾರಮ್ಮ ಜಾತ್ರೆ ಮಾಡುತ್ತಿದ್ದಾರೆ. ಜನವರಿ 12ರಿಂದ 17ರವರೆಗೆ ಬುಡಕಟ್ಟು ಸಂಸ್ಕೃತಿಯ ಉತ್ಸವ ನಡೆಯಲಿದೆ. ಅದಕ್ಕೂ ಮುನ್ನ ಮೂರು ದಿನಗಳ ಕಾಲ ಗ್ರಾಮದ ಪ್ರತಿ ದಿಕ್ಕಿನ ಮಾರ್ಗಗಳಿಗೂ ಮುಳ್ಳು ಬೇಲಿ ಹಾಕಿ ದಿಗ್ಭಂಧನ ಹಾಕಲಾಗುತ್ತದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮಸೀದಿ ಕಟ್ಟಡ ನಿರ್ಮಾಣ ವಿವಾದ: ಸಿಡಿದೆದ್ದ ಹಿಂದೂ ಸಂಘಟನೆಗಳು, ಮುಸ್ಲಿಮರ ವಾದವೇನು?​​

ಶುಕ್ರವಾರ ಸಂಜೆ ಸಾರು (ಮುಳ್ಳು ಬೇಲಿ) ಹಾಕಲಾಗಿದ್ದು, ಜನವರಿ 12ರವರೆಗೆ ಮಾರ್ಗಗಳು ಬಂದ್ ಆಗಿರುತ್ತವೆ. ಗ್ರಾಮದಿಂದ ಯಾವುದೇ ವಸ್ತುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ವಾಹನಗಳು ಸಂಚರಿಸುವಂತಿಲ್ಲ ಎಂಬ ನಿಯಮಗಳಿವೆ. ಉತ್ಸವದ ಸಂದರ್ಭದಲ್ಲಿ ಆರೋಗ್ಯ, ಶಾಂತಿ, ಸುವ್ಯವಸ್ಥೆ ಮತ್ತು ದೈವ ಭಾವನೆ, ನೆಮ್ಮದಿಗಾಗಿ ಈ ಆಚರಣೆ ಜಾರಿಯಲ್ಲಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರಮೇಶ್​​ ಹೇಳುತ್ತಾರೆ.

ಯಾರೂ ಹೊರಗೆ, ಒಳಗೆ ಬರುವಂತ್ತಿಲ್ಲ

ನಗರಂಗೆರೆ ಗ್ರಾಮದ ಶೂನ್ಯದ ಮಾರಮ್ಮ ಉತ್ಸವವನ್ನು ಐದು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ವಿಶಿಷ್ಟ ಆಚರಣೆ ನೂರಾರು ವರ್ಷಗಳಿಂದ ಪೂರ್ವಿಕರು ಆಚರಿಸಿಕೊಂಡು ಬಂದಿದ್ದಾರೆ. ಪ್ರತಿ ರಸ್ತೆಗೆ ಸಾರು (ಮುಳ್ಳು ಬೇಲಿ) ಹಾಕಿ ಸರದಿ ಪ್ರಕಾರ ಕಾವಲುಗಾರರು ಇರುತ್ತಾರೆ. ಊರಿನಿಂದ ಯಾವುದೇ ವಸ್ತು ಹೊರಗೆ ಹೋಗುವಂತಿಲ್ಲ. ಹೊರಗಿನವರು ಊರೊಳಕ್ಕೆ ಬರುವಂತಿಲ್ಲ. ಪ್ರತಿಯೊಬ್ಬರನ್ನು ಸಹ ಚೆಕ್ ಮಾಡಿ ಬಿಡಲಾಗುತ್ತದೆ. ಜ.13ರಂದು ಮಂಗಳವಾರ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಬಳಿಕ ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ: ಆಧುನಿಕ ಪ್ರಪಂಚದಿಂದ ಬಲು ದೂರು ಉಳಿದ ಗ್ರಾಮ: ಈ ಹಳ್ಳಿಗೆ ಮೊಬೈಲ್ ಸಿಗ್ನಲ್, ಇಂಟರ್​ನೆಟ್ ಇಲ್ಲ

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ನಗರಂಗೆರೆ ಗ್ರಾಮದಲ್ಲಿ ಕಾಲಾನುಕಾಲದಿಂದ ಐದು ವರ್ಷಕ್ಕೊಮ್ಮೆ ದೇವಿಯ ಉತ್ಸವ ನಡೆದುಕೊಂಡು ಬಂದಿದೆ. ಅಲ್ಲದೆ ಇಡೀ ಊರಿಗೆ ಮುಳ್ಳು ಬೇಲಿ ಹಾಕುವ ವಿಶಿಷ್ಟ ಆಚರಣೆಯನ್ನೂ ಆಚರಿಸಲಾಗುತ್ತಿದೆ. ಆ ಮೂಲಕ ಈ ವಿಶಿಷ್ಟ ಮಾರಿಕಾಂಬ ದೇವಿಯ ಉತ್ಸವ ನಾಡಿನ ಗಮನ ಸೆಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:34 pm, Sun, 11 January 26