AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಘಟನೆ: ರಸ್ತೆ ಅಪಘಾತದಲ್ಲಿ ನಾಲ್ವರು ದಾರುಣ ಸಾವು; ಮೂವರು ಗಂಭೀರ

ಚಿತ್ರದುರ್ಗ, ನೆಲಮಂಗಲ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಚಿತ್ರದುರ್ಗದಲ್ಲಿ DySP ತಾಯಿ ಸೇರಿ ಇಬ್ಬರ ಸಾವಾಗಿದ್ದರೆ, ನೆಲಮಂಗಲದಲ್ಲಿ ಹಿಟ್ ಅಂಡ್ ರನ್​​ಗೆ ಓರ್ವ ಬಲಿಯಾಗಿದ್ದಾನೆ. ಅತ್ತ ಬೈಕ್​​ಗೆ ಬಸ್ ಡಿಕ್ಕಿಯಾಗಿ ಯುವಕ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಪ್ರತ್ಯೇಕ ಘಟನೆ: ರಸ್ತೆ ಅಪಘಾತದಲ್ಲಿ ನಾಲ್ವರು ದಾರುಣ ಸಾವು; ಮೂವರು ಗಂಭೀರ
ಅಪಘಾತವಾದ ಕಾರು
ಪ್ರಸನ್ನ ಹೆಗಡೆ
|

Updated on: Jan 11, 2026 | 9:50 AM

Share

ಚಿತ್ರದುರ್ಗ/ಕಲಬುರಗಿ, ಜನವರಿ 11: ಲಾರಿಗೆ ಇನ್ನೋವಾ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ತಮಟಕಲ್ಲು ಗ್ರಾಮದ ಬಳಿ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದ DySP ವೈಷ್ಣವಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ಅವರ ತಾಯಿ ಕಮಲ(65), ಕಾರು ಚಾಲಕ ರಾಕೇಶ್(40) ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ವೈಷ್ಣವಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಚಿತ್ರದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ತಾಯಿ ಜೊತೆ ತಮಿಳುನಾಡಿಗೆ ಪ್ರವಾಸಕ್ಕೆ ಹೋಗಿದ್ದ DySP ವೈಷ್ಣವಿ ಹಿಂದಿರುಗಿ ಕೊಲ್ಹಾಪುರಕ್ಕೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ‌, ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಟ್​ ಆ್ಯಂಡ್​ ರನ್​ಗೆ ಬೈಕ್ ಸವಾರ ಬಲಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಬಳಿ ಹಿಟ್​ ಆ್ಯಂಡ್​ ರನ್​ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಮಧುಸೂದನ್(21) ಮೃತಪಟ್ಟಿದ್ದಾರೆ. ಮಧುಸೂದನ್​ ಮಾಗಡಿ ತಾಲೂಕಿನ ವೀರಸಾಗರ ಗ್ರಾಮದ ನಿವಾಸಿಯಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ; ಬಸ್​​ ಅಪಘಾತದಲ್ಲಿ ಹಲವರಿಗೆ ಗಾಯ; ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರ

ಬೈಕ್​​ಗೆ ಬಸ್​​ ಡಿಕ್ಕಿ: ಸವಾರ ಸಾವು

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿರಾಳ ಹಿಸ್ಸಾ ಕ್ರಾಸ್ ಬಳಿ ಬೈಕ್‌ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಲಮೇಲ ಗ್ರಾಮದ ಯುವರಾಜ್ ಭಾಗಣ್ಣ (28) ಮೃತ ದುರ್ದೈವಿಯಾಗಿದ್ದು, ಶಹಾಪುರದಿಂದ ಸಿಂದಗಿ ಕಡೆ ಹೋಗ್ತಿದ್ದ ಕೆಕೆಆರ್‌ಟಿಸ್ ಬಸ್ ಡಿಕ್ಕಿಯಾದ ರಭಸಕ್ಕೆ ತಲೆಯಿಂದ ತೀವ್ರ ರಕ್ತಸ್ರಾವವಾದ ಕಾರಣ ಅವರು ಅಸುನೀಗಿದ್ದಾರೆ ಎನ್ನಲಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.