ಚಿತ್ರದುರ್ಗ: ಸಿಎಂ ಬಸವರಾಜ ಬೊಮ್ಮಾಯಿ ಎಸ್ಕಾರ್ಟ್ (escort) ನೀಡಿದ ಪೊಲೀಸ್ ವಾಹನ ಪಲ್ಟಿ ಆಗಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕು ಕಚೇರಿ ಬಳಿ ನಡೆದಿದೆ. ಸಿಇಎನ್ ಸಿಪಿಐ ರಮಾಕಾಂತ್ ಇದ್ದ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ವಾಣಿವಿಲಾಸ ಡ್ಯಾಂನಿಂದ ಹಿರಿಯೂರಿಗೆ ಬರುವ ವೇಳೆ ಅವಘಡ ಸಂಭವಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ತಾಯಿ, ಮಗನಿಗೆ ಗಾಯವಾಗಿದೆ. ಮಸ್ಕಲ್ ಗ್ರಾಮದ ಮಂಜುಳಾ ಮತ್ತು ಪುತ್ರ ಮನೋಜ್ ಗಾಯಾಳುಗಳು. ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಡನ್ ಆಗಿ ಬ್ರೇಕ್ ಹಾಕಿದ್ದಕ್ಕೆ ಜೀಪ್ ಪಲ್ಟಿ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರು: ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ್
ಈ ಕುರಿತಾಗಿ ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದು, ಪಲ್ಟಿ ಆಗಿದ್ದು ಸಿಎಂ ಬೆಂಗಾವಲು ವಾಹನ ಅಲ್ಲ. ಸಿಎಂ ಬೊಮ್ಮಯಿ ಅವರ ಇತರೆ ಭದ್ರತೆಯಲ್ಲಿದ್ದ ವಾಹನ. ಪೊಲೀಸ್ ವಾಹನ ಪಲ್ಟಿ ವೇಳೆ ಪಾದಾಚಾರಿಗಳಿಬ್ಬರಿಗೆ ಗಾಯಯಾಗಿದೆ. ಜೊತೆಗೆ ಪಲ್ಟಿಯಾದ ವಾಹನದಲ್ಲಿದ್ದ ಪಿಐ ರಮಾಕಾಂತ್, ಪಿಎಸ್ ಐ ಅನಸುಯಾ, ಪಿಸಿಗಳಾದ ರಮೇಶ, ಅರ್ಚಿತಾ, ಚಾಲಕ ಪ್ರವೀಣ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.
ಇನ್ನು ಪ್ರಕರಣ ಕುರಿತಾಗಿ ಕಾಂಗ್ರೆಸ್ ಮುಖಂಡರಿಂದ ಹಿರಿಯೂರಲ್ಲಿ ಪ್ರತಿಭಟನೆ ಮಾಡಿದ್ದು, ಗಾಯಾಳುಗಳ ಭೇಟಿ ನೀಡಿ ವಿಚಾರಿಸದೆ ನಿರ್ಲಕ್ಷ ತೋರಿದ್ದಾರೆ ಎಂದು ಸಿಎಂ ಬೊಮ್ಮಾಯಿ, ಸಚಿವರ ವಿರುದ್ಧ ಆರೋಪಿಸಲಾಗಿದೆ. ಕೆಪಿಸಿಸಿ ಸದಸ್ಯ ಸುರೇಶಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಅಪಘಾತದಲ್ಲಿ ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
Published On - 4:23 pm, Tue, 22 November 22