ಪ್ರೀತಿಗೆ ಮನೆಯವರ ವಿರೋಧ; ಓಡಿ ಹೋಗಿ ಮದುವೆಯಾದ ಜೋಡಿಗೆ ಪೋಷಕರಿಂದ ಬೆದರಿಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 08, 2023 | 9:31 PM

ಅವರಿಬ್ಬರು ಪೋಷಕರ ವಿರೋಧ ಲೆಕ್ಕಿಸದೆ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಆದ್ರೆ, ಪ್ರೇಮ ವಿವಾಹಕ್ಕೆ ಪೋಷಕರೇ ವಿಲನ್ ಆಗಿದ್ದು, ಪ್ರೇಮಜೋಡಿ ಭೀತಿಯಲ್ಲೇ ಬದುಕು ನಡೆಸುವಂತಾಗಿದೆ. ಸದ್ಯ ನವಜೋಡಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದೆ.

ಪ್ರೀತಿಗೆ ಮನೆಯವರ ವಿರೋಧ; ಓಡಿ ಹೋಗಿ ಮದುವೆಯಾದ ಜೋಡಿಗೆ ಪೋಷಕರಿಂದ ಬೆದರಿಕೆ
ಜೋಡಿಪ್ರೇಮಿಗಳು
Follow us on

ಚಿತ್ರದುರ್ಗ, ನ.08: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು(Molakalmuru) ತಾಲೂಕಿನ ಬಿ.ಜಿ ಕೆರೆ ಗ್ರಾಮದ ಹರೀಶ್ ಹಾಗೂ ಕೊಂಡ್ಲಹಳ್ಳಿಯ ಹರ್ಷಿತಾ ನಡುವೆ ಪದವಿ ವಿದ್ಯಾರ್ಥಿಗಳಾಗಿದ್ದ ವೇಳೆಯೇ ಪ್ರೇಮಾಂಕುರವಾಗಿತ್ತು. ನಾಲ್ಕು ವರ್ಷದಿಂದ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದು ಮದುವೆ ಆಗಲು ನಿರ್ಧರಿಸಿದ್ದರು. ಪೋಷಕರ ಬಳಿಯೂ ಈ ಬಗ್ಗೆ ತಿಳಿಸಿ ಮದುವೆ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದ್ರೆ, ಹರ್ಷಿತಾ ಕುರುಬ ಸಮುದಾಯಕ್ಕೆ ಸೇರಿದ್ದರೆ, ಯುವಕ ಎಸ್ಟಿ ನಾಯಕ ಸಮುದಾಯಕ್ಕೆ ಸೇರಿದ್ದಾನೆಂಬ ಕಾರಣಕ್ಕೆ ಎರಡೂ ಕಡೆಯ ಪೋಷಕರು ಮದುವೆಗೆ ವಿರೋಧಿಸಿದ್ದರು.

ಓಡಿ ಹೋಗಿ ಮದುವೆಯಾದ ಜೋಡಿ

ಅಲ್ಲದೆ ಹರ್ಷಿತಾಗೆ ಕಾಲೇಜನ್ನೂ ಬಿಡಿಸಿದ್ದ ಪೋಷಕರು, ಬೇರೆ ಕಡೆ ಕೊಟ್ಟು ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಹೀಗಾಗಿ, ಹರ್ಷಿತಾ ಮತ್ತು ಹರೀಶ್ ಕಳೆದ ಒಂದು ವಾರದ ಹಿಂದೆ ಊರು ಬಿಟ್ಟು ಹೋಗಿ ಮದುವೆ ಆಗಿ ಬಂದಿದ್ದಾರೆ. ಆದರೂ, ಪೋಷಕರು ಮತ್ತೆ ಇಬ್ಬರನ್ನೂ ದೂರಾಗಿಸಿ ಬೇರೊಬ್ಬರ ಜತೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಬ್ಬರನ್ನೂ ಬೆದರಿಸಿ ಭೀತಿ ಸೃಷ್ಠಿಸುತ್ತಿದ್ದಾರಂತೆ. ಹೀಗಾಗಿ, ನವಜೋಡಿ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ರಕ್ಷಣೆ ನೀಡುವಂತೆ ಕೋರಿದ್ದು ಎಸ್ಪಿ ರಕ್ಷಣೆಯ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:Interfaith love affair: ಅಂತರ್ಜಾತಿ ವಿವಾಹಕ್ಕೆ ಕುಟುಂಬದವರ ವಿರೋಧ, ಪ್ರಿಯಕರನನ್ನು ಹುಡುಗಿಯ ಮನೆಗೆ ಮಾತುಕತೆಗೆ ಕರೆಸಿ ಹತ್ಯೆ ಮಾಡಿಬಿಟ್ಟರಾ?

ಇನ್ನು ಮದುವೆಯಾಗಿ ವಾರವೇ ಕಳೆದರೂ ಸಹ ಎರಡೂ ಕಡೆಯ ಪೋಷಕರಿಂದ ಬೆದರಿಕೆ ಮಾತ್ರ ತಪ್ಪಿಲ್ಲ. ಊರಲ್ಲಿ
ಚಿಕನ್ ಶಾಪ್ ಇದೆಯಾದ್ರೂ ಹೋಗಿ ಕೆಲಸ ಮಾಡಲು ಆಗುತ್ತಿಲ್ಲ. ಬೇರೆ ಎಲ್ಲೇ ಹೋಗಿ ವಾಸವಿದ್ದರೂ ಪೋಷಕರ ಬೆದರಿಕೆಯಿಂದ ನೆಮ್ಮದಿಯಿಲ್ಲದಂತಾಗಿದ್ದು, ಭೀತಿಯಲ್ಲೇ ಬದುಕು ನಡೆಸುವಂತಾಗಿದೆ ಎಂದು ಹರೀಶ್, ಅಳಲು ತೋಡಿಕೊಂಡಿದ್ದಾರೆ.

ಈ ಹಿನ್ನಲೆ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಅವರು ‘ಈಗಾಗಲೇ ಮೊಳಕಾಲ್ಮೂರು ಮತ್ತು ಚಿತ್ರದುರ್ಗ ನಗರ ಠಾಣೆಯ ಪೊಲೀಸರಿಗೆ ನವಜೋಡಿಗೆ ರಕ್ಷಣೆ ನೀಡುವಂತೆ ಸೂಚನೆ ನೀಡಿದ್ದಾರೆ. ಅಂತೆಯೇ ಪೊಲೀಸರು ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಹೇಳಿರುವ ನವಜೋಡಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬೆದರಿಕೆವೊಡ್ಡುತ್ತಿರುವ ಪೋಷಕರಿಗೆ ವಾರ್ನ್ ಮಾಡಿದ್ದು, ನವಜೋಡಿಗೆ ತೊಂದರೆ ನೀಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ