ಚಿತ್ರದುರ್ಗ: ಮುರುಘಾಶ್ರೀ (Murugha Mutt) ವಿರುದ್ಧ ಪ್ರಕರಣ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ. ನಿನ್ನೆ (ಅ. 14) ರಂದು ಮಠದ ಆವರಣದಲ್ಲಿರುವ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿತ್ತು. ಮಠದ ವಸತಿ ಶಾಲೆಯಲ್ಲಿ ಅನಧಿಕೃತವಾಗಿ ಹೆಣ್ಣು ಮಗುವನ್ನು ಪೋಷಣೆ ಮಾಡಲಾಗುತ್ತಿದೆ ಎಂಬಂಶ ಬಯಲಾಗಿದ್ದು, ಈ ಕುರಿತಾಗಿ ಅನೇಕ ಅನುಮಾನಗಳು ಹುಟ್ಟುಕೊಂಡಿವೆ. ಸದ್ಯ ‘ಚಿಗುರು’ ಹೆಸರಿನ ನಾಲ್ಕೂವರೆ ವರ್ಷದ ಮಗು DNA ಟೆಸ್ಟ್ ಆಗಲಿ ಎಂದು ಟಿವಿ9ಗೆ ಸಾಮಾಜಿಕ ಕಾರ್ಯಕರ್ತ ಮಧುಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮಡಿಲು ಯೋಜನೆಗೆ ಮಾಹಿತಿ ನೀಡದೆ ಮುರುಘಾ ಮಠದಲ್ಲಿ ಅನಧಿಕೃತವಾಗಿ ಮಗು ಇರಿಸಿಕೊಂಡಿದ್ದರು. ನಾಲ್ಕೂವರೆ ವರ್ಷದ ಚಿಗುರು ಮುರುಘಾಶ್ರೀಗೆ ಜನಿಸಿದ ಮಾಹಿತಿಯಿದ್ದು, ರಸ್ತೆ ಬದಿ ಮಗವಿಟ್ಟು ತೆಗೆದುಕೊಳ್ಳುವ ಡ್ರಾಮಾ ನಡೆದಿರಬಹುದು. ಇದೇ ರೀತಿ ಹತ್ತಾರು ಮಕ್ಕಳನ್ನು ಅನಧಿಕೃತವಾಗಿ ಇರಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.
ನಾಲ್ಕೂವರೆ ವರ್ಷದಿಂದ ಮಗು ಮಠದಲ್ಲಿದ್ದರೂ ಅಧಿಕಾರಿಗಳು ಮೌನವಾಗಿದ್ದರು. ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಂದ ನಿರ್ಲಕ್ಷ್ಯ ವಹಿಸಲಾಗಿದೆ. ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರಿಂದ ಅನೇಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಓರ್ವ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದೇನೆ. ಬಾಲಕಿ ದೌರ್ಜನ್ಯ ನಡೆದಿಲ್ಲವೆಂದು ಅಧಿಕಾರಿಗಳು ಹಿಂಬರಹ ನೀಡಿದ್ದಾರೆ. ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸಾಮಾಜಿಕ ಕಾರ್ಯಕರ್ತ ಮಧುಕುಮಾರ್ ಆಗ್ರಹಿಸಿದರು.
ಲೈಂಗಿಕ ದೌರ್ಜನ್ಯ ನಡೆದಿಲ್ಲ
ಮುರುಘಾ ಶ್ರೀಗಳ ವಿರುದ್ಧ ಶುಕ್ರವಾರ ಮತ್ತೊಂದು ದೂರು ದಾಖಲಾಗಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಮಠದ ಅಡುಗೆ ಸಹಾಯಕಿ ದೂರು ದಾಖಲಿಸಿದ್ದರು. ಈ ಬಗ್ಗೆ ಸಿಡಬ್ಲೂಸಿ ಆಪ್ತ ಸಮಾಲೋಚನೆ ನಡೆಸಿದಾಗ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಟಿವಿ9ಗೆ ಸಿಡಬ್ಲೂಸಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮಹಿಳೆ ನೀಡಿದ ದೂರಿನಲ್ಲಿ ಒಟ್ಟು ನಾಲ್ವರು ಬಾಲಕಿಯರ ಬಗ್ಗೆ ಪ್ರಸ್ತಾಪವಾಗಿತ್ತು. ಹೀಗಾಗಿ ನಮ್ಮ ಮಕ್ಕಳ ಬಗ್ಗೆ ದೂರು ನೀಡಲು ಅಡುಗೆ ಸಹಾಯಕಿ ಯಾರು ಎಂದು ಸಿಡಬ್ಲೂಸಿ ಅಧಿಕಾರಿಗಳಿಗೆ ಪೋಷಕರ ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೊಸ ಪೀಠಾದ್ಯಕ್ಷರ ಪಟ್ಟಕ್ಕೆ ಚಿಂತನೆ
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆ ಮುರುಘಾಶ್ರೀ ಪೀಠ ತ್ಯಾಗಕ್ಕೆ ಒತ್ತಡ ಹೆಚ್ಚಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಶುಕ್ರವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸರ್ಕಾರದಿಂದ ಶ್ರೀಗಳನ್ನು ವಜಾಗೊಳಿಸಿ ಹೊಸ ಪೀಠಾದ್ಯಕ್ಷರ ನೇಮಕಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತ ಸಮಾಜದಿಂದ ಹೊಸ ಪೀಠಾದ್ಯಕ್ಷರ ಪಟ್ಟಕ್ಕೆ ಚಿಂತನೆಯೂ ನಡೆಯುತ್ತಿದೆ. ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಹೆಬ್ಬಾಳ ಮಠದ ಮಹಾಂತ ರುದ್ರೇಶ್ವರ ಶ್ರೀ, ದಾವಣಗೆರೆ ವಿರಕ್ತ ಮಠದ ಬಸವಪ್ರಭು ಶ್ರೀ,ಯಾದಗಿರಿ ಜಿಲ್ಲೆ ಗುರುಮಠಕಲ್ ಮಠದ ಶಾಂತವೀರ ಶ್ರೀ, ಬೆಳಗಾವಿಯ ಅಥಣಿ ಮಠದ ಶಿವಬಸವ ಶ್ರೀ, ಇಳಕಲ್ ಮಠದ ಸಿದ್ಧರಾಮ ಶ್ರೀ ಸೇರಿ ಅನೇಕರ ಹೆಸರು ಮುನ್ನೆಲೆಗೆ ಬರುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:06 pm, Sat, 15 October 22