ಚಿತ್ರದುರ್ಗ: ಐವರ ಅಸ್ಥಿಪಂಜರ ಪತ್ತೆ, FSL ವರದಿಯಲ್ಲಿ ಸ್ಫೋಟಕ ಅಂಶ ಬೆಳಕಿಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 16, 2024 | 8:02 PM

ಚಿತ್ರದುರ್ಗ ನಗರದ ಬೆಂಗಳೂರು ರಸ್ತೆಯ ಪಾಳು ಬಿದ್ದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ಐವರು ಸಾವಿನ ಬಗ್ಗೆ ಸ್ಫೋಟಕ ಅಂಶ ಪತ್ತೆಯಾಗಿದೆ. ಹಾಗಾದ್ರೆ, ಎಫ್​ಎಸ್​ಎಲ್​ ವರದಿಯಲ್ಲೇನಿದೆ ಎನ್ನುವ ವಿವರ ಇಲ್ಲಿದೆ.

ಚಿತ್ರದುರ್ಗ: ಐವರ ಅಸ್ಥಿಪಂಜರ ಪತ್ತೆ, FSL ವರದಿಯಲ್ಲಿ ಸ್ಫೋಟಕ ಅಂಶ ಬೆಳಕಿಗೆ
ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪತ್ತೆ
Follow us on

ಚಿತ್ರದುರ್ಗ, ಮೇ.16: ನಗರದ ಚಳ್ಳಕೆರೆ (Challakere) ಗೇಟ್​ ಸಮೀಪದ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಜಗನ್ನಾಥರೆಡ್ಡಿ ಎಂಬುವವರ ಮನೆಯಲ್ಲಿ 2023ರ ಡಿಸೆಂಬರ್ 28ರಂದು ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣಾರೆಡ್ಡಿ ಹಾಗೂ ನರೇಂದ್ರರೆಡ್ಡಿ ಸೇರಿದಂತೆ ಐವರ ಅಸ್ಥಿಪಂಜರ (Skeleton) ಪತ್ತೆಯಾಗಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್(FSL) ರಿಪೋರ್ಟ್ ಬಂದಿದ್ದು, ಚಿತ್ರದುರ್ಗ ಪೊಲೀಸರ ಕೈ ಸೇರಿದೆ. ಈ ವರದಿಯಲ್ಲಿ ಸಾವಿನ ಕುರಿತು ಸತ್ಯಾಂಶ ಬಯಲಾಗಿದೆ.

ಎಸ್ಪಿ ಹೇಳಿದ್ದಿಷ್ಟು

ಇನ್ನು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ‘ 5 ಅಸ್ಥಿಪಂಜರ ಸಿಕ್ಕ ತಕ್ಷಣ, ಪೂರ್ತಿ ಮನೆ ಅಸ್ತವ್ಯಸ್ತತೆಯಲ್ಲಿತ್ತು. ಕೂಡಲೇ ಎಫ್‌ಎಸ್‌ಎಲ್ ಟೀಂ ಕರೆಸಿ ಸೂಕ್ತ ತನಿಖೆಗೆ ಆದೇಶ ನೀಡಲಾಯಿತು.
ತನಿಖಾ ತಂಡ ಹಾಗೂ FSL ತಂಡ ಸೇರಿ ಆ ಮನೆಯಿಂದ 71 ಸಾಕ್ಷ್ಯಗಳನ್ನು ಕಲೆ ಹಾಕಲಾಗಿತ್ತು. ಎಲ್ಲಾ ಸ್ಯಾಂಪಲ್ಸ್​ಗಳನ್ನು ದಾವಣಗೆರೆ, ಬೆಂಗಳೂರು ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಇದು ತುಂಬಾ ಸೆನ್ಸಿಬಲ್ ಕೇಸ್ ಆಗಿದ್ದರಿಂದ ರಿಪೋರ್ಟ್ ತಡವಾಗಿ ಬಂದಿದೆ.

ಇದನ್ನೂ ಓದಿ:ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಸಿಕ್ಕ ಪ್ರಕರಣ: ಆತ್ಮಹತ್ಯೆ ಮಾಡಿಕೊಂಡಿತಾ ಜಗನ್ನಾಥರೆಡ್ಡಿ ಕುಟುಂಬ?

ಈ ಬಗ್ಗೆ ಮೃತರ ಸಂಬಂಧಿಕ ಪವನ್ ಕುಮಾರ್ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಜಗನ್ನಾಥ ರೆಡ್ಡಿ ಕುಟುಂಬವೇ ಎಂದು ಪವನ್ ದೂರು ನೀಡಿದ್ದರು. FSL ವರದಿಯಲ್ಲಿ ದೇಹಗಳ ಯಾವುದೇ ಭಾಗದಲ್ಲಿ ಗುರುತುಗಳು ಕಂಡು ಬಂದಿಲ್ಲ. ಅಸ್ಥಿಪಂಜರದ ಸ್ಯಾಂಪಲ್ ಗಳಲ್ಲಿ ನಿದ್ದೆ ಮಾತ್ರೆಗಳು ಸೇವನೆ ಮಾಡಿರುವ ಮಾಹಿತಿ ಸಿಕ್ಕಿದೆ.
ಐದು ಮಂದಿ ನಿದ್ದೆ ಮಾತ್ರೆ ಸೇವನೆಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆ, ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

FSL ರಿಪೋರ್ಟ್ ಪ್ರಕಾರ ನಿದ್ದೆ ಮಾತ್ರೆ ಸೇವನೆಯಿಂದಲೇ‌ ಸಾವಾಗಿದೆ. ಆದ್ರೆ ಕಿಚನ್​ನಲ್ಲಿ ಇರುವ ಎರಡು ಪಾತ್ರೆಗಳಲ್ಲಿ ಸೈನೈಡ್ ಸಿಕ್ಕಿದೆ ಎಂದು FSL ನಲ್ಲಿ ಪತ್ತೆಯಾಗಿದೆ.  ಅಸ್ಥಿಪಂಜರಗಳ ದೇಹದಲ್ಲಿ ಸೈನೈಡ್ ಸೇವನೆ ಮಾಡಿರುವುದು ಕಂಡು ಬಂದಿಲ್ಲ. ಆ ಮನೆಯಲ್ಲಿ‌ ಔಷಧಿಗಳು, ಮಾತ್ರೆಗಳು ಸಿಕ್ಕಿವೆ. ನಮ್ಮ‌‌‌ ತನಿಖೆ ಪ್ರಕಾರ ಫೆಬ್ರವರಿ, ಮಾರ್ಚ್ 2019 ರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೋಸ್ಟ್ ಮಾರ್ಟ್ಂ ರಿಪೋರ್ಟ್ ನಲ್ಲಿ ಖಚಿತವಾಗಿ ಹೇಳಲಾಗಿಲ್ಲ. ಆದ್ರೆ, ನಮ್ಮ ಎಲ್ಲಾ ರೀತಿಯ ಆಯಾಮಗಳ ತನಿಖೆಯಲ್ಲಿ ಈ ಸತ್ಯಾಂಶ ಬೆಳಕಿಗೆ ಬಂದಿದೆ. ಮುಂದುವರೆದ ತನಿಖೆಯನ್ನು CPI ಗೆ ಒಪ್ಪಿಸಲಾಗಿದೆ. ಇದು ಸಾವಿಗೆ ಸೂಕ್ತ ಕಾರಣ ಏನು ಎಂಬುದು ಬೆಳಕಿಗೆ ಬರಲಿದೆ. CPI ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ ಎಂದರು.

ಘಟನೆ ವಿವರ

2023 ಡಿ.29 ರಂದು ಚಿತ್ರದುರ್ಗದಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ನಾಥರೆಡ್ಡಿ ಕುಟುಂಬ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತಹತ್ಯೆಗೆ ಶರಣಾಗಿದ್ದಾರೆ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಬಳಿಕ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದರು. ಈ ಡೆತ್​ನೋಟ್​ನಲ್ಲಿ, ‘ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ 2013ರಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಇದೇ ವರ್ಷ ನರೇಂದ್ರರೆಡ್ಡಿ ಗೆಳೆಯರ ಜತೆ ಸೇರಿ ಬಿಡದಿ ಬಳಿ ವಾಹನವೊಂದನ್ನು ತಡೆದು ದರೋಡೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಕೆಲದಿನಗಳ ಕಾಲ ಜೈಲಿನಲ್ಲಿದ್ದನು. ನರೇಂದ್ರರೆಡ್ಡಿಯ ಈ ಕೃತ್ಯದಿಂದ ಮನನೊಂದ ಕುಟುಂಬ, ಡೆತ್​ ನೋಟ್​ ಬರೆದಿಟ್ಟು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಈ ಎಲ್ಲ ವಿಷಯ ಡೆತ್​ ನೋಟ್​ನಲ್ಲಿತ್ತು. ಇದೀಗ ಎಫ್​ಎಸ್​ಎಲ್​ ವರದಿಯಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಗ್ಗೆ ಉಲ್ಲೇಖಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Thu, 16 May 24