ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಸಿಕ್ಕ ಪ್ರಕರಣ: ಆತ್ಮಹತ್ಯೆ ಮಾಡಿಕೊಂಡಿತಾ ಜಗನ್ನಾಥರೆಡ್ಡಿ ಕುಟುಂಬ?

ಚಿತ್ರದುರ್ಗದ ಚಳ್ಳಕೆರೆ ಗೇಟ್​ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ ಆಗಿವೆ. ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ (80) ಮತ್ತು ಅವರ ಕುಟುಂಬ ವಾಸವಾಗಿತ್ತು. ಈ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಸಿಕ್ಕ ಪ್ರಕರಣ: ಆತ್ಮಹತ್ಯೆ ಮಾಡಿಕೊಂಡಿತಾ ಜಗನ್ನಾಥರೆಡ್ಡಿ ಕುಟುಂಬ?
ಜಗನ್ನಾಥರೆಡ್ಡಿ ಮನೆಯಲ್ಲಿ ಪೊಲೀಸರ ಶೋಧ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ವಿವೇಕ ಬಿರಾದಾರ

Updated on:Dec 29, 2023 | 2:17 PM

ಚಿತ್ರದುರ್ಗ, ಡಿಸೆಂಬರ್​​ 29: ನಗರದ ಚಳ್ಳಕೆರೆ (Challakere) ಗೇಟ್​ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ (Skeleton) ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ನಾಥರೆಡ್ಡಿ ಕುಟುಂಬ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತಹತ್ಯೆಗೆ ಶರಣಾಗಿದ್ದಾರೆ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ 2013ರಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಇದೇ ವರ್ಷ ನರೇಂದ್ರರೆಡ್ಡಿ ಗೆಳೆಯರ ಜತೆ ಸೇರಿ ಬಿಡದಿ ಬಳಿ ವಾಹನವೊಂದನ್ನು ತಡೆದು ದರೋಡೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಕೆಲದಿನಗಳ ಕಾಲ ಜೈಲಿನಲ್ಲಿದ್ದನು. ನರೇಂದ್ರರೆಡ್ಡಿಯ ಈ ಕೃತ್ಯದಿಂದ ಮನನೊಂದ ಕುಟುಂಬ, ಡೆತ್​ ನೋಟ್​ ಬರೆದಿಟ್ಟು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದೆ. ಈ ಎಲ್ಲ ವಿಷಯ ಡೆತ್​ ನೋಟ್​ನಲ್ಲಿದೆ.

ಇದನ್ನೂ ಓದಿ: ಪಾಳುಬಿದ್ದ ಮನೆಯಲ್ಲಿ ನಿಗೂಢ ಐದು ಅಸ್ಥಿಪಂಜರ ಪತ್ತೆ

ಇನ್ನು 2019ರ ಜನವರಿಯಲ್ಲಿ ಕೊನೆಯದಾಗಿ ವಿದ್ಯುತ್ ಬಿಲ್ ಪಾವತಿಸಲಾಗಿದೆ. ಈವರೆಗೆ 2,850 ರೂ. ಕರೆಂಟ್ ಬಿಲ್ ಬಾಕಿ ಉಳಿದಿದೆ. ನಿವೃತ್ತ ಇಂಜಿನಿಯರ್ ಪಿಂಚಣಿಗಾಗಿ ಪ್ರತಿವರ್ಷ ಅರ್ಜಿ ಸಲ್ಲಿಸುತ್ತಿದ್ದರು. ಇನ್ನು ಕುಟುಂಬ ಚಿನ್ನ ಅಡವಿಟ್ಟು ಸಾಲ ಪಡೆದಿರುವ ಮಾಹಿತಿ ಪೊಲೀಸರಿಗೆ ದೊರೆತಿದೆ. ಒಟ್ಟಾರೆಯಾಗಿ ಪೊಲೀಸರು ಎಲ್ಲ ಆಯಾಮದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೊರೊನಾದಿಂದ ಸತ್ತಿದ್ದಾರಾ ಎಂದು ತನಿಖೆ: ಪರಮೇಶ್ವರ್​

ಮನೆಯಲ್ಲಿ ಅಸ್ಥಿಪಂಜರಗಳು ಸಿಕ್ಕ ಕುರಿತು ತನಿಖೆ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸದ್ಯ ಅಸ್ಥಿಪಂಜರ ಸಿಕ್ಕಿರುವ ಮಾಹಿತಿ ಅಷ್ಟೇ ಇದೆ. ಕೊರೊನಾದಿಂದ ಸತ್ತಿದ್ದಾರಾ ಎಂದು ತನಿಖೆ ಮಾಡುತ್ತೇವೆ ಎಂದು ಗೃಹಸಚಿವ ಡಾ. ಜಿ ಪರಮೇಶ್ವರ್ ಹೇಳಿದರು

ಈ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಮಾತನಾಡಿ ಜಗನ್ನಾಥರೆಡ್ಡಿ (80) ನಿವೃತ್ತ ಇಂಜಿನಿಯರ್ ಆಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ, ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಜಗನ್ನಾಥರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:00 pm, Fri, 29 December 23