ಮುರುಘಾಶ್ರೀಗಳ ಬಂಧನದ ನಡುವೆಯೂ ಮುರುಘಾಮಠದಲ್ಲಿ ನಾಳೆ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಸಿದ್ಧತೆ

ಹೆಬ್ಬಾಳು ಮಠದ ಮಹಾಂತ ರುದ್ರೇಶ್ವರಸ್ವಾಮಿ ನೇತೃತ್ವದಲ್ಲಿ ಕಲ್ಯಾಣ ಮಹೋತ್ಸವ ನಡೆಯಲಿದ್ದು ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿಯನ್ನು ಗುರುಮಠಕಲ್ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ ವಹಿಸಿಕೊಂಡಿದ್ದಾರೆ.

ಮುರುಘಾಶ್ರೀಗಳ ಬಂಧನದ ನಡುವೆಯೂ ಮುರುಘಾಮಠದಲ್ಲಿ ನಾಳೆ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಸಿದ್ಧತೆ
ಮುರುಘಾಮಠ
Updated By: ಆಯೇಷಾ ಬಾನು

Updated on: Sep 04, 2022 | 4:15 PM

ಚಿತ್ರದುರ್ಗ: ಜಿಲ್ಲೆಯ ಮುರುಘಾಮಠದಲ್ಲಿ ನಾಳೆ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಹೆಬ್ಬಾಳು ಮಠದ ಮಹಾಂತ ರುದ್ರೇಶ್ವರಸ್ವಾಮಿ ನೇತೃತ್ವದಲ್ಲಿ ಕಲ್ಯಾಣ ಮಹೋತ್ಸವ ನಡೆಯಲಿದ್ದು ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿಯನ್ನು ಗುರುಮಠಕಲ್ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ ವಹಿಸಿಕೊಂಡಿದ್ದಾರೆ. ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಎಸ್ ಜೆ ಎಂ ವಿದ್ಯಾಪೀಠದ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಷಣ್ಮುಖಪ್ಪ ಉಪಸ್ಥಿತರಿರಲಿದ್ದಾರೆ. ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಏಳು ಜೋಡಿ ಮದುವೆ ಮಾಡಿಕೊಳ್ಳಲಿದ್ದಾರೆ ಎಂದು ಚಿತ್ರದುರ್ಗ ಮುರುಘಾಮಠದಿಂದ ಮಾಹಿತಿ ಸಿಕ್ಕಿದೆ.

ಪ್ರತಿ ತಿಂಗಳ 5ನೇ ತಾರೀಖಿನಂದು ಮಠದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಈ ಬಾರಿ ಕೂಡ ನಡೆಸಲು ತಯಾರಿ ನಡೆದಿದೆ. ನಾಳೆ ನಡೆಯಲಿರುವ ಸಾಮೂಹಿಕ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಡಲು 11 ಜೋಡಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಸ್ವಾಮೀಜಿಯ ಬಂಧನ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹ ನೋಂದಣಿ ದಿಡೀರ್ ಕುಸಿದಿದೆ. ನಿಗದಿಯಂತೆಯೇ ಸೋಮವಾರ ಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

ಮುರುಘಾ ಮಠದ ಹಾಸ್ಟೆಲ್ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಮುರುಘಾಶ್ರೀ ಅರೆಸ್ಟ್ ಆಗಿದ್ದಾರೆ. ಚಿತ್ರದುರ್ಗ ಪೊಲೀಸರು ಶ್ರೀಗಳನ್ನು ಮಠಕ್ಕೆ ಕರೆತಂದು ಮಹಜರು ಪ್ರಕ್ರಿಯೆಯನ್ನೂ ಮುಗಿಸಿದ್ದಾರೆ. ಈ ಬೆನ್ನಲ್ಲೇ ಈಗ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ.

ಮುರುಘಾ ಮಠದಲ್ಲಿ ಸ್ಥಳ ಮಹಜರು ವೇಳೆ ಕಣ್ಣೀರಿಟ್ಟ ಸ್ವಾಮೀಜಿ

ಪೋಕ್ಸೋ ಕೇಸ್​ನಲ್ಲಿ ಪೊಲೀಸರ ವಶದಲ್ಲಿರುವ ಮುರುಘಾಶ್ರೀಗಳು ಮುರುಘಾ ಮಠದಲ್ಲಿ ಸ್ಥಳ ಮಹಜರು ವೇಳೆ ಕಣ್ಣೀರಿಟ್ಟ ಘಟನೆ ನಡೆದಿದೆ. ಮಹಜರು ವೇಳೆ ಮುರುಘಾಶ್ರೀಗಳು ಗದ್ದುಗೆ, ಪೂಜಾ ಸ್ಥಳಗಳಿಗೆ ತೆರಳಿ ನಮಸ್ಕರಿಸಿದ್ರು. ಸ್ವಾಮೀಜಿ ಬಳಸುತ್ತಿದ್ದ ಎಲ್ಲಾ ಕೊಠಡಿಗಳು, ದರ್ಬಾರ್ ಹಾಲ್, ಮಠದ ಕಚೇರಿಗೆ ಚಿತ್ರದುರ್ಗದ ಪೊಲೀಸರು ಭೇಟಿ ಮಾಡಿಸಿದ್ರು. ಸ್ಥಳ ಮಹಜರು ವೇಳೆ 15ಕ್ಕೂ ಹೆಚ್ಚು ಸ್ವಾಮೀಜಿಗಳಿದ್ದರು. ಮುರುಘಾಶ್ರೀ ಕಂಡೊಡನೆ ಶಿಷ್ಯವೃಂದ ಕಣ್ಣೀರು ಹಾಕಿದೆ. ಮಠದಲ್ಲಿ ಎಲ್ಲರನ್ನು ಕಂಡು ಮುರುಘಾ ಶರಣರು ಭಾವುಕರಾದ್ರು. ಸತತ ಒಂದೂವರೆ ಗಂಟೆ ಕಾಲ ಪೊಲೀಸರು ಶ್ರೀಗಳ ವಾಸ್ತವ್ಯದ ಕೊಠಡಿಯಲ್ಲಿ ಮಾಹಿತಿ ಪಡೆದ್ರು. ಎಸ್​ಪಿ, ಡಿವೈಎಸ್​​ಪಿ ಮುರುಘಾ ಶರಣರಿಂದ ಮಾಹಿತಿ ಕಲೆ ಹಾಕಿದ್ದಾರೆ. ಮುರುಘಾ ಸ್ವಾಮೀಜಿ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:11 pm, Sun, 4 September 22