ಮುರುಘಾಶ್ರೀಗೆ ಮತ್ತೊಮ್ಮೆ ಎದುರಾದ ಸಂಕಷ್ಟ; ಕೋರ್ಟ್ ನಿರ್ಬಂಧ ಮೀರಿ ಮಠದ ನಿವೇಶನ ಮಾರಾಟ
ಚಿತ್ರದುರ್ಗದ ಹೊಸದುರ್ಗದಲ್ಲಿ ಮುರುಘಾ ಮಠಕ್ಕೆ ಸೇರಿದ ನಾಲ್ಕು ನಿವೇಶನಗಳ ಅಕ್ರಮ ಮಾರಾಟದ ಆರೋಪದಡಿ ಮುರುಘಾಶ್ರೀ ವಿರುದ್ಧ ದಾವೆ ಹೂಡಲಾಗಿದೆ. ಕೋರ್ಟ್ ನಿರ್ಬಂಧ ಉಲ್ಲಂಘಿಸಿ ಆಸ್ತಿ ಮಾರಾಟ ಮಾಡಿರುವ ಬಗ್ಗೆ ಮಠದ ಆಡಳಿತ ಸಮಿತಿ ನ್ಯಾಯಾಲಯಕ್ಕೆ ದೂರು ನೀಡಿದೆ. ಮುರುಘಾಶ್ರೀಗೆ ಇದು ಮತ್ತೊಂದು ಕಾನೂನು ಸಂಕಷ್ಟ ತಂದಿದೆ. ಪ್ರಕರಣದ ವಿಚಾರಣೆ ಮುಂದುವರಿದಿದೆ.

ಚಿತ್ರದುರ್ಗ, ಜನವರಿ 31: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮುರುಘಾಮಠದ ಮಾಜಿ ಪೀಠಾಧಿಪತಿ ಮುರುಘಾಶ್ರೀಗೆ (Murughashree) ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುರುಘಾಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಡಿ ಮುರುಘಾಶ್ರೀ ವಿರುದ್ಧ ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಮುರುಘಾಮಠದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರು ಈ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಸರ್ಕಾರದಿಂದ ನೇಮಕಗೊಂಡಿರುವ ಮಠದ ಆಡಳಿತ ಸಮಿತಿಗೆ ಪ್ರಕಾಶ್ ಎಂಬುವರಿಂದ ಈ ಬಗ್ಗೆ ದೂರು ಬಂದಿತ್ತು ಈ ಹಿನ್ನೆಲೆಯಲ್ಲಿ ವಿಷಯವನ್ನು ಪರಿಶೀಲಿಸಲಾಗಿದ್ದು, ಬಳಿಕ ಕೋರ್ಟ್ ಮೊರೆ ಹೋಗಲಾಗಿದೆ.
ಕೋರ್ಟ್ ನಿರ್ಬಂಧ ಇದ್ದರೂ ಮುರುಘಾಶ್ರೀ ಅವರು ಹೊಸದುರ್ಗದ ಎಂ. ಮಂಜುನಾಥ್ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ನೀಡಿ, ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಮಮತಾ ಹಾಗೂ ನಳಿನಿ ಎಂಬವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜ.30ರಂದು ಮುರುಘಾಮಠದ ಆಡಳಿತ ಸಮಿತಿ ಅಧಿಕೃತವಾಗಿ ನ್ಯಾಯಾಲಯವನ್ನು ಸಂಪರ್ಕಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಯಲಿದೆ.
ಈಗಾಗಲೇ A1 ಆರೋಪಿಯಾಗಿರುವ ಮುರುಘಾಶ್ರೀ
ಮುರುಘಾಶ್ರೀ ವಿರುದ್ಧ ಈಗಾಗಲೇ ಫೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ಅವರು ಎ1 ಆರೋಪಿಯಾಗಿದ್ದಾರೆ. ಈ ಹಿನ್ನೆಲೆ ಕೋರ್ಟ್ ಅವರ ಮೇಲೆ ಆಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ನಿರ್ಬಂಧ ವಿಧಿಸಿತ್ತು. ಅದನ್ನೇ ಉಲ್ಲಂಘಿಸಿ ನಿವೇಶನ ಮಾರಾಟ ನಡೆದಿದೆ ಎಂಬುದು ಆಡಳಿತ ಸಮಿತಿಯ ಆರೋಪವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.