ಜಾತಿ ಕಾರಣಕ್ಕೆ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ: ಈಶ್ವರಾನಂದಪುರಿ ಸ್ವಾಮೀಜಿ ಬೇಸರ
ಜಾತಿ ಗಣತಿ ವಿಚಾರವಾಗಿ ಮೇಲ್ವರ್ಗ ಹಾಗೂ ಕೆಳವರ್ಗ ಸ್ವಾಮೀಜಿಗಳ ನಡುವೆ ಮುಸುಕಿನ ಗುದ್ದಾಟಗಳು ನಡೆದಿವೆ. ಇದರ ಮಧ್ಯೆ ಜಾತಿ ಕಾರಣಕ್ಕೆ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ ಎಂದು ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಚಿತ್ರದುರ್ಗ, (ಫೆಬ್ರವರಿ 02): ಜಾತಿ ಕಾರಣಕ್ಕೆ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ ಎಂದು ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆದ ಪರಿವರ್ತನೆ ಹಾದಿಯಲ್ಲಿ ಮಠಗಳು ಗೋಷ್ಠಿಯಲ್ಲಿ ಮಾತನಾಡಿದ ಈಶ್ವರಾನಂದಪುರಿ ಸ್ವಾಮೀಜಿ, ಬಾಗೂರು ಗ್ರಾಮದ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ. ನಾವು ದೇವಸ್ಥಾನಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ಸ್ವಚ್ಛಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕುರುಬ ಸಮುದಾಯದ ಸ್ವಾಮೀಜಿ ಒಳಗೆ ಬಂದರೆಂಬ ಕಾರಣಕ್ಕೆ ಸ್ವಚ್ಛಗೊಳಿಸಿದ್ದಾರೆ. ನಾವು ಹೋಗಿದ್ದಕ್ಕಾಗಿ ದೇಗುಲ ಸ್ವಚ್ಛವಾಯಿತೆಂದು ಟಾಂಗ್ ಕೊಟ್ಟ ಸ್ವಾಮೀಜಿ, ಇನ್ಮುಂದೆ ಎಂದಿಗೂ ಚನ್ನಕೇಶವ ದೇವಸ್ಥಾನಕ್ಕೆ ನಾವು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವೈಕುಂಠ ಏಕಾದಶಿಗೆ ದೇಗುಲಕ್ಕೆ ಹೋಗಿದ್ದಾಗ ನರಕ ತೋರಿಸಿಬಿಟ್ಟರು. ಪೂಜಾರಿ ಹೆಣ್ಣುಮಕ್ಕಳಿಗೆಲ್ಲಾ ಗರ್ಭಗುಡಿ ಪ್ರವೇಶಿಸಲು ಬಿಟ್ಟಿದ್ದರು. ಮಠಾಧೀಶರಾದ ನಮಗೇ ಚನ್ನಕೇಶವ ದೇಗುಲದ ಗರ್ಭಗುಡಿಗೆ ಬಿಡಲಿಲ್ಲ. ಮುಜರಾಯಿ ಇಲಾಖೆ ದೇಗುಲ ಎಂದು ಗೊತ್ತಿದ್ದರೆ ಪ್ರತಿಭಟಿಸುತ್ತಿದ್ದೆವು. ಉಡುಪಿಯಲ್ಲಿ ಕನಕದಾಸರು ಪ್ರತಿಭಟಿಸಿದಂತೆ ಪ್ರತಿಭಟನೆ ಮಾಡ್ತಿದ್ದೆವು. ಆದ್ರೆ, ಆಗ ಮುಜರಾಯಿ ಇಲಾಖೆ ದೇಗುಲ ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು.
ಇನ್ನು ಗೋಷ್ಠಿಯಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯಶ್ರೀ, ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಉಪಸ್ಥಿತರಿದ್ದರು.
Published On - 10:50 pm, Fri, 2 February 24