ಚಿತ್ರದುರ್ಗ, ಅಕ್ಟೋಬರ್ 07: ಪೋಕ್ಸೋ (Pocso) ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾಶ್ರೀ (Chitradurga Murugha Shri) ಅವರನ್ನು ಬಿಡುಗಡೆಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.
ಈ ಹಿಂದೆ ಹೈಕೋರ್ಟ್ ಮುರುಘಾಶ್ರೀಗೆ ಜಾಮೀನು ನೀಡಿತ್ತು. ಆದರೆ, ಸಾಕ್ಷ ವಿಚಾರಣೆ ನಡೆಸುವವರೆಗೆ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದೀಗ, ಸಂತ್ರಸ್ತೆಯರಿಬ್ಬರು ಸೇರಿದಂತೆ 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಜಾರ್ಜ್ಶೀಟ್ ಸಲ್ಲಿಸಿದ ಪೊಲೀಸರು: 12 ಮತ್ತು 14 ವರ್ಷದ ಸಂತ್ರಸ್ತೆಯರ ಹೇಳಿಕೆ ಇಲ್ಲಿದೆ
ಆದೇಶದ ಪ್ರತಿ ಜಿಲ್ಲಾ ಕಾರಾಗೃಹ ಅಧಿಕಾರಿಗಳ ಕೈ ಸೇರಿದ ಬಳಿಕ ತಲುಪಿದ ಬಳಿಕ ಬಿಡುಗಡೆ ಮುರುಘಾಶ್ರೀ ಜೈಲಿನಿಂದ ಹೊರಗೆ ಬರಲಿದ್ದಾರೆ. ಹೊರಬಂದ ಬಳಿಕ ಶ್ರೀಗಳು ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ತೆರಳಲಿದ್ದಾರೆ.
ಫೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ರದ್ದು ಕೋರಿ ಸಂತ್ರಸ್ತೆ ಪರವಾಗಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುರುಘಾಶ್ರೀ ಅವರ ಜಾಮೀನು ರದ್ದುಗೊಳಿಸಿತ್ತು. ಸಾಕ್ಷಗಳ ವಿಚಾರಣೆ ಮುಗಿಯುವವರೆಗೆ ಮುರುಘಾಶ್ರೀ ಬಂಧನದಲ್ಲಿರಲು ಸುಪ್ರೀಂಕೋರ್ಟ್ ಸೂಚಿಸಿತ್ತು. ಇಂದಿಗೆ 13 ಮುಖ್ಯ ಸಾಕ್ಷಗಳ ವಿಚಾರಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಮುರುಘಾಶ್ರೀ ಅವರ ಬಿಡುಗಡೆಗೆ ನ್ಯಾಯಾಲಯ ಆದೇಶ ನೀಡಿದೆ ಎಂದು ಮುರುಘಾಶ್ರೀ ಪರ ವಕೀಲ ಕೆ. ವಿಶ್ವನಾಥಯ್ಯ ಹೇಳಿದರು.
ಚಿತ್ರದುರ್ಗ ಜೈಲಿಗೆ ಕೋರ್ಟ್ನಿಂದ ಬಿಡುಗಡೆ ಆದೇಶ ಬಂದಿದೆ. ಹೈಕೋರ್ಟ್ ನೀಡಿದ ಷರತ್ತುಬದ್ಧ ಜಾಮೀನಿನ್ವಯ ಮಧ್ಯಾಹ್ನ 4ಗಂಟೆ ವೇಳೆಗೆ ಮುರುಘಾಶ್ರೀ ಬಿಡುಗಡೆಯಾಗುತ್ತಾರೆ. ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಮುರುಘಾಶ್ರೀ ಇರುವಂತಿಲ್ಲ. ಹೀಗಾಗಿ ಮುರುಘಾಶ್ರೀಗಳು ಬಿಡುಗಡೆ ಬಳಿಕ ದಾವಣಗೆರೆಗೆ ತೆರಳುತ್ತಾರೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Mon, 7 October 24