ಚಿತ್ರದುರ್ಗ: ಟಿವಿ9 ಎರಡು ದಿನದ ಹಿಂದೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆಯಲ್ಲಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಜನರು ಪರದಾಟ ನಡೆಸುತ್ತಿರುವ ಕುರಿತು ವರದಿ ಪ್ರಸಾರ ಮಾಡಿತ್ತು. ಸಾರಿಗೆ ಬಸ್ ಇಲ್ಲದೆ ವಿದ್ಯಾರ್ಥಿಗಳು, ಜನರ ಪರದಾಟದ ಬಗ್ಗೆ ಟಿವಿ9ನಲ್ಲಿ ವಿಸ್ತೃತ ವರದಿ ಪ್ರಸಾರವಾದ ಬಳಿಕ ಎಚ್ಛೆತ್ತ ಸರ್ಕಾರ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಸಾರಿಗೆ ಸಚಿವ ಶ್ರೀರಾಮುಲು ಕ್ಷೇತ್ರದಲ್ಲೇ ಸಾರಿಗೆ ಸಮಸ್ಯೆ ಬಗ್ಗೆ ವರದಿ ಪ್ರಸಾರವಾದ ಬೆನ್ನಲೇ ಕಣಕುಪ್ಪೆಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯ ಕಣಕುಪ್ಪೆ ಗ್ರಾಮದ ಜನರು ಮತ್ತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದು, ಟಿವಿ9ಗೆ ಧನ್ಯವಾದ ಹೇಳಿದ್ದಾರೆ.
ಸಾರಿಗೆ ಸಚಿವ ರಾಮುಲು ಪ್ರತಿನಿಧಿಸುವ ಗ್ರಾಮದಲ್ಲಿ ಬಸ್ ವ್ಯವಸ್ಥೆ ಇಲ್ಲದ ಕುರಿತು ಈ ಹಿಂದೆ ದನಿ ಎತ್ತಿದ ಟಿವಿ9 ಡಿಜಟಲ್
ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮಕ್ಕೆ ಸಾರಿಗೆ ಬಸ್ಗಳ ವ್ಯವಸ್ಥೆಯಿಲ್ಲದೆ ಜನ ಹೈರಾಣಾಗಿದ್ದರು. ಮೊಳಕಾಲ್ಮೂರನ್ನು ಸಾರಿಗೆ ಸಚಿವ ಶ್ರೀರಾಮುಲು ಪ್ರತಿನಿಧಿಸುತ್ತಾರೆ. ಆದರೆ ಸಾರಿಗೆ ಸಚಿವರ ಕ್ಷೇತ್ರದ ಗ್ರಾಮವೊಂದರಲ್ಲಿ ಬಸ್ ಸೇವೆಯೇ ಇಲ್ಲ. ಈಗಲೂ ಮಕ್ಕಳು, ಜನ ಸಾಮಾನ್ಯರು ಬಸ್ಗಳಿಲ್ಲದೆ ನಾಲ್ಕಾರು ಕಿ.ಮೀ ನಡೆಯುವ ದುಸ್ಥಿತಿ ಇತ್ತು.
ಕಣಕುಪ್ಪೆ ಗ್ರಾಮಕ್ಕೆ ಸಾರಿಗೆ ಬಸ್ಗಳ ವ್ಯವಸ್ಥೆ ಇಲ್ಲ. ಹೀಗಾಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಮುಂಜಾನೆಯೇ ಮನೆ ಬಿಡಬೇಕು. ಆಗಲೇ ಸರಿಯಾದ ಸಮಯಕ್ಕೆ ಶಾಲೆ ಸೇರಲು ಆಗುವುದು. ಇನ್ನು ಬಸ್ ಇಲ್ಲದ ಕಾರಣ ಶಾಲಾ, ಕಾಲೇಜು ವಿದ್ಯಾರ್ಥಿಗಳು ಆಟೋಗಳ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಾರೆ. ಇದು ಜೀವಕ್ಕೆ ಅಪಾಯವಾದರೂ ಇಲ್ಲಿನ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ.
ಫೆಬ್ರವರಿ 20ರಂದು ಡಿಸಿ ಕವಿತಾ ಮನ್ನಿಕೇರಿ ಗ್ರಾಮ ವಾಸ್ತವ್ಯ ಹೂಡಿದ್ದರು. ಡಿಸಿ ಸೂಚನೆ ಮೇರೆಗೆ ಆಗ ಕೆಲ ದಿನ ಮಾತ್ರ ಬಸ್ ಸಂಚಾರ ಮಾಡಿತು. ಈಗ ಅದೇ ರಾಗ ಅದೇ ತಾಳದಂತೆ ಬಸ್ ಸೇವೆ ಬಂದ್ ಆಗಿದೆ. ಶಾಲಾ, ಕಾಲೇಜು ಆರಂಭವಾದರೂ ಸಾರಿಗೆ ಬಸ್ಗಳ ಸುಳಿವು ಮಾತ್ರ ಇಲ್ಲ. ಹೀಗಾಗಿ ಗ್ರಾಮದ ಜನರು ಸರ್ಕಾರ, ಸಾರಿಗೆ ಸಚಿವರು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.