ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣನ (Shivamurthy Murugha Sharana) ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿ ಬಹಿರಂಗವಾದ ಬಳಿಕ ಲಿಂಗಾಯತ-ವೀರಶೈವ ಸಮಾಜದ ಮುಖಂಡರು ಸಿಟ್ಟಿಗೆದ್ದು ಪ್ರತಿಕ್ರಿಯಿಸುತ್ತಿದ್ದಾರೆ. ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನಡೆದ ನಾಟಕೋತ್ಸವ (Sanehalli Theatre Festival) ಸಮಾರಂಭದಲ್ಲಿ ಮಾತನಾಡಿದ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ‘ಹೆಣ್ಣು ಮಕ್ಕಳು ಸ್ವಾಮೀಜಿ ಬಳಿ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಬರಬಾರದು. ನಮ್ಮ ಹೆಣ್ಣು ಮಕ್ಕಳು ಕೂಡ ಎಚ್ಚರವಾಗಿ ಇರಬೇಕು. ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಮಾಡುತ್ತದೆ’ ಎಂದರು.
‘ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂಬುದನ್ನು ವೀರಶೈವರು ಅರಿಯಬೇಕು. ಒಳಪಂಗಡಗಳ ಭೇದ ಮರೆತು ವೀರಶೈವರು ಒಂದಾಗಬೇಕು. ಎಲ್ಲರೂ ಸರ್ಕಾರದ ಸಹಾಯ ಕೇಳುತ್ತಿದ್ದಾರೆ. ಸರ್ಕಾರದಿಂದ ಸಹಾಯ ಕೇಳುವುದು ನಾಚಿಕೆಗೇಡಿನ ಸಂಗತಿ. ನಾವು ಸ್ವಾಭಿಮಾನದಿಂದ ಇರಬೇಕು, ಸ್ವಂತ ಶಕ್ತಿ ಪ್ರದರ್ಶಿಸಬೇಕು. ಸರ್ಕಾರದ ಮೇಲೆ ಡಿಪೆಂಡ್ ಆದರೆ ಎಂದಿಗೂ ಯಾವುದೇ ಕೆಲಸ ಆಗುವುದಿಲ್ಲ. ನಾವು ಹತ್ತು ರೂಪಾಯಿ ದುಡಿದರೆ ಒಂದು ರೂಪಾಯಿ ದಾನ-ಧರ್ಮ ಮಾಡಬೇಕು. ದಾನ-ಧರ್ಮದಿಂದಲೇ ನಾವು ಶ್ರೀಮಂತರಾಗಿದ್ದೇವೆ’ ಎಂದು ಹೇಳಿದರು.
ಶಿವಸಂಚಾರ ಕಲಾ ತಂಡಕ್ಕೆ 2 ಕೋಟಿ ಅನುದಾನ
ಸಾಣೇಹಳ್ಳಿಯ ಶಿವಸಂಚಾರ ಕಲಾತಂಡಕ್ಕೆ ₹ 2 ಕೋಟಿ ಅನುದಾನ ನೀಡಲಾಗುವುದು. ಶಿವಕುಮಾರ ರಂಗಶಾಲೆಯನ್ನು ವಿಶ್ವವಿದ್ಯಾಲಯವನ್ನಾಗಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶಿವಸಂಚಾರ ರಾಷ್ಟೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ ಪಂಡಿತಾರಾಧ್ಯ ಸ್ವಾಮೀಜಿ ಅವರ ಶ್ಲಾಘನೀಯ ಕೆಲಸಗಳನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ತುಂಬಾ ಮುಖ್ಯವಾದುದು. ತಪ್ಪು ಹೆಜ್ಜೆ ಇಟ್ಟರೆ ನಮಗೆ, ಮನೆತನಕ್ಕೆ ಕಷ್ಟವಾಗುತ್ತದೆ. ಗುರುಗಳು ಎಲ್ಲರಿಗೂ ಮಾರ್ಗದರ್ಶನ ಮಾಡುವಂತಿರಬೇಕು. ಡಾ ಪಂಡಿತಾರಾಧ್ಯ ಸ್ವಾಮೀಜಿ ಅವರ ಕರಾರು ರಹಿತ ಪ್ರೀತಿ ಅನುಕರಣೀಯ. ಈಗಿನ ಕಾಲದಲ್ಲಿ ನಾವು ದೇವರ ಜತೆಗೂ ಕರಾರು ಮಾಡಿಕೊಳ್ಳುತ್ತಿದ್ದೇವೆ. ಇಂಥ ಕರಾರುಗಳು ಭಕ್ತಿಯಲ್ಲಿ ಇರಬಾರದು ಎಂದು ಕಿವಿಮಾತು ಹೇಳಿದರು.
Published On - 8:35 am, Wed, 9 November 22