7th Pay Commission: ಒಪಿಎಸ್ ಜಾರಿಗೆ ಗಡುವು; ಸರ್ಕಾರಿ ನೌಕರರ ಸಂಘದ ಜತೆ ಮಾತುಕತೆ ನಡೆಸಲಿದ್ದಾರೆ ಸಿಎಂ ಬೊಮ್ಮಾಯಿ
ಶುಕ್ರವಾರ ನೌರರ ಸಂಘದ ಜತೆ ಮುಖ್ಯಮಂತ್ರಿಗಳು ಮಾತುಕತೆ ನಡೆಸುವ ನಿರೀಕ್ಷೆ ಇದ್ದು, ಮುಷ್ಕರದಂಥ ಆತುರದ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡುವ ಸಾಧ್ಯತೆ ಇದೆ.
ಬೆಂಗಳೂರು: 7ನೇ ವೇತನ ಆಯೋಗದಲ್ಲಿ (7th Pay Commission) ಹಳೇ ಪಿಂಚಣಿ ನೀತಿ (Old Pension Scheme-OPS) ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (Karnataka Government Employees Association) ರಾಜ್ಯ ಸರ್ಕಾರಕ್ಕೆ ಫೆಬ್ರವರಿ 22ರಿಂದ 7 ದಿನಗಳ ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ಜತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಶುಕ್ರವಾರ ನೌರರ ಸಂಘದ ಜತೆ ಮುಖ್ಯಮಂತ್ರಿಗಳು ಮಾತುಕತೆ ನಡೆಸುವ ನಿರೀಕ್ಷೆ ಇದ್ದು, ಮುಷ್ಕರದಂಥ ಆತುರದ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡುವ ಸಾಧ್ಯತೆ ಇದೆ. ಶೀಘ್ರದಲ್ಲೇ ಮಾತುಕತೆ ನಡೆಸುವುದಾಗಿ ಸಂಘದ ಪದಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈಗಾಗಲೇ ಸಂದೇಶ ರವಾನಿಸಿದ್ದಾರೆ. ಬುಧವಾರ ಮುಖ್ಯಮಂತ್ರಿಗಳು ಬಳ್ಳಾರಿ ಪ್ರವಾಸದಲ್ಲಿರುವುದರಿಂದ ಶುಕ್ರವಾರ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಳೇ ಪಿಂಚಣಿ ನೀತಿ ಜಾರಿಗೆ ಮಂಗಳವಾರ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದ ಸರ್ಕಾರಿ ನೌಕರರ ಸಂಘ, ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಹೇಳಿತ್ತು. ಮಾರ್ಚ್ 1ರಿಂದಲೇ ಕರ್ತವ್ಯಕ್ಕೆ ಗೈರಾಗುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: 7ನೇ ವೇತನ ಆಯೋಗದಲ್ಲಿ ಒಪಿಎಸ್ ಅನುಷ್ಠಾನಕ್ಕೆ ರಾಜ್ಯ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ ನೌಕರರ ಸಂಘ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, 7ನೇ ವೇತನ ಆಯೋಗ ಜಾರಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ತೀವ್ರ ನಿರಾಸೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸಭೆ ಸೇರಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಸರ್ಕಾರಿ ನೌಕರರನ್ನು ನಾವು ಸರ್ಕಾರದ ಭಾಗವೆಂದು ಪರಿಗಣಿಸುತ್ತೇವೆ. ಅವರೊಂದಿಗೆ ಚರ್ಚಿಸಿ ಆಯೋಗದ ಶಿಫಾರಸ್ಸುಗಳನ್ನು ಪರಾಮರ್ಶಿಸಲಾಗುವುದು ಎಂದು 7ನೇ ವೇತನಾ ಆಯೋಗದ ಬಗ್ಗೆ ಮಾತಾಡಿದ ಮುಖ್ಯಮಂತ್ರಿಗಳು ಇತ್ತೀಚೆಗೆ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ