ಕೊರೊನಾ ಲಸಿಕೆ ವಿತರಣೆಗೆ ವೇಗ ನೀಡಲು ರಾಜ್ಯ ಸರ್ಕಾರ ನಿರ್ಧಾರ: ಬಿ.ಎಸ್​.ಯಡಿಯೂರಪ್ಪ

|

Updated on: Mar 17, 2021 | 3:00 PM

ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯೇ ಹೊರತು ಪರಿಸರದಲ್ಲಿರುವ ವೈರಸ್​ ನಾಶವಾಗುವುದಿಲ್ಲ. ಹೀಗಾಗಿ, ಜನರು ಮುಂಜಾಗ್ರತೆ ವಹಿಸುವ ಮೂಲಕ ಕೊರೊನಾ ತಡೆಯಲು ಸಹಕರಿಸಬೇಕು.

ಕೊರೊನಾ ಲಸಿಕೆ ವಿತರಣೆಗೆ ವೇಗ ನೀಡಲು ರಾಜ್ಯ ಸರ್ಕಾರ ನಿರ್ಧಾರ: ಬಿ.ಎಸ್​.ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಸಭೆಯ ನಂತರ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಭೆಯ ಮುಖ್ಯಾಂಶಗಳನ್ನು ಪ್ರಸ್ತುತಪಡಿಸಿರುವ ಬಿ.ಎಸ್​.ಯಡಿಯೂರಪ್ಪ, ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯೇ ಹೊರತು ಪರಿಸರದಲ್ಲಿರುವ ವೈರಸ್​ ನಾಶವಾಗುವುದಿಲ್ಲ. ಹೀಗಾಗಿ, ಜನರು ಮುಂಜಾಗ್ರತೆ ವಹಿಸುವ ಮೂಲಕ ಕೊರೊನಾ ತಡೆಯಲು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿಯವರಿಗೆ ಕರ್ನಾಟಕದ ಸ್ಥಿತಿಗತಿಯನ್ನು ವಿವರಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆ ಹಾಗೂ ಕೊರೊನಾ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಸಿಕೆಯನ್ನು ಎಲ್ಲಾ ರಾಜ್ಯಗಳಿಗೆ ವಿತರಿಸುವಷ್ಟು ಸಾಮರ್ಥ್ಯವಿದೆ. ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಸರಬರಾಜಾಗಲಿದೆ. ಈ ವಿಚಾರದಲ್ಲಿ ಭಯಬೇಡ ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಬಿ.ಎಸ್​.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಬೀದರ್, ಕಲಬುರಗಿ, ಬೆಂಗಳೂರಲ್ಲಿ ಕೊವಿಡ್ ಕೇಸ್ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಎಚ್ಚರ ವಹಿಸಲಾಗುವುದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಟೆಸ್ಟ್, ಟ್ರ್ಯಾಕ್, ಟ್ರೀಟ್ ಮಾದರಿ ಅನುಸರಿಸಲು ಕೇಂದ್ರ ಸೂಚನೆ ನೀಡಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ 9 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದ 10 ದಿನಗಳಿಂದ ಕೇರಳ, ಮಹಾರಾಷ್ಟ್ರದಲ್ಲಿ ಕೊವಿಡ್ ಕೇಸ್ ಮತ್ತೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸಬೇಕಾಗಿದೆ. ಬೆಂಗಳೂರಿನಲ್ಲಿ ಮೂರು ಕೊವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಆದಷ್ಟು ಬೇಗ 3 ಲಕ್ಷ ಜನರಿಗೆ ಕೊವಿಡ್ ಲಸಿಕೆ ನೀಡುವ ಗುರಿ ಇದೆ. ಅದಕ್ಕಾಗಿ ಲಸಿಕೆ ಹಂಚಿಕೆ ವೇಗವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಈವರೆಗೆ ಶೇ.93ರಷ್ಟು ಆರ್‌ಟಿಪಿಸಿಆರ್ ಟೆಸ್ಟ್‌ ಮಾಡಿರುವುದಕ್ಕೆ ಕೇಂದ್ರದಿಂದ ಶ್ಲಾಘನೆ ವ್ಯಕ್ತವಾಗಿದೆ. ಕೊರೊನಾ ಹರಡದಂತೆ ನೋಡಿಕೊಳ್ಳಲು ಮೈಕ್ರೋ ಕಂಟೇನ್ಮೆಂಟ್ ಜೋನ್ ಹೆಚ್ಚಿಸುವ ಬಗ್ಗೆ ಸೂಚನೆ ನೀಡಿದ್ದಾರೆ. ಅದರ ಹೊರತಾಗಿ ನೈಟ್ ಕರ್ಫ್ಯೂ, ಲಾಕ್​ಡೌನ್​, ಸೀಲ್​ಡೌನ್ ಇಲ್ಲ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಯಾವುದೇ ಅಡ್ಡಿ ಆತಂಕ ಮಾಡಲ್ಲ. ಇನ್​ಡೋರ್​ ಕಾರ್ಯಕ್ರಮಗಳಲ್ಲಿ ಮಾತ್ರ ನಿರ್ದಿಷ್ಟ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು. ಇಡೀ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಹಾಗಂತ ಸಭೆಗಳನ್ನ ಅಡ್ಡಿಪಡಿಸಲ್ಲ ಎಂದು ಕೇಂದ್ರ ತಿಳಿಸಿದೆ. ಸಿನಿಮಾ ಹಾಲ್​ಗಳಲ್ಲಿ ಈಗಿರುವ ಮಾರ್ಗಸೂಚಿಗಳನ್ನೇ ಅನುಸರಿಸಬೇಕು. ಇದೆಲ್ಲದರ ಜೊತೆಗೆ ಈಗ ಹೊಸದಾಗಿ ಬರುತ್ತಿರುವ ಲಸಿಕೆಗಳನ್ನು ಬಳಸುವ ಮೊದಲು ಹಳೆಯ ಲಸಿಕೆಗಳನ್ನು ಖಾಲಿ ಮಾಡಿ, ಯಾವುದನ್ನೂ ವ್ಯರ್ಥ ಮಾಡಬೇಡಿ ಎಂದು ಕೇಂದ್ರ ಸೂಚಿಸಿದೆ ಎನ್ನುವುದಾಗಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:
ದೇಶದ ವಿವಿಧೆಡೆ ಮತ್ತೆ ಕೊರೊನಾ ಆತಂಕ: ಮಾಸ್ಕ್ ಕಡ್ಡಾಯಗೊಳಿಸಲು ನರೇಂದ್ರ ಮೋದಿ ಸೂಚನೆ

ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಬೇಕಿಲ್ಲ; ಮಾಸ್ಕ್-ಸಾಮಾಜಿಕ ಅಂತರ ಬೇಕೇ ಬೇಕು

ರೂಪಾಂತರಿ ಕೊರೊನಾ ಭಯ: ಐಪಿಎಲ್ ಹೊರತುಪಡಿಸಿ, ಎಲ್ಲಾ ವಯೋಮಾನದವರ ದೇಶಿ ಪಂದ್ಯಾವಳಿಗಳಿಗೆ ಬ್ರೇಕ್​ ಹಾಕಿದ BCCI!

Published On - 2:43 pm, Wed, 17 March 21