TV9 Digital Live: ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಬೇಕಿಲ್ಲ; ಮಾಸ್ಕ್-ಸಾಮಾಜಿಕ ಅಂತರ ಬೇಕೇ ಬೇಕು

ಈಗಾಗಲೇ ಮಹಾರಾಷ್ಟ್ರ, ನಾಗ್ಪುರ್ ಸೇರಿದಂತೆ ಹಲವು ಕಡೆಗಳಲ್ಲಿ ಪುನಃ ಲಾಕ್​ಡೌನ್ ಮಾಡಲಾಗಿದೆ. ರಾಜ್ಯದಲ್ಲೂ ಲಾಕ್​ಡೌನ್ ಅನಿವಾರ್ಯವೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆಯನ್ನು ನಡೆಸಿದರು. ನಡೆದ ಸಭೆಯಲ್ಲಿ ಲಾಕ್​ಡೌನ್​, ಸೀಲ್​ಡೌನ್ ಮತ್ತು ನೈಟ್ ಕರ್ಫ್ಯೂ ಅಗತ್ಯವಿಲ್ಲ ಎಂದು ನಿರ್ಧಾರವಾಗಿದೆ.

TV9 Digital Live: ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಬೇಕಿಲ್ಲ; ಮಾಸ್ಕ್-ಸಾಮಾಜಿಕ ಅಂತರ ಬೇಕೇ ಬೇಕು
ಗೃಹಿಣಿ ರಶ್ಮಿ ಪ್ರೀತಂ, ಸಾಂಕ್ರಾಮಿಕ ರೋಗ ತಜ್ಞ ಡಾ.ಗಿರಿಧರ್ ಬಾಬು
Follow us
sandhya thejappa
| Updated By: ganapathi bhat

Updated on:Mar 16, 2021 | 6:54 PM

ಬೆಂಗಳೂರು: ಕೊರೊನಾ ಕಡಿಮೆಯಾಯ್ತು ಎಂದು ಯೋಚಿಸುತ್ತಿರುವಾಗಲೇ ಎರಡನೆಯ ಅಲೆಯ ನರ್ತನ ಶುರುವಾಗಿದೆ. ಒಂದು ವರ್ಷದ ಹಿಂದೆ ಆರಂಭವಾದ ಆತಂಕ ಇನ್ನೂ ಕಡಿಮೆಯಾಗಿಲ್ಲ. ಕಳೆದ ವರ್ಷ ಸೋಂಕಿನಿಂದಾದ ಸಮಸ್ಯೆ, ನಷ್ಟ ಸಣ್ಣ ಪ್ರಮಾಣದ್ದಲ್ಲ. ಸೋಂಕಿನ ವಿರುದ್ಧ ಹೋರಾಟಕ್ಕೆ ದೇಶದಲ್ಲಿ ಅನಿವಾರ್ಯವಾಗಿ ಲಾಕ್​ಡೌನ್ ಕೂಡಾ ಜಾರಿ ಮಾಡಲಾಗಿತ್ತು. ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಳಿಕ ಎಲ್ಲ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಆರಂಭವಾಯಿತು. ಆದರೆ ಈ ಕೊರೊನಾ ಮತ್ತೆ ಅಟ್ಟಹಾಸ ಮೆರೆಯುವುದಕ್ಕೆ ಶುರುಮಾಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜನಸಾಮಾನ್ಯರು ಎಷ್ಟು ಜವಬ್ದಾರಿಯಾಗಿರಬೇಕು? ಕೊರೊನಾ ನಿರ್ವಹಣೆಯನ್ನು ಸರಕಾರಕ್ಕೆ ಬಿಟ್ಟು ನಾಗರಿಕರು ಕೈ ಕಟ್ಟಿ ಕೂರಬೇಕೆ? ಎನ್ನುವ ಪ್ರಶ್ನೆಯನ್ನು ಆಧಾರವಾಗಿಸಿಕೊಂಡು ಇಂದಿನ (ಮಾ. 16) ಟಿವಿ9 ಡಿಜಿಟಲ್ ಲೈವ್​ನಲ್ಲಿ ಚರ್ಚಿಸಲಾಯಿತು. ಚರ್ಚೆಯನ್ನು ನಿರೂಪಕ ಮಾಲ್ತೇಶ್ ಜಾನಗಲ್ ನಡೆಸಿಕೊಟ್ಟಿದ್ದು, ಅತಿಥಿಯಾಗಿ ಸಾಂಕ್ರಾಮಿಕ ರೋಗ ತಜ್ಞರಾದ ಡಾ.ಗಿರಿಧರ್ ಬಾಬು, ಬಿಬಿಎಂಪಿ ವೈದ್ಯಾಧಿಕಾರಿಯಾದ ಡಾ.ಸುಶೀಲ್ ಕುಮಾರ್ ಮತ್ತು ಮೈಸೂರಿನ ಗೃಹಿಣಿಯಾದ ರಶ್ಮಿ ಪ್ರೀತಂ ಭಾಗವಹಿಸಿದರು.

ಮುಂದೆ ಬಂದು ಲಸಿಕೆ ಪಡೆಯಿರಿ ಇವತ್ತಿನ ಚರ್ಚೆಯಲ್ಲಿ ಸ್ವಯಂ ನಿಯಂತ್ರಣವನ್ನು ಹೇರಿಕೊಂಡು ಕಾಳಜಿಯನ್ನು ಹೇಗೆ ವಹಿಸಬೇಕು ಎಂದು ಮೊದಲಿಗೆ ಸಾಂಕ್ರಾಮಿಕ ರೋಗ ತಜ್ಞರಾದ ಡಾ.ಗಿರಿಧರ್ ಬಾಬುರವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಕೊರೊನಾದ ಎರಡನೆ ಅಲೆ ಪ್ರಪಂಚದಾದ್ಯಂತ ಹಲವು ಕಡೆ ಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇದು ಅನಿವಾರ್ಯವೂ ಹೌದು. ಇದೀಗ ಸೋಂಕು ತೀರಾ ವೇಗವಾಗಿ ಇತರರಿಗೆ ಹರಡುತ್ತಿದೆ. ಇದಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ. ಹೀಗಿದ್ದು ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಲಸಿಕೆಯನ್ನು ಪಡೆಯಲು ಹಿಂಜರಿಯಬಾರದು. ಲಸಿಕೆ ಬಗ್ಗೆ ಇದ್ದ ಅನುಮಾನಗಳನ್ನು ದೂರ ಮಾಡಿಕೊಂಡು ಯಾವುದೇ ಭಯವಿಲ್ಲದೆ ಮುಂದೆ ಬಂದು ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಜೊತೆಗೆ ಸೋಂಕು ಹರಡುವುದಕ್ಕೆ ಕಾರಣವಾಗುವ ಧಾರ್ಮಿಕ ಕಾರ್ಯಗಳು, ಇತರೆ ಮೆರವಣಿಗೆಗಳು ಸೇರಿದಂತೆ ಎಲ್ಲಾ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿವೆ. ಅವುಗಳಿಗೆ ಕಡಿವಾಣ ಹಾಕಿದರೆ ಮುಂದಿನ ಕೆಟ್ಟ ಪರಿಸ್ಥಿತಿಯನ್ನು ತಡೆಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಲಾಕ್​ಡೌನ್ ಬೇಡ ಚರ್ಚೆಯ ಮುಂದಿನ ಭಾಗವಾಗಿ ಮಾತನಾಡಿದ ಗೃಹಿಣಿ ರಶ್ಮಿ ಪ್ರೀತಂ ಆರೋಗ್ಯ ಎನ್ನುವುದು ತೀರಾ ಮುಖ್ಯ. ಆರೋಗ್ಯ ಸರಿಯಾಗಿದ್ದರೆ ಏನನ್ನೂ ಸಾಧಿಸಬಹುದು. ಆದರೆ ಈಗ ಕೊರೊನಾ ಎರಡನೆಯ ಅಲೆ ಶುರುವಾಗುತ್ತಿದೆ. ಇದನ್ನು ಕೇಳುವಾಗಲೇ ಭಯ ಹುಟ್ಟುತ್ತದೆ. ಆದರೆ ಲಾಕ್ಡೌನ್ ಇದಕ್ಕೆ ಸೂಕ್ತ ಪರಿಹಾರವಲ್ಲ. ಕಳೆದ ಬಾರಿಯಾದ ಲಾಕ್​ಡೌನ್​ನಿಂದ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೆ ಕೊರೊನಾ ತಡೆಗಟ್ಟಲು ಅಗತ್ಯವಿರುವ ಕೆಲವು ನಿಯಮಗಳನ್ನು ಕಠಿಣಗೊಳಿಸಬೇಕು. ಬಹು ಮುಖ್ಯವಾಗಿ ಕೊರೊನಾ ಸೊಂಕಿನ ಬಗ್ಗೆ ಜನರಿಗೆ ಇರುವ ಕೆಟ್ಟ ಮನಸ್ಥಿತಿಯನ್ನು ಬದಲಾಯಿಸಿ ಲಸಿಕೆ ಪಡೆಯುವಂತೆ ಮಾಡಬೇಕು ಎಂದು ಹೇಳಿದರು.

ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರ ಮೊರೆ ಹೋಗಿ ಬೇಕಾದ ಚಿಕಿತ್ಸೆ ಪಡೆದಾಗ ಸೋಂಕು ಹರಡವುದನ್ನು ತಡೆಗಟ್ಟಬಹುದು. ಆದರೆ ಸೊಂಕಿನ ಬಗ್ಗೆ ಬೇಜವಬ್ದಾರಿ ವರ್ತನೆ ತೋರಿದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಆರಂಭದ ಹಂತದಲ್ಲೇ ಜಾಗೃತಿ ವಹಿಸಬೇಕು. ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟ ಆರಂಭದ ಕಾಲದಲ್ಲಿ ವಾರ್ ರೂಮ್ ಮಾಡಿದ್ದೇವೆ. ಈ ವಾರ್ ರೂಮ್ ಕೊರೊನಾ ಸೋಂಕು ದೃಢಪಟ್ಟವರ ಬಗ್ಗೆ ಮೆಡಿಕಲ್ ಅಧಿಕಾರಿಗಳಿಗೆ ತಿಳಿಸುವ ಕೆಲಸವನ್ನು ಮಾಡುತ್ತದೆ. ಮಾಹಿತಿ ತಿಳಿದ ಬಳಿಕ ನಿಯಂತ್ರಣ ಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ ಎಂದು ಬಿಬಿಎಂಪಿ ವೈದ್ಯಾಧಿಕಾರಿಯಾದ ಡಾ.ಸುಶೀಲ್ ಕುಮಾರ್ ತಿಳಿಸಿದರು. ನಂತರ ಡಾ.ಗಿರಿದರ್ ಬಾಬು ಮತ್ತು ರಶ್ಮಿ ಪ್ರೀತಂಗೆ ಧ್ವನಿಗೂಡಿಸಿ ಅವರು ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಒತ್ತಿ ಹೇಳಿದರು.

ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಬಿ.ಎಸ್.ಯಡಿಯೂರಪ್ಪ ಸಭೆ ಈಗಾಗಲೇ ಮಹಾರಾಷ್ಟ್ರ, ನಾಗ್ಪುರ್ ಸೇರಿದಂತೆ ಹಲವು ಕಡೆಗಳಲ್ಲಿ ಪುನಃ ಲಾಕ್​ಡೌನ್ ಮಾಡಲಾಗಿದೆ. ರಾಜ್ಯದಲ್ಲೂ ಲಾಕ್​ಡೌನ್ ಅನಿವಾರ್ಯವೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆಯನ್ನು ನಡೆಸಿದ್ದರು. ನಡೆದ ಸಭೆಯಲ್ಲಿ ಲಾಕ್​ಡೌನ್​, ಸೀಲ್​ಡೌನ್ ಮತ್ತು ನೈಟ್ ಕರ್ಫ್ಯೂ ಅಗತ್ಯವಿಲ್ಲ ಎಂದು ನಿರ್ಧಾರವಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ತಿಳಿಸಿದ್ದರು. ಕಳೆದ 14 ದಿನಗಳಿಂದ ಪಾಸಿಟಿವ್ ಪ್ರಕರಣ ಹೆಚ್ಚಾಗಿವೆ. ಆದರೆ ಮರಣ ಪ್ರಮಾಣ ಕಡಿಮೆಯಿದೆ. ಯಾವುದೇ ಕಾರಣಕ್ಕೂ ಜನ ಮೈಮರೆಯಬಾರದು ಎಂದು ಮನವಿ ಮಾಡಿದ್ದರು. ಜೊತೆಗೆ ಮಾರ್ಚ್ 17 ರಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸುತ್ತಾರೆ. ಅದಾದ ಬಳಿಕ ಕಠಿಣ ನಿಯಮ ಜಾರಿಗೊಳಿಸುವ ಬಗ್ಗೆ ನಿರ್ಧಾರವಾಗುತ್ತದೆ ಎಂದು ತಿಳಿಸಿದ್ದರು.

ಇದನ್ನೂ ಓದಿ

ಹೊರದೇಶಗಳಿಗೆ ಎಷ್ಟೇ ಕೊರೊನಾ ಲಸಿಕೆ ನೀಡಿದರೂ ನಮ್ಮವರಿಗೆ ಖೋತಾ ಆಗದಂತೆ ಎಚ್ಚರಿಕೆ ವಹಿಸಲಾಗಿದೆ: ಡಾ.ಹರ್ಷವರ್ಧನ್​

ಕೊರೊನಾ ಸೋಂಕು ಭೀತಿ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ವೈರಮುಡಿ ಮಹೋತ್ಸವ ಸರಳ ಆಚರಣೆಗೆ ನಿರ್ಧಾರ

Published On - 6:53 pm, Tue, 16 March 21