ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ವಜಾ: ಹೆಚ್​ಡಿ ದೇವೇಗೌಡ ಪತ್ರ ವೈರಲ್

|

Updated on: Oct 18, 2023 | 12:34 PM

ಹೆಚ್​ಡಿ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿರುವ ಪತ್ರವೊಂದು ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದೀಗ ಸಿ.ಎಂ. ಇಬ್ರಾಹಿಂ ಅವರನ್ನು ಕರ್ನಾಟಕ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಎನ್ನುವ ದೇವೇಗೌಡ ಅವರ ಪತ್ರಿಕಾ ಪ್ರಕಟಣೆ ವೈರಲ್ ಆಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ವಜಾ: ಹೆಚ್​ಡಿ ದೇವೇಗೌಡ ಪತ್ರ ವೈರಲ್
ವೈರಲ್ ಪತ್ರ- ಸಿ.ಎಂ. ಇಬ್ರಾಹಿಂ
Follow us on

ಬೆಂಗಳೂರು, (ಅಕ್ಟೋಬರ್ 18): ಜೆಡಿಎಸ್ ಬಿಜೆಪಿ ಮೈತ್ರಿ (bjp jds alliance) ಆಗಿ ಒಂದು ತಿಂಗಳು ಕಳೆದರೂ ಜೆಡಿಎಸ್ (JDS) ಮನೆಯಲ್ಲಿ ಅಸಮಾಧಾನದ ಹೊಗೆ ಇನ್ನೂ ಕಡಿಮೆಯಾಗಿಲ್ಲ. ಬಿಜೆಪಿ ಜೊತೆಗಿನ ದೋಸ್ತಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ(C,M Ibrahim) ಸಿಡಿದೆದ್ದಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎನ್ನುವ ಪತ್ರಿಕಾ ಪ್ರಕಟಣೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದೀಗ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರನ್ನು ವಜಾಗೊಳಿಸಿ ಹೆಚ್​ಡಿ ದೇವೇಗೌಡ ಅವರ ಪ್ರಕಟಣೆ ಪತ್ರವೊಂದು ವೈರಲ್ ಆಗಿದೆ.

ಹೌದು….ಸಿ.ಎಂ. ಇಬ್ರಾಹಿಂ ಅವರನ್ನು ಜಾತ್ಯಾತೀತ ಜನತಾ ದಳ(ಕರ್ನಾಟಕ) ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ ಅವರ ಲೆಟರ್​ ಹೆಡ್ ಜೊತೆಗೆ ಅವರ ಸಹಿ ಇರುವ ಪತ್ರಿಕಾ ಪ್ರಕಟಣೆ ವೈರಲ್ ಆಗಿದೆ. ಕುಮಾರಸ್ವಾಮಿ ಹಾಗೂ ನಿಖಿಲ್​ ಕುಮಾರಸ್ವಾಮಿ ಅವರನ್ನು ಜೆಡಿಎಸ್​ನಿಂದ ಉಚ್ಛಾಟಿಸಲಾಗಿದೆ ಎಂದು ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿರುವ ಬೆನ್ನಲ್ಲೇ ಇದೀಗ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿರುವ ಪತ್ರ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಹೆಚ್​​ಡಿಕೆ, ನಿಖಿಲ್ ಉಚ್ಚಾಟನೆ ನಕಲಿ ಪತ್ರ ವೈರಲ್: ಜೆಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಸಿಎಂ ಇಬ್ರಾಹಿಂ

ಮೇಲ್ನೋಟಕ್ಕೆ ಇದೊಂದು ನಕಲಿ ಪತ್ರ ಎನ್ನುವುದು ಗೊತ್ತಾಗಿದೆ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಉಚ್ಛಾಟನೆ ಪತ್ರ ವೈರಲ್ ಮಾಡಿದ್ದಕ್ಕೆ ಇದೀಗ ಜೆಡಿಎಸ್​ ಕಾರ್ಯಕರ್ತರು ಇಬ್ರಾಹಿಂ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ ಎನ್ನುವ ನಕಲಿ ಪತ್ರವನ್ನು ಸೃಷ್ಟಿಸಿ ವೈರಲ್ ಮಾಡಿದ್ದಾರೆ.

ಇಬ್ರಾಹಿಂ ಪತ್ರ ವೈರಲ್

ಜೆಡಿಎಸ್ ಪಕ್ಷವು ದಶಕಗಳಿಂದ ಜಾತ್ಯಾತೀತ ಸಿದ್ದಾಂತವನ್ನು ಪಾಲಿಸುತ್ತಾ ಬಂದಿದೆ. ನಮ್ಮ ಪಕ್ಷದಲ್ಲಿ ಎಲ್ಲ ಜಾತಿ ಧರ್ಮಗಳ ನಾಯಕರು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದು, ಇತ್ತೀಚೆಗೆ ಜೆಡಿಎಸ್‌ ಪಕ್ಷದ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿಯಾಗಿರುವುದು ಕಂಡು ಬಂದಿದೆ. ತತ್ ಕ್ಷಣದಿಂದ ಹೆಚ್‌.ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಲು ಪಕ್ಷ ತೀರ್ಮಾನಿಸಿದೆ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಇದಕ್ಕೆ ಸಿಎಂ ಇಬ್ರಾಹಿಂ ನಕಲಿ ಸಹಿಯನ್ನು ಮುದ್ರಿಸಲಾಗಿತ್ತು.

ನಕಲಿ ಪತ್ರ ವೈರಲ್ ಆದ ಬೆನ್ನಲ್ಲೇ ಗಲಿಬಿಲಿಗೊಂಡ ಇಬ್ರಾಹಿಂ, ಈ ಸಂಬಂಧ ಜೆ.ಸಿ.ನಗರ ಪೊಲೀಸ್ ಠಾಣೆಗೆ ಸಿ.ಎಂ.ಇಬ್ರಾಹಿಂ ದೂರು ನೀಡಿದ್ದಾರೆ. ನಕಲಿ ಪತ್ರ ವೈರಲ್ ಆಗಿರುವುದರಿಂದ ನನಗೆ ಮತ್ತು ಪಕ್ಷಕ್ಕೆ ಮುಜುಗರ ಆಗಿದೆ. ಕಿಡಿಗೇಡಿಗಳು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ನಕಲಿ ಪತ್ರ ವೈರಲ್ ಆಗಿರುವುದರಿಂದ ನನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಆಗಿದೆ. ಈ ರೀತಿ ನಕಲಿ ಪತ್ರ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ ಸಿಎಂ ಇಬ್ರಾಹಿಂ ಪೊಲೀಸರಿಗೆ ಮನವಿ ಮಾಡಿದ್ದಾರೆ.

ನಿಜವಾಗಲೂ ಇಬ್ರಾಹಿಂ ಉಚ್ಛಾಟನೆಯಾಗ್ತಾರಾ?

ನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಪಕ್ಷದ ರಾಜ್ಯಾಧ್ಯಕ್ಷ ನಾನ್ಯಾಕೆ ಪಕ್ಷ ಬಿಟ್ಟು ಹೋಗಲಿ ಎಂದು ಗುಡುಗಿರುವ ಸಿ.ಎಂ.ಇಬ್ರಾಹಿಂ ವಿರುದ್ಧ ಕ್ರಮಕೈಗೊಳ್ಳಲು ದೇವೇಗೌಡ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವೆಂಬಂತೆ ಶೀಘ್ರದಲ್ಲೇ ಶಾಸಕಾಂಗ ಹಾಗೂ ಕೋರ್ ಕಮಿಟಿ ಸಭೆ ಕರೆದು ಈ ಬಗ್ಗೆ ಸಮಾಲೋಚನೆ ಮಾಡಲು ದೇವೇಗೌಡ ಮುಂದಾಗಿದ್ದಾರೆ. ಅಲ್ಲದೇ ಸಭೆಯಲ್ಲಿ ಇಬ್ರಾಹಿಂ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಚರ್ಚಿಸಿ ಬಳಿಕ ನಾಯಕರ ಅಭಿಪ್ರಾಯದ ಮೇರೆಗೆ ಪಕ್ಷ ವಿರೋಧ ಚಟುವಟಿಕೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕೆಲ ಶಾಸಕರು ಇಬ್ರಾಹಿಂ ಅವರಿಗೆ ನೋಟಿಸ್ ನೀಡುವಂತೆ ದೇವೇಗೌಡರಿಗೆ ಪಟ್ಟು ಹಿಡಿದಿದ್ದಾರೆ. ಆದ್ರೆ, ದೇವೇಗೌಡ ಅವರು ಆತುರದ ನಿರ್ಧಾರ ಬೇಡ ಎಂದು ಶಾಸಕರುಗಳಿಗೆ ಕಿವಿಮಾತು ಹೇಳಿದ್ದು, ಸಭೆ ಬಳಿಕ ಇಬ್ರಾಹಿಂಗೆ ನೋಟಿಸ್ ನೀಡಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ದಳಪತಿಗಳ ಕೋಟೆಯಲ್ಲಿ ಅಸಮಧಾನ ಸ್ಫೋಟಗೊಂಡಿದ್ದು, ಜೆಡಿಎಸ್​ ಎರಡು ಓಳಾಗುವ ಸಾಧ್ಯತೆಗಳಿವೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Wed, 18 October 23