
ಬೆಳಗಾವಿ, ಡಿ.12: ನಾವು ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡಬೇಕು ಎನ್ನುವ ಶಪತ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ(Siddaramaiah)ಅವರು ಕರೆ ನೀಡಿದರು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ತುಂಬಿದ ಹಿನ್ನೆಲೆ ಬೆಳಗಾವಿ(Belagavi)ಯ ಸುವರ್ಣಸೌಧದ ಮುಂಭಾಗದಲ್ಲಿ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಮಾತನಾಡಿದ ಅವರು ‘ಈ ಸುವರ್ಣ ಮಹೋತ್ಸವ ಕಾರ್ಯಕ್ರಮ ನ.1ರಿಂದ ಆರಂಭವಾಗಿ ನವೆಂಬರ್ 2ರಂದು ಹಂಪೆಯ ವಿರೂಪಾಕ್ಷ ದೇವಸ್ಥಾನದ ಬಳಿ ನಡೆದಿದೆ. ನವೆಂಬರ್ 3ರಂದು ಗದಗದಲ್ಲಿ ಸುವರ್ಣ ಸಂಭ್ರಮಾಚರಣೆ ನಡೆಯಿತು. ಇಂದು ಬೆಳಗಾವಿ ಸುವರ್ಣಸೌಧದ ಮುಂಭಾಗ ನಡೆಯುತ್ತಿದೆ ಎಂದರು.
‘ನಾವು ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡಬೇಕು ಎಂದು ಶಪತ ಮಾಡಬೇಕು. ಎಲ್ಲಿಯವರೆಗೆ ಕನ್ನಡದ ವಾತಾವರಣ ನಿರ್ಮಾಣ ಆಗೋದಿಲ್ಲವೋ, ಅಲ್ಲಿಯವರೆಗೆ ಕನ್ನಡ ಬೆಳೆಯಲು ಸಾಧ್ಯವಾಗುವುದಿಲ್ಲ. ಮೊದಲ ಕನ್ನಡ ಕಾವಲು ಸಮಿತಿ ಅಧ್ಯಕ್ಷ ನಾನೇ ಆಗಿದ್ದೆ. ಕರ್ನಾಟಕ, ಕನ್ನಡ ಕಾಯುವುದಕ್ಕೆ ಸಮಿತಿ ಯಾಕೆ ಬೇಕು ಎಂದು ಆಗ ಕೇಳಿದ್ದೆ. ಆಗ ಕನ್ನಡ ಎಲ್ಲ ಕಡೆ ಆಡಳಿತ ಭಾಷೆಯಾಗಿಲ್ಲ ಎಂದು ಹೇಳಿದ್ದರು. ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗಿದೆ. ನೆಲ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಜೊತೆಗೆ ಬಿ.ಎಲ್ ಶಂಕರ್ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದರು.
ನವೆಂಬರ್ 1 ಕ್ಕೆ ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಇಡೀ ವರ್ಷ ಆಚರಿಸಲು ತೀರ್ಮಾನ ಮಾಡಿದ್ದೀವಿ. ಇದು ಸಂತೋಷವನ್ನುಂಟು ಮಾಡುವ ಸಮಾರಂಭ. ಈ ವೇಳೆ ವಿಧಾನಸಭೆ, ಪರಿಷತ್ ಸಭಾಪತಿ, ಸಭಾಧ್ಯಕ್ಷರಾಗಿದ್ದವರನ್ನ ಗೌರವಿಸಲಾಗಿದೆ. ಇದು ಶ್ಲಾಘನೀಯವಾದ ಕೆಲಸ. ಇದಕ್ಕಾಗಿ ಸಭಾಧ್ಯಕ್ಷರ, ಸಭಾಪತಿಯವರಿಗೆ ವಂದಿಸಲು ಬಯಸುತ್ತೇನೆ. ಅವರಿಗೆಲ್ಲ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕ ಅಶೋಕ್ ಮಾತನಾಡಿ ‘ ಇದು ನಾವೆಲ್ಲರೂ ಸಂಭ್ರಮ ಪಡುವ ಸಮಯ, ರಾಜ್ಯದ ಮೂಲೆ ಮೂಲೆಯಲ್ಲೂ ಕರ್ನಾಟಕ ನಾಮಕರಣ ಆದ ಸಂದರ್ಭ. ಇತ್ತೀಚೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹೀಗೆ ಹಲವು ಕಡೆ ಭೇದ-ಭಾವದ ಮಾತು ಕೇಳಿ ಬರುತ್ತಿದೆ. 2 ವಿಧಾನಸೌಧ ಕಟ್ಟಿರಬಹುದು, ಆದರೆ ನಾವೆಲ್ಲರೂ ಒಂದೇ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಕರ್ನಾಟಕ ಸಂಭ್ರಮ ಕಾರ್ಯಕ್ರಮ ಜಿಲ್ಲಾ ಕೇಂದ್ರದವರೆಗೆ ತಲುಪಬೇಕು. ಈ ನಾಡಹಬ್ಬವನ್ನು ರಾಜ್ಯದ ಜನರು ಕೂಡ ಆಚರಣೆ ಮಾಡಬೇಕು ಎಂದರು.
ಬಳಿಕ ಮಾತನಾಡಿದ ಸ್ಪೀಕರ್ ಖಾದರ್ ‘ಸುವರ್ಣ ಸಂಭ್ರಮ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ವಿಶೇಷ ಸಭೆಯಲ್ಲಿ ಸಿಎಂ ಮುಂದೆ ಪ್ರಸ್ತಾಪಿಸಿದಾಗ ಅವರು ಒಪ್ಪಿಗೆ ಕೊಟ್ಟರು. ಸುವರ್ಣ ಸಂಭ್ರಮವನ್ನು ಐತಿಹಾಸಿಕ ಕಾರ್ಯಕ್ರಮವಾಗಬೇಕು. ದೇಶ, ವಿದೇಶದಿಂದ ಇಲ್ಲಿಗೆ ಬಂದು ವ್ಯವಹಾರ ಮಾಡಬೇಕು ಅಂತಿದ್ದಾರೆ. ರಾಜ್ಯಕ್ಕೆ ಬಂದು ವಿದ್ಯಾಭ್ಯಾಸ ಮಾಡಬೇಕೆಂದು ಕನಸು ಕಾಣುತ್ತಿದ್ದಾರೆ. ಹಿರಿಯರ ಮಾರ್ಗದರ್ಶನ ರೂಢಿಸಿಕೊಂಡು ಉಳಿಸಿಕೊಂಡು ಹೋಗಬೇಕು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಮಗೆ ಅವಕಾಶ ಸಿಕ್ಕಿದೆ. ನಾವು ಭವಿಷ್ಯದ ಜನಾಂಗ ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡಬೇಕಿದೆ. ಮುಂದಿನ 50 ವರ್ಷಗಳಿಗೆ ಬೇಕಾದ ಯೋಜನೆಯನ್ನು ರೂಪಿಸಬೇಕು ಎಂದು ಖಾದರ್ ಹೇಳಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ, ಸುವರ್ಣ ಸಂಭ್ರಮಾಚರಣೆ ಉತ್ತರ ಕರ್ನಾಟಕದಲ್ಲಿ ನಡೆಸುವ ಸೌಭಾಗ್ಯ ಸಿಕ್ಕಿದೆ ಎಂದು ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ‘ಹಿಂದಿನ ಸಭಾಪತಿ, ಸಭಾಧ್ಯಕ್ಷರನ್ನು ಜನರಿಗೆ ಪರಿಚಯಿಸಿದಂತಾಗುತ್ತದೆ. ಹಿಂದಿನವರನ್ನು ನೆನಪಿಸಿಕೊಳ್ಳೋಕೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. 1972 ರಿಂದ ಇಲ್ಲಿಯವರೆಗೆ 50 ವರ್ಷ ಪೂರೈಸಿದೆ. ಸುವರ್ಣಸೌಧಕ್ಕೆ ಲೈಟಿಂಗ್ಸ್ ವ್ಯವಸ್ಥೆ ಮಾಡಲು ಸಭಾಧ್ಯಕ್ಷರು ಹೇಳಿದ್ದರು. ಸುವರ್ಣಸೌಧ ಎಲ್ಲರಿಗೂ ಪರಿಚಯ ಆಗಬೇಕು, ಇತಿಹಾಸ ಗೊತ್ತಾಗಬೇಕು. ಶನಿವಾರ, ಭಾನುವಾರ, ಸರ್ಕಾರಿ ರಜಾದಿನ ಹಾಗೂ ರಾಷ್ಟ್ರೀಯ ಹಬ್ಬದ ದಿನದಂದು ಲೈಟಿಂಗ್ಸ್ ವ್ಯವಸ್ಥೆ ಇರಲಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಮತ್ತು ಸಭಾಧ್ಯಕ್ಷರುಗಳಾದ ಜಗದೀಶ್ ಶೆಟ್ಟರ್, ಬಿ.ಎಲ್ ಶಂಕರ್, ಬೊಪ್ಪಯ್ಯ, ವಿ.ಆರ್.ಸುದರ್ಶನ್, ಕೆ.ಬಿ. ಕೋಳಿವಾಡ, ಪ್ರೋ. ಬಿ.ಕೆ. ಚಂದ್ರಶೇಖರ್, ವಿಶ್ವೇಶ್ವರ ಹೆಗಡೆ ಕಾಗೇರಿ, ವೀರಣ್ಣ ಮತ್ತಿಗಟ್ಟಿ, ಡಿ.ಹೆಚ್. ಶಂಕರ್ ಮೂರ್ತಿ ಅವರಿಗೆ ರಾಜ್ಯಪಾಲರು, ಸಿಎಂ, ಸಭಾಪತಿ, ಸಭಾಧ್ಯಕ್ಷರು ಮತ್ತು ಸಚಿವರು ಸನ್ಮಾನ ಮಾಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Tue, 12 December 23