AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ಯಾಜ್ಯ ನಿರ್ವಹಣೆಯಲ್ಲಿ ಲೋಪ; ಕೋಲಾರದಲ್ಲಿ ಆರೋಗ್ಯ ಸಂಸ್ಥೆಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್! 

ಅದು ರಾಜ್ಯದ ಗಡಿ ಜಿಲ್ಲೆ, ಆಂಧ್ರ, ತಮಿಳುನಾಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಈ ಜಿಲ್ಲೆಯಲ್ಲಿ ಮೆಡಿಕಲ್ ಮಾಫಿಯಾ ಜೋರಾಗಿದೆ. ಅದರಲ್ಲೂ ಖಾಸಗಿ ಆಸ್ಪತ್ರೆಗಳು, ನಕಲಿ ವೈದ್ಯರುಗಳು, ನಕಲಿ ಕ್ಲಿನಿಕ್​​ಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಆರೋಗ್ಯ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅವುಗಳಿಗೆ ಬಿಗ್ ಶಾಕ್ ಕೊಟ್ಟಿದೆ.

ತ್ಯಾಜ್ಯ ನಿರ್ವಹಣೆಯಲ್ಲಿ ಲೋಪ; ಕೋಲಾರದಲ್ಲಿ ಆರೋಗ್ಯ ಸಂಸ್ಥೆಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್! 
ಕೋಲಾರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶಾಕ್​
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Dec 12, 2023 | 10:06 PM

Share
ಕೋಲಾರ, ಡಿ.12: ಜಿಲ್ಲೆಯು ಆಂಧ್ರ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಗಡಿ ಹಂಚಿಕೊಂಡಿರುವ ಜಿಲ್ಲೆಯಾಗಿದೆ. ಹಾಗಾಗಿ ಕೋಲಾರ(Kolar) ಜಿಲ್ಲೆಯ ಗಡಿ ಭಾಗ ಸೇರಿದಂತರ ಬಹುತೇಕ ಭಾಗಗಳಲ್ಲಿ ಮೆಡಿಕಲ್ ಮಾಫಿಯಾ (Medical Mafia) ಜೋರಾಗಿದೆ. ನಾಯಿ ಕೊಡೆಗಳಂತೆ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್​ಗಳು ಗಲ್ಲಿ ಗಲ್ಲಿಯಲ್ಲೂ ತಲೆ ಎತ್ತಿವೆ. ಈ ರೀತಿ ಖಾಸಗಿ ಮೆಡಿಕಲ್ ಸಂಸ್ಥೆಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಹರಸಾಹವೇ ಪಡುತ್ತಿದೆ. ಹೀಗಿರುವಾಗ ನ್ಯಾಷನಲ್ ಗ್ರೀನ್ ಟ್ರಿಬುನಲ್(National Green Tribunal) ​ನವರು ಕೋಲಾರ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ಪರಿಶೀಲನೆ ನಡೆಸಿದ್ದಾರೆ. ಅದರನ್ವಯ ಆರೋಗ್ಯ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೋಲಾರ ಜಿಲ್ಲೆಯಲ್ಲಿ ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಬಿಗ್ ಶಾಕ್ ನೀಡಿವೆ.

515 ಸಂಸ್ಥೆಗಳಿಗೆ ದಂಡ

ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆ ತೆರೆಯಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು. ನಂತರ ಆಸ್ಪತ್ರೆ ಅಥವಾ ಕ್ಲಿನಿಕ್​ನಲ್ಲಿ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು ಎನ್ನುವ ನಿಯಮವಿದೆ. ಅದರಂತೆ ಕೋಲಾರ ಜಿಲ್ಲೆಯಲ್ಲಿ ಸುಮಾರು 730 ಸಂಸ್ಥೆಗಳು ಅನುಮತಿ ಪಡೆದಿದ್ದಾರೆ. ಈ ಪೈಕಿ ಕೋಲಾರ ಜಿಲ್ಲೆಯಲ್ಲಿ ಬಯೋ ಮೆಡಿಕಲ್ ವೇಸ್ಟ್​ನ್ನು ವಿಲೇವಾರಿ ಮಾಡಲು ಇರುವ ಅಧಿಕೃತ ಸಂಸ್ಥೆ ಮೀರಾ ಎನ್ವಿರಾಟೆಕ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ಅದಾದ ನಂತರ ಪ್ರತಿನಿತ್ಯ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯವನ್ನು ಅವರಿಗೆ ನೀಡಿ, ಅದನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು. ಜೊತೆಗೆ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಹೊಂದಿರಬೇಕು. ಅದರೆ ಜಿಲ್ಲೆಯ ಸುಮಾರು 515 ಆಸ್ಪತ್ರೆ ಹಾಗೂ ಕ್ಲಿನಿಕ್​ಗಳು ಈ ನಿಯಮವನ್ನು ಪಾಲಿಸದೇ ಇರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ 515 ಸಂಸ್ಥೆಗಳಿಗೆ ನ್ಯಾಷನಲ್ ಗ್ರೀನ್ ಟ್ರಿಬುನಲ್ ನವರು ಸುಮಾರು 11.13 ಕೋಟಿ ರೂಪಾಯಿ ದಂಡ ವಿಧಿಸಿದೆ.
ಇನ್ನು ಕೋಲಾರ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ಆಸ್ಪತ್ರೆಗಳು ಹಾಗೂ ಕ್ಲಿನಿಕ್​ಗಳನ್ನು ತೆರೆಯಲಾಗಿದೆ. ಎಲ್ಲರೂ ಕೂಡ ಕೆಪಿಎಂಇ ಆ್ಯಕ್ಟ್ ಪ್ರಕಾರ ಕಾರ್ಯ ನಿರ್ವಹಿಸಬೇಕು. ಆದರೆ, ಗ್ರೀನ್ ಟ್ರಿಬುನಲ್ ಪರಿಶೀಲನೆ ಪ್ರಕಾರವಾಗಿ ಸುಮಾರು ಜಿಲ್ಲೆಯ 515 ಖಾಸಗಿ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವ ಮೀರಾ ಎನ್ವಿರಾಟೆಕ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವರಿಗೆ ತ್ಯಾಜ್ಯವನ್ನು ನೀಡಿಲ್ಲ. ಅಲ್ಲದೆ ನಿಯಮಾನುಸಾರ ವಿಲೇವಾರಿ ಮಾಡದೆ ಕಾನೂನು ಉಲ್ಲಂಘನೆ ಮಾಡಲಾಗಿದೆ ಎನ್ನುವ ಕಾರಣಕ್ಕೆ ಒಂದು ವರ್ಷದ ಅವಧಿಗೆ ದಂಡ ವಿಧಿಸಿದೆ.

11.13 ಕೋಟಿ ರೂ. ದಂಡ

ಅಂದರೆ ಪ್ರತಿ ಖಾಸಗಿ ಆರೋಗ್ಯ ಸಂಸ್ಥೆಗೆ ಒಂದು ದಿನಕ್ಕೆ 1200 ರೂಪಾಯಿಯಂತೆ 365 ದಿನಕ್ಕೆ 4.38 ಲಕ್ಷ ರೂಪಾಯಿಯಂತೆ ಸದ್ಯ 11.13 ಕೋಟಿ ರೂ. ದಂಡ ವಿಧಿಸಿದೆ.ಈ ಪೈಕಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆರೋಗ್ಯ ಇಲಾಖೆ ಬಳಿ ನೊಂದಣಿಯಾಗಿರುವ ಪಟ್ಟಿಯನ್ನು ಹಿಡಿದು ಪರಿಶೀಲನೆ ನಡೆಸಲಾಗುತ್ತಿದ್ದು, ಈ ಪೈಕಿ ಕೆಲವು ಆಸ್ಪತ್ರೆಗಳು ಮುಚ್ಚಲಾಗಿದೆ. ಕೆಲವು ಅನುಮತಿ ಪಡೆದು ಇನ್ನೂ ಆಸ್ಪತ್ರೆಗಳನ್ನು ತೆರೆದಿಲ್ಲ. ಜೊತೆಗೆ ಕೆಲವೆಡೆ ಬಯೋ ಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾಡುವ ಮೀರಾ ಎನ್ವಿರಾಟೆಕ್ ನವರೇ ಈ ಖಾಸಗಿ ಆರೋಗ್ಯ ಸಂಸ್ಥೆಗಳಿಂದ ತ್ಯಾಜ್ಯ ಸಂಗ್ರಹಿಸದೆ ನಿರ್ಲ್ಯಕ್ಷ್ಯ ಮಾಡಿರುವ ಸಾಧ್ಯತೆಗಳಿದ್ದು, ಈ ಎಲ್ಲದರ ಆಧಾರದ ಮೇಲೆ 254 ಸಂಸ್ಥೆಗಳಿಗೆ ನೋಟೀಸ್ ನೀಡಲಾಗಿದೆ.
ಅವರಿಂದ ಉತ್ತರ ಬಂದ ನಂತರ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಷ್ಟು ದಿನ ಕೋಲಾರ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ, ಖಾಲಿ ಜಾಗಗಳಲ್ಲಿ ಮೆಡಿಕಲ್ ತ್ಯಾಜ್ಯ ರಾಶಿ ರಾಶಿಯಾಗಿ ಬಿದ್ದಿರುತ್ತಿತ್ತು, ಆದರೆ, ಸದ್ಯ ನ್ಯಾಷನಲ್ ಗ್ರೀನ್ ಟ್ರಿಬುನಲ್ ಸದ್ಯ ಖಾಸಗಿ ಮೆಡಿಕಲ್ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದ್ದು, ಇನ್ಮುಂದೆಯಾದ್ರು ಇದು ನಿಯಂತ್ರಣಕ್ಕೆ ಬರುತ್ತಾ ಎನ್ನುವುದನ್ನು ನೋಡಬೇಕಿದೆ. ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ನ್ಯಾಷನಲ್ ಗ್ರೀನ್ ಟ್ರಿಬುನಲ್ ನವರು ಮಾಲಿನ್ಯ ನಿಯಂತ್ರಣ ಮಂಡಳಿ ಮುಖಾಂತರ ಬಿಸಿ ಮುಟ್ಟಿಸಿದ್ದು, ಇನ್ಮೇಲಾದರೂ ಈ ಖಾಸಗಿ ಆರೋಗ್ಯ ಸಂಸ್ಥೆಗಳು ನಿಯಮಾನುಸಾರ ಕಾರ್ಯ ನಿರ್ವಹಿಸುತ್ತವಾ ಅನ್ನೋದನ್ನ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ