- Kannada News Photo gallery Chamarajanagar Santhemarahalli government Hospital gets recognition for its unique facilities
ಸಂತೇಮರಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆ ಹೇಗಿದೆ ಗೊತ್ತಾ!? ಯಾವುದೋ ಖಾಸಗಿ ಆಸ್ಪತ್ರೆ ಎಂದು ಆಶ್ಚರ್ಯ ಪಡಬೇಕು, ಹಾಗಿದೆ!
ಸರ್ಕಾರಿ ಆಸ್ಪತ್ರೆ ಎಂದರೆ ಜನರಲ್ಲಿ ಅಸಡ್ಡೆ ಭಾವನೆ. ಉತ್ತಮ ವಾತಾವರಣ ಇರೋಲ್ಲ, ಉತ್ತಮ ಚಿಕಿತ್ಸೆ ಬೇಕು ಅಂದ್ರೆ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ಮನೋಭಾವ ಮನೆ ಮಾಡಿದೆ. ಆದರೆ ಇಲ್ಲೊಂದು ಸರ್ಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತಿದೆ. ಇಲ್ಲಿ ದೊರೆಯುವ ಗುಣಮಟ್ಟದ ಸೇವೆಗಾಗಿ ಈ ಆಸ್ಪತ್ರೆಗೆ ರಾಷ್ಟ್ರೀಯ ಮನ್ನಣೆಯೂ ದೊರೆತಿದೆ.
Updated on: Jul 31, 2023 | 1:06 PM

ಸರ್ಕಾರಿ ಆಸ್ಪತ್ರೆ ಎಂದರೆ ಜನರಲ್ಲಿ ಒಂಥರಾ ಅಸಡ್ಡೆ ಭಾವನೆ. ಉತ್ತಮ ವಾತಾವರಣ ಇರೋಲ್ಲ, ಉತ್ತಮ ಚಿಕಿತ್ಸೆ ಬೇಕು ಅಂದ್ರೆ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ಮನೋಭಾವ ಮನೆ ಮಾಡಿಬಿಟ್ಡಿದೆ. ಆದರೆ ಇಲ್ಲೊಂದು ಸರ್ಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತಿದೆ. ಇಲ್ಲಿ ದೊರೆಯುವ ಗುಣಮಟ್ಟದ ಸೇವೆಗಾಗಿ ಈ ಆಸ್ಪತ್ರೆಗೆ ರಾಷ್ಟ್ರೀಯ ಮನ್ನಣೆಯೂ ದೊರೆತಿದೆ.

ಇದು ಯಾವುದೋ ಖಾಸಗಿ ಆಸ್ಪತ್ರೆ ಇರಬೇಕು ಎಂದೆನಿಸಿದರೆ ನಿಮಗೆ ಆಶ್ಚರ್ಯವೇನೂ ಇಲ್ಲ ಬಿಡಿ - ಉತ್ತಮ ವಾತಾವರಣ, ಪುಸ್ತಕ ಓದುತ್ತಾ ಸಮಯ ಕಳೆಯಲು ಗ್ರಂಥಾಲಯ, ಗಿಡಮೂಲಿಕೆಗಳ ಉದ್ಯಾನವನ, ನೋಡಿದರೆ ಒಂದಷ್ಟು ಹೊತ್ತು ಮಲಗಿ ವಿಶ್ರಾಂತಿ ಪಡೆಯಬೇಕು ಎನಿಸುವ ಉತ್ತಮ ಹಾಸಿಗೆ ಸೌಲಭ್ಯ, ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ, ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ವೈದ್ಯರು ಹಾಗು ಸಿಬ್ಬಂದಿ ತೋರುವ ಕಾಳಜಿ, ಆರೈಕೆ.. ಹೀಗೆ ಬಣ್ಣನೆ ಮಾಡುತ್ತಾ ಹೋದರೆ ಅತಿಶಯೋಕ್ತಿ ಅನಿಸಬಹುದು. ಆದರೆ ಈ ಎಲ್ಲಾ ಪ್ರಶಂಸೆಗೆ ಪಾತ್ರವಾಗಿದೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ.

ಒಬ್ಬರು ಸ್ತ್ರೀ ರೋಗ ತಜ್ಞೆ, ಇಬ್ಬರು ಅನಸ್ತೇಷಿಯಾ ತಜ್ಞರು, ಇಬ್ಬರು ಮಕ್ಕಳ ತಜ್ಞರು, ಒಬ್ಬರು ಸೀನಿಯರ್ ಮೆಡಿಕಲ್ ಆಫೀಸರ್, ದಂತ ವೈದ್ಯರೂ ಒಬ್ಬರು, ಒಬ್ಬರು ಅಯುರ್ವೇದ ವೈದ್ಯರು ಹಾಗೂ 18 ಮಂದಿ ಶುಶ್ರೂಷಕರು ಇಲ್ಲಿ ಭರ್ಜರಿಯಾಗಿ/ ಭರ್ತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

100 ಹಾಸಿಗೆ ಸೌಲಭ್ಯವುಳ್ಳ ಈ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಉತ್ತಮ ಸೌಲಭ್ಯ ಹಾಗು ಸೇವೆ ರೋಗಿಗಳ ಪ್ರಶಂಸೆಗೆ ಪಾತ್ರವಾಗಿದೆ. ಸಂತೇಮರಹಳ್ಳಿ ಸುತ್ತಮುತ್ತಲಿನ ಜನರಷ್ಟೇ ಅಲ್ಲ, ಅಕ್ಕಪಕ್ಕದ ತಾಲೂಕುಗಳಿಂದಲೂ ಇಲ್ಲಿಗೆ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ.

ಈ ಸರ್ಕಾರಿ ಆಸ್ಪತ್ರೆಯಲ್ಲಿನ ವಿವಿಧ ವಿಭಾಗಗಳಲ್ಲಿ ಜನರಿಗೆ ನೀಡುವ ಗುಣಮಟ್ಟದ ಸೇವೆಗೆ ರಾಷ್ಟ್ರೀಯ ಮನ್ನಣೆ ದೊರೆತಿದೆ. ತುರ್ತುಚಿಕಿತ್ಸಾ ವಿಭಾಗ, ಹೊರರೋಗಿಗಳ ವಿಭಾಗ, ಪ್ರಯೋಗಾಲಯ, ರೇಡಿಯಾಲಜಿ, ಔಷಧಿಯ ವಿಭಾಗ ಸೇರಿದಂತೆ 12 ವಿಭಾಗಗಳ ಕುರಿತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರವು ಮೌಲ್ಯಮಾಪನ ಮಾಡಿದ್ದು 87.06 ಅಂಕ ನೀಡಿದೆ.

ಇಡೀ ರಾಜ್ಯದಲ್ಲಿ ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾತ್ರ ಈ ಮನ್ನಣೆ ದೊರೆತಿರುವುದು ವಿಶೇಷವಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥೆ ಡಾ. ರೇಣುಕಾದೇವಿ ಸಂಭ್ರಮಿಸಿದ್ದಾರೆ.

ಒಟ್ಟಾರೆ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ರೋಗಿಗಳಿಗೆ ಈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಇದೇ ರೀತಿಯ ಚಿಕಿತ್ಸೆ, ಸೌಲಭ್ಯ, ಸೇವೆ ಇತರ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಿಗುವಂತಾಗಬೇಕು ಎಂಬುದೇ ಎಲ್ಲರ ಆಶಯ ಅಲ್ಲವಾ!?



