ಬೆಂಗಳೂರು, ಸೆಪ್ಟೆಂಬರ್ 29: ಕಾವೇರಿ ನೀರನ್ನು (Cauvery Water) ತಮಿಳುನಾಡಿಗೆ ಬಿಡಬಾರದು ಎಂಬುದು ನಮ್ಮ ನಿಲುವು. ಆದರೆ, ಅಂತಹ ನಿರ್ಧಾರ ಕೈಗೊಂಡರೆ ಏನಾಗಬಹುದೆಂಬ ಬಗ್ಗೆ ಚರ್ಚೆ ಮಾಡುತ್ತೇವೆ. ನೀರು ಬಿಡದಿದ್ದರೆ, ಜಲಾಶಯಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಬಹುದೇ? ನ್ಯಾಯಾಂಗ ನಿಂದನೆ ಆಗಬಹುದೇ? ಸರ್ಕಾರವನ್ನೇ ವಜಾ ಮಾಡಬಹುದೇ? ಈ ಎಲ್ಲ ಪರಿಣಾಮಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕಚೇರಿಯು ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ಮೂಲಕ ತಿಳಿಸಿದೆ. ತಮಿಳುನಾಡಿಗೆ ಪ್ರತಿ ದಿನ 3000 ಕ್ಯೂಸೆಕ್ ನೀರು ಬಿಡಬೇಕೆಂಬ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಅವರು, ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ಗಳೊಂದಿಗೆ ಸಭೆ ಕರೆಯಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆಗಸ್ಟ್ನಲ್ಲಿ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಉಂಟಾಯಿತು. ಈ ತಿಂಗಳೂ ಕೂಡ ಮಳೆ ಅಷ್ಟೇನೂ ಆಗಿಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿದೆ. ನಾವು ಇಲ್ಲಿಯ ವರೆಗೆ 123 ಟಿಎಂಸಿ ನೀರು ಬಿಡಬೇಕಾಗಿತ್ತು. ಈ ವರೆಗೆ 43 ಟಿಎಂಸಿ ನೀರು ಹೋಗಿದೆ. ಈಗ ನಮ್ಮ ರೈತರಿಗೂ ನೀರಿಲ್ಲ, ಕುಡಿಯಲು ಬೇಕಾದಷ್ಟು ಕೂಡಾ ನೀರಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು (CWMA) ಅದೇಶಿಸಿರುವ ಹಿನ್ನೆಲೆಯಲ್ಲಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ಮುಖ್ಯಮಂತ್ರಿ @siddaramaiah ಅವರು ಮಾನ್ಯ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ… pic.twitter.com/RENXokkFQO
— CM of Karnataka (@CMofKarnataka) September 29, 2023
ಕಾವೇರಿ ಪ್ರಾಧಿಕಾರ ಪ್ರತಿ ಬಾರಿ ಸಭೆ ಕರೆದಾಗಲೂ ನಮ್ಮ ಅಧಿಕಾರಿಗಳು ಮಳೆಯ ಕೊರತೆ, ಜಲಾಶಯಗಳ ನೀರಿನ ಸಂಗ್ರಹ ಇತ್ಯಾದಿ ವಿವರಗಳನ್ನು ಮುಂದಿಟ್ಟು ನಮ್ಮ ವಾದ ಮಂಡಿಸಿದ್ದಾರೆ. ಇದರ ಹೊರತಾಗಿಯೂ ನೀಡಿರುವ ಆದೇಶವನ್ನು ವಿರೋಧಿಸುತ್ತಾ ಬಂದಿದ್ದೇವೆ. ನೀರಿಲ್ಲ ಎಂದೇ ಹೇಳಿದ್ದೇವೆ. ಸುಪ್ರೀಂಕೋರ್ಟ್ ಮುಂದೆಯೂ ಅರ್ಜಿ ಹಾಕಿ ನಮಗೆ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ನೀರಾವರಿಗೆ, 30 ಟಿಎಂಸಿ ಕುಡಿಯುವ ನೀರಿಗೆ ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ ಎಂದು ಹೇಳಿದ್ದೇವೆ. ಒಟ್ಟು 106 ಟಿಎಂಸಿ ನೀರಿನ ಅವಶ್ಯಕತೆ ರಾಜ್ಯಕ್ಕೆ ಇದೆ. ಆದರೆ ನಮ್ಮ ಬಳಿ ಇರುವುದು ಕೇವಲ 50 ಟಿಎಂಸಿ ನೀರು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ವಾದಕ್ಕಿಲ್ಲ ಕಿಂಚಿತ್ತೂ ಕಿಮ್ಮತ್ತು: ತಮಿಳುನಾಡಿಗೆ ಪ್ರತಿ ದಿನ 3000 ಕ್ಯೂಸೆಕ್ ನೀರು ಹರಿಸುವಂತೆ ಮತ್ತೆ ಆದೇಶ
ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು (CWMA) ಅದೇಶಿಸಿರುವ ಹಿನ್ನೆಲೆಯಲ್ಲಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಗಳ ಜತೆ ಸುದೀರ್ಘ ಚರ್ಚೆ ನಡೆಸಿದರು. ಸಭೆಯಲ್ಲಿ ನ್ಯಾಯಮೂರ್ತಿಗಳಾದ ಎಂ.ಎನ್ ವೆಂಕಟಾಚಲಯ್ಯ, ಶಿವರಾಜ ಪಾಟೀಲ್, ವಿ. ಗೋಪಾಲಗೌಡ, ಆರ್.ವಿ ರವೀಂದ್ರನ್, ಪಿ. ವಿಶ್ವನಾಥಶೆಟ್ಟಿ, ಎ.ಎನ್ ವೇಣುಗೋಪಾಲಗೌಡ, ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರು ಆದ ಡಿ.ಕೆ.ಶಿವಕುಮಾರ್, ಕಾನೂನು ಸಚಿವರಾದ ಸಚಿವ ಎಚ್. ಕೆ ಪಾಟೀಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ರಾಜಕೀಯ ಸಲಹೆಗಾರರಾದ ನಸೀರ್ ಅಹ್ಮದ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮಾಜಿ ಅಡ್ವೋಕೇಟ್ ಜನರಲ್ ಗಳಾದ ಬಿ.ವಿ ಆಚಾರ್ಯ, ಮಧುಸೂದನ್ ನಾಯಕ್, ವಿಜಯಶಂಕರ್, ಉದಯ್ ಹೊಳ್ಳ, ಪ್ರೊ ರವಿವರ್ಮಕುಮಾರ್, ಪ್ರಭುಲಿಂಗ ನಾವದಗಿ ಹಾಗೂ ಕಾನೂನು, ಜಲ ಸಂಪನ್ಮೂಲ ಇಲಾಖೆ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ