ಕರ್ನಾಟಕದ ವಾದಕ್ಕಿಲ್ಲ ಕಿಂಚಿತ್ತೂ ಕಿಮ್ಮತ್ತು: ತಮಿಳುನಾಡಿಗೆ ಪ್ರತಿ ದಿನ 3000 ಕ್ಯೂಸೆಕ್ ನೀರು ಹರಿಸುವಂತೆ ಮತ್ತೆ ಆದೇಶ
Setback to Karnataka; ರಾಜ್ಯದಲ್ಲಿ ನೀರು ಕೊರತೆ ಇರುವುದನ್ನು ಸಿಡಬ್ಲ್ಯುಎಂಎ ಗಮನಿಸಬೇಕು. ರಾಜ್ಯದ ರೈತರು, ಜನರ ಆಕ್ರೋಶ ಹೆಚ್ಚಾಗಿದ್ದು ಸರಣಿ ಬಂದ್ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನೀರು ಹರಿಸುವುದು ಅಸಾಧ್ಯವೆಂದು ಕರ್ನಾಟಕ ಪರ ಅಧಿಕಾರಿಗಳು ವಾದ ಮಂಡಿಸಿದರು. ಆದರೆ, ಇದನ್ನು ಪ್ರಾಧಿಕಾರ ಪುರಸ್ಕರಿಸಿಲ್ಲ.
ನವದೆಹಲಿ, ಸೆಪ್ಟೆಂಬರ್ 29: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಶುಕ್ರವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲೂ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದೆ. ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಮಂಗಳವಾರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸಿಡಬ್ಲ್ಯುಎಂಎ ಸೂಚನೆ ನೀಡಿದೆ. ಇದರೊಂದಿಗೆ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ, ಕಾವೇರಿ ನೀರು ಬಿಡುಗಡೆ (Cauvery Dispute) ಖಂಡಿಸಿ ಕರ್ನಾಟಕ ಬಂದ್ (Karnataka Bandh) ನಡೆಯುತ್ತಿರುವ ಮಧ್ಯೆಯೇ ಈ ಆದೇಶ ಹೊರಬಿದ್ದಿದೆ.
ಕರ್ನಾಟಕದ ವಾದವೇನು?
ಕರ್ನಾಟಕದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ 53 ರಷ್ಟು ಮಳೆ ಕೊರತೆ ಇದೆ. ರಾಜ್ಯ ಸರ್ಕಾರವು 161 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. 34 ತಾಲೂಕುಗಳು ಮಧ್ಯಮ ಬರ ಪೀಡಿತವೆಂದು ಸರ್ಕಾರ ಘೋಷಿಸಿದೆ. 32 ತೀವ್ರ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಕರ್ನಾಟಕ ತನ್ನ ಜಲಾಶಯಗಳಿಂದ ನೀರು ಹರಿಸುವ ಸ್ಥಿತಿಯಲ್ಲಿಲ್ಲ. ಕರ್ನಾಟಕ ಸರ್ಕಾರ ಈಗಾಗಲೇ ನಿಮ್ಮ ಎಲ್ಲಾ ಆದೇಶ ಪಾಲಿಸಿದೆ. ರಾಜ್ಯದಲ್ಲಿ ನೀರು ಕೊರತೆ ಇರುವುದನ್ನು ಸಿಡಬ್ಲ್ಯುಎಂಎ ಗಮನಿಸಬೇಕು. ರಾಜ್ಯದ ರೈತರು, ಜನರ ಆಕ್ರೋಶ ಹೆಚ್ಚಾಗಿದ್ದು ಸರಣಿ ಬಂದ್ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನೀರು ಹರಿಸುವುದು ಅಸಾಧ್ಯವೆಂದು ಕರ್ನಾಟಕ ಪರ ಅಧಿಕಾರಿಗಳು ವಾದ ಮಂಡಿಸಿದರು.
ತಮಿಳುನಾಡು ಮಂಡಿಸಿದ ವಾದವೇನು?
ಜೂನ್ನಿಂದ ಸೆಪ್ಟೆಂಬರ್ವರೆಗೆ ಕರ್ನಾಟಕ 123 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಈವರೆಗೆ ಕೇವಲ 40 ಟಿಎಂಸಿ ನೀರು ಮಾತ್ರ ಹರಿಸಿದೆ. ಬಾಕಿ 83 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸೂಚಿಸಬೇಕು ಎಂದು ಸಿಡಬ್ಲ್ಯುಎಂಎ ಸಭೆಯಲ್ಲಿ ತಮಿಳುನಾಡು ಸರ್ಕಾರದ ಪರ ಅಧಿಕಾರಿಗಳು ವಾದ ಮಂಡನೆ ಮಾಡಿದರು.
ಅಕ್ಟೋಬರ್ನಲ್ಲಿ ತಮಿಳುನಾಡಿಗೆ 22 ಟಿಎಂಸಿ ನೀರು ಹರಿಸಬೇಕು. ಇದರ ಜೊತೆಗೆ ಸೆಪ್ಟೆಂಬರ್ನಲ್ಲಿ ಬಾಕಿ 7 ಟಿಎಂಸಿ ನೀರು ಹರಿಸಬೇಕು. ನೀರಿಗಾಗಿ ತಮಿಳುನಾಡಿನಲ್ಲೂ ರೈತರು ಹೋರಾಟ ಆರಂಭಿಸಿದ್ದಾರೆ. ಇದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಗಮನಿಸಬೇಕು. ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸಿನ ಅನ್ವಯ 3000 ಕ್ಯೂಸೆಕ್ ನೀರು ಸಾಕಾಗುವುದಿಲ್ಲ. ಪ್ರತಿ ದಿನ 12,500 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಬೇಕು ಎಂದು ತಮಿಳುನಾಡು ಸರ್ಕಾರ ವಾದ ಮಂಡನೆ ಮಾಡಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ತಪ್ಪದ ಸಂಕಷ್ಟ: ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಆರ್ಸಿ ಆದೇಶ
ಏರು ಧ್ವನಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ ರಾಕೇಶ್ ಸಿಂಗ್
ಬಾಕಿ ಉಳಿಸಿಕೊಂಡಿರುವ 12 TMC ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಪಟ್ಟು ಹಿಡಿಯಿತು. ಇದಕ್ಕೆ ಎಸಿಎಸ್ ರಾಕೇಶ್ ಸಿಂಗ್ ಏರುಧ್ವನಿಯಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾವೇರಿ ಕೊಳ್ಳದ ಡ್ಯಾಮ್ಗಳಲ್ಲಿ ನೀರೇ ಇಲ್ಲದಿರುವುದರಿಂದ ನೀರು ಬಿಡುವುದು ಹೇಗೆ ಸಾಧ್ಯ? ತಮಿಳುನಾಡಿಗೆ ಮತ್ತೆ 15 ದಿನ 3000 ಕ್ಯೂಸೆಕ್ ನೀರು ಹರಿಸಲು ಸಾಧ್ಯವಿಲ್ಲ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ಬೆಂಗಳೂರಿನಲ್ಲಿ ಮಂಗಳವಾರ ಬಂದ್ ಮಾಡಲಾಗಿತ್ತು. ಅದೇ ದಿನವೇ ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಕಚೇರಿಯಲ್ಲಿ, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪರಿಣಾಮವಾಗಿ ವಿವಿಧ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಇಂದು (ಸೆಪ್ಟೆಂಬರ್ 29) ಬಂದ್ ಆಚರಿಸಲಾಗುತ್ತಿದೆ.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:57 pm, Fri, 29 September 23